ಬೂಸ್ಟರ್ ಡೋಸ್ ಲಸಿಕೆ ಅಗತ್ಯವಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ : ಐಸಿಎಂಆರ್ ಮುಖ್ಯಸ್ಥರ ಹೇಳಿಕೆ
ಬೂಸ್ಟರ್ ಡೋಸ್ ಲಸಿಕೆಯ ಕುರಿತು ಐಸಿಎಂಆರ್ ಮಹಾ ನಿರ್ದೇಶಕ ಡಾ.ಬಲರಾಮ್ ಭಾರ್ಗವ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
ಕೊರೋನ ವೈರಸ್ ಸಾಂಕ್ರಾಮಿಕದಿಂದ (ಕೋವಿಡ್ -19) ಮತ್ತಷ್ಟು ರಕ್ಷಣೆಗಾಗಿ ಬೂಸ್ಟರ್ ಡೋಸ್ ಲಸಿಕೆ ಅಗತ್ಯವಿದೆ ಎಂದು ಸಾಧಿಸಲು ಇದುವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ ಹೇಳಿದ್ದಾರೆ. ಪಿಟಿಐನೊಂದಿಗೆ ಮಾತನಾಡಿದ ಅವರು, “18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ಲಸಿಕೆಯ ಎರಡನೇ ಡೋಸ್ ಅನ್ನು ನೀಡುವುದು ಮತ್ತು ಭಾರತ ಮಾತ್ರವಲ್ಲದೆ ಇಡೀ ಪ್ರಪಂಚ ಲಸಿಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ” ಎಂದು ಹೇಳಿದ್ದಾರೆ. ಬೂಸ್ಟರ್ ಡೋಸ್, ಮಕ್ಕಳಿಗೆ ಲಸಿಕೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಕೇಂದ್ರದ ಉನ್ನತ ತಜ್ಞರ ಸಮಿತಿಯಾದ ಎನ್‌ಟಿಎಜಿಐ ನವೆಂಬರ್ ಕೊನೆಯ ವಾರದಲ್ಲಿ ಸಭೆ ನಡೆಸುವ ಸಾಧ್ಯತೆಯಿದೆ ಎಂಬ ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ಬಲರಾಮ್ ಭಾರ್ಗವ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವರು ಬೂಸ್ಟರ್ ಡೋಸ್ಗಳಿಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ‘‘ಇಂತಹ ವಿಚಾರದಲ್ಲಿ ಕೇಂದ್ರ ನೇರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಬೂಸ್ಟರ್ ಲಸಿಕೆ ನೀಡಬೇಕು ಎಂದು ಐಸಿಎಂಆರ್ ಹೇಳಿದರೆ, ನಂತರ ಅದನ್ನು ಪರಿಗಣಿಸುತ್ತೇವೆ. ಪ್ರಸ್ತುತದ ಗುರಿ ದೇಶದ ಎಲ್ಲರಿಗೂ ಲಸಿಕೆ ನೀಡುವುದಾಗಿದೆ. ಅದು ಮುಗಿದ ನಂತರ, ಬೂಸ್ಟರ್‌ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಮ್ಮಲ್ಲಿ ಲಸಿಕೆ ಸಾಕಷ್ಟು ದಾಸ್ತಾನಿದೆ’’ ಎಂದು ಹೇಳಿದ್ದರು.
ಅಧಿಕೃತ ಮಾಹಿತಿಯ ಪ್ರಕಾರ, ದೇಶದ ಲಸಿಕೆಗೆ ಅರ್ಹವಾಗಿರುವ ಜನರಲ್ಲಿ ಸುಮಾರು 82 ಪ್ರತಿಶತದಷ್ಟು ಜನರು ತಮ್ಮ ಮೊದಲ ಕೋವಿಡ್ -19 ಡೋಸ್ ಪಡೆದುಕೊಂಡಿದ್ದಾರೆ. ಅದರಲ್ಲಿ ಸುಮಾರು 43 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ತೆಗೆದುಕೊಂಡು, ಪೂರ್ಣಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ದೇಶದಲ್ಲಿ ಲಸಿಕಾ ಅಭಿಯಾನವು ಈ ವರ್ಷದ ಜನವರಿ 16 ರಂದು ಪ್ರಾರಂಭವಾಯಿತು. ಇಲ್ಲಿಯವರೆಗೆ, ಸುಮಾರು 117 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.
ಇದನ್ನೂ ಓದಿ:
ವಿರೋಧದ ನಂತರ ‘ರಾಮಾಯಣ ಎಕ್ಸ್‌ಪ್ರೆಸ್’ ಸಿಬ್ಬಂದಿಯ ಕೇಸರಿ ಸಮವಸ್ತ್ರವನ್ನು ಬದಲಾಯಿಸಿದ ರೈಲ್ವೆ ಇಲಾಖೆ
Viral Video: ರೈಲಿನಲ್ಲಿ ತಾತ್ಕಾಲಿಕ ಸೀಟ್ ತಯಾರಿಸಿಕೊಂಡು ಕುಳಿತ ಪ್ರಯಾಣಿಕ; ಹೇಗಂತೀರಾ? ವಿಡಿಯೊ ನೋಡಿ
Published On - 9:55 am, Tue, 23 November 21