ವಿರೋಧದ ನಂತರ ‘ರಾಮಾಯಣ ಎಕ್ಸ್‌ಪ್ರೆಸ್’ ಸಿಬ್ಬಂದಿಯ ಕೇಸರಿ ಸಮವಸ್ತ್ರವನ್ನು ಬದಲಾಯಿಸಿದ ರೈಲ್ವೆ ಇಲಾಖೆ
Ramayan Express: ಹಿಂದೂ ಧಾರ್ಮಿಕ ಮುಖಂಡರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ, ‘ರಾಮಾಯಣ ಎಕ್ಸ್‌ಪ್ರೆಸ್’ ರೈಲು ಸಿಬ್ಬಂದಿಯ ಸಮವಸ್ತ್ರ ಬದಲಾಯಿಸಿದೆ. ಇದಕ್ಕೆ ವಿರೋಧ ವ್ಯಕ್ತವಾಗಲು ಕಾರಣವೇನು? ಇಲ್ಲಿದೆ ಮಾಹಿತಿ.
ಹಿಂದೂ ಧಾರ್ಮಿಕ ಮುಖಂಡರು ರಾಮಾಯಣ ಎಕ್ಸ್‌ಪ್ರೆಸ್ ಸಿಬ್ಬಂದಿಗೆ ನೀಡಿರುವ ಕೇಸರಿ ಸಮವಸ್ತ್ರಗಳನ್ನು ವಿರೋಧಿಸಿದ ನಂತರ ಭಾರತೀಯ ರೈಲ್ವೆ ಸೋಮವಾರ ಸಮವಸ್ತ್ರವನ್ನು ಬದಲಾಯಿಸಿದೆ. ಉಜ್ಜಯಿನಿಯ ಹಿಂದೂ ಧಾರ್ಮಿಕ ಮುಖಂಡರು ಕೇಸರಿ ಸಮವಸ್ತ್ರವನ್ನು ನೀಡಿದ್ದನ್ನು ವಿರೋಧಿಸಿದ್ದರು. ಜೊತೆಗೆ ಅದು ಹಿಂದೂ ಧರ್ಮಕ್ಕೆ ಅವಮಾನ ಎಂದು ಹೇಳಿದ್ದರು. ಒಂದು ವೇಳೆ ರೈಲ್ವೆ ಸಮವಸ್ತ್ರವನ್ನು ಬದಲಾಯಿಸದಿದ್ದರೆ ಡಿಸೆಂಬರ್ 12 ರಂದು ದೆಹಲಿಯಲ್ಲಿ ರೈಲು ತಡೆಯುವುದಾಗಿ ಎಚ್ಚರಿಸಿದ್ದರು. ತೀವ್ರ ವಿರೋಧಕ್ಕೆ ಮಣಿದಿರುವ ರೈಲ್ವೆ ಇಲಾಖೆ, ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸಮವಸ್ತ್ರ ಬದಲಾಯಿಸುವುದಾಗಿ ತಿಳಿಸಿ ಕ್ಷಮೆ ಕೋರಿದೆ. ರೈಲನ್ನು ನಿರ್ವಹಿಸುತ್ತಿರುವ ಐಆರ್ಸಿಟಿಸಿ ತನ್ನ ಹೇಳಿಕೆಯಲ್ಲಿ, ‘‘ಸೇವಾ ಸಿಬ್ಬಂದಿಯ ಸಮವಸ್ತ್ರವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಇದುವರೆಗೆ ಆದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆ’’ ಎಂದು ತಿಳಿಸಿದೆ. ಇದೀಗ ಸಮವಸ್ತ್ರವನ್ನು ಸಾಮಾನ್ಯ ಸೇವಾ ಸಿಬ್ಬಂದಿಗಿರುವಂತೆಯೇ ರೂಪಿಸಲಾಗಿದೆ. ಆದರೆ ಕೈಗವಸು ಮತ್ತು ಮಾಸ್ಕ್ನಲ್ಲಿ ಕೇಸರಿ ಬಣ್ಣವನ್ನೇ ಉಳಿಸಿಕೊಳ್ಳಲಾಗಿದೆ.
ಸಾಧುಗಳು ಧರಿಸುವ ಕೇಸರಿ ವಸ್ತ್ರದ ಮಾದರಿಯಲ್ಲಿಯೇ ಸಮವಸ್ತ್ರ ರೂಪಿಸಿರುವುದು ಮತ್ತು ರುದ್ರಾಕ್ಷಿಯ ಮಾಲೆಗಳನ್ನು ಧರಿಸುವುದು ಹಿಂದೂ ಧರ್ಮ ಮತ್ತು ಅದರ ದಾರ್ಶನಿಕರಿಗೆ ಮಾಡುವ ಅವಮಾನವಾಗಿದೆ ಎಂದು ಉಜ್ಜಯಿನಿ ಅಖಾಡ ಪರಿಷತ್ತಿನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಹೇಳಿಕೆ ನೀಡಿದ್ದರು. ಸಿಬ್ಬಂದಿಗಳ ಕೇಸರಿ ಡ್ರೆಸ್ ಕೋಡ್ ಅನ್ನು ಬದಲಾಯಿಸದಿದ್ದರೆ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದರು.
ಇಂತಹ ವಿವಾದಕ್ಕೆ ಕಾರಣವಾಗದಿರಲು, ಸಮವಸ್ತ್ರವನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಮಂಡಳಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿದೆ. ಮೊದಲ ರಾಮಾಯಣ ಎಕ್ಸ್‌ಪ್ರೆಸ್ ರೈಲು ನವೆಂಬರ್ 7 ರಂದು ತನ್ನ 17 ದಿನಗಳ ಪ್ರಯಾಣವನ್ನು ಪ್ರಾರಂಭಿಸಿದೆ.
ಇದನ್ನೂ ಓದಿ:
Andhra Pradesh Rains: ಭಾರಿ ಮಳೆಗೆ ದಕ್ಷಿಣದ ರಾಜ್ಯಗಳು ತತ್ತರ; ಆಂಧ್ರದಲ್ಲಿ 34 ಸಾವು, 10 ಮಂದಿ ನಾಪತ್ತೆ