Andhra Pradesh Rains: ಭಾರಿ ಮಳೆಗೆ ದಕ್ಷಿಣದ ರಾಜ್ಯಗಳು ತತ್ತರ; ಆಂಧ್ರದಲ್ಲಿ 34 ಸಾವು, 10 ಮಂದಿ ನಾಪತ್ತೆ

Andhra Pradesh Rains: ಭಾರಿ ಮಳೆಗೆ ದಕ್ಷಿಣದ ರಾಜ್ಯಗಳು ತತ್ತರ; ಆಂಧ್ರದಲ್ಲಿ 34 ಸಾವು, 10 ಮಂದಿ ನಾಪತ್ತೆ
ಆಂಧ್ರಪ್ರದೇಶದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶದ ಪಕ್ಷಿ ನೋಟ (ಪಿಟಿಐ ಚಿತ್ರ)

Rain and Flood: ದಕ್ಷಿಣದ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಅಲ್ಲಿ ಇದುವರೆಗೆ ಒಟ್ಟು 34 ಜನರು ಸಾವನ್ನಪ್ಪಿದ್ದು, 10 ಜನರು ನಾಪತ್ತೆಯಾಗಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಈ ಅವಧಿಯಲ್ಲಿ ವಾಡಿಕೆಯಂತೆ ಎಷ್ಟು ಮಳೆಯಾಗಬೇಕಿತ್ತು, ಈ ಬಾರಿ ಎಷ್ಟು ಮಳೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.

TV9kannada Web Team

| Edited By: shivaprasad.hs

Nov 23, 2021 | 8:30 AM

ದಕ್ಷಿಣ ಭಾರತದ ಹಲವಾರು ಪ್ರದೇಶಗಳು ಭಾರಿ ಮಳೆಯಿಂದ ಕಂಗೆಟ್ಟಿದ್ದು, ಅಪಾರ ಪ್ರಮಾಣದ ಜೀವ ಹಾನಿ ಹಾಗೂ ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ಬಂಗಾಳಕೊಲ್ಲಿಯ ಪ್ರದೇಶಗಳಲ್ಲಿ ಕಡಿಮೆ ಒತ್ತಡ ಉಂಟಾಗುತ್ತಿರುವುದು ಹಾಗೂ ಅರಬ್ಬಿ ಸಮುದ್ರದಲ್ಲಿ ಸೈಕ್ಲೋನ್ ಚಲನೆಯಿಂದಾಗಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹದ ಸ್ಥಿತಿ ಉಂಟಾಗಿದೆ. ಆಂಧ್ರಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 34 ಮಂದಿ ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 5 ಲಕ್ಷ ಪರಿಹಾರವನ್ನು ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ (IMD), ದಕ್ಷಿಣದ ರಾಜ್ಯಗಳಲ್ಲಿ ನವೆಂಬರ್ 26 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಅದರಲ್ಲೂ ನವೆಂಬರ್ 24 ಮತ್ತು 25 ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ.

ಆಂಧ್ರಪ್ರದೇಶದ ಕೃಷಿ ಸಚಿವ ಕೆ.ಕಣ್ಣಬಾಬು ರಾಜ್ಯದಲ್ಲಿ ಪ್ರವಾಹದಿಂದಾಗಿರುವ ನಷ್ಟದ ಮಾಹಿತಿ ನೀಡಿದ್ದು, ಎಂಟು ಲಕ್ಷ ಎಕರೆಗೂ ಹೆಚ್ಚು ಬೆಳೆ ಹಾನಿಯಾಗಿದ್ದು, 5,33,345 ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ. 50,000 ಕ್ಕೂ ಹೆಚ್ಚು ಜನರನ್ನು ಚಿತ್ತೂರು, ಅನಂತಪುರ, ಕಡಪ ಮತ್ತು ನೆಲ್ಲೂರುಗಳಲ್ಲಿನ ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಈ ನಾಲ್ಕು ಜಿಲ್ಲೆಗಳು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ 16 ಸಂಪರ್ಕ ಬಂದ್ ಆಗಿತ್ತು. ಸೋಮವಾರದಂದು ದುರಸ್ತಿಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪಡುಗುಪಾಡು-ನೆಲ್ಲೂರು ವಿಭಾಗದ ಸೇತುವೆಯಲ್ಲಿ ನೀರು ನಿಂತಿದ್ದರಿಂದ ಮೂರು ರೈಲುಗಳನ್ನು ರೈಲ್ವೆ ಇಲಾಖೆ ರದ್ದುಗೊಳಿಸಿದೆ.

Tirupathi Rain

ತಿರುಪತಿಯಲ್ಲಿ ಮಳೆಯಿಂದ ರಸ್ತೆ ಜಲಾವೃತಗೊಂಡಿರುವುದು (ಪಿಟಿಐ ಚಿತ್ರ)

ಕರ್ನಾಟಕದಲ್ಲಿ ನಿರಂತರ ಮಳೆಯಾಗಿದ್ದು, ಬೆಳೆದ ಬೆಳೆಗಳಿಗೆ ಅಪಾರ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ರೈತರಿಗೆ ಬೆಳೆ ನಷ್ಟ ಪರಿಹಾರ ಮೊತ್ತವನ್ನು ವರ್ಗಾಯಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸುಮಾರು 790 ಮನೆಗಳಿಗೆ ಹಾಗೂ ಮೂವತ್ನಾಲ್ಕು ಸೇತುವೆಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ನಷ್ಟವಾಗಿದೆ. ಸರ್ಕಾರಿ ಅಂಕಿಅಂಶಗಳ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 92 ಕಿ.ಮೀ ರಸ್ತೆಗಳು ಹಾಳಾಗಿವೆ.

ತಮಿಳುನಾಡಿನಲ್ಲಿ, ಏಳು ಅಧಿಕಾರಿಗಳನ್ನು ಒಳಗೊಂಡ ಎರಡು ಕೇಂದ್ರ ತಂಡಗಳು ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ಹಲವಾರು ಪ್ರದೇಶಗಳನ್ನು ಪರಿಶೀಲಿಸಿವೆ. ಈಶಾನ್ಯ ಮಾನ್ಸೂನ್​ನಿಂದಾಗಿ ತಮಿಳುನಾಡಿನಲ್ಲಿ ಶೇ.61ರಷ್ಟು ಅಧಿಕ ಮಳೆಯಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಘುತ್ತಿರುವುದರಿಂದ ಕೊಸಸ್ತಲೈಯಾರ್ ನದಿಯಲ್ಲಿ ನೀರು ಹೆಚ್ಚಾಗಿದ್ದು, ಚೆನ್ನೈನ ಉತ್ತರ ಭಾಗದ ಹಲವು ಪ್ರದೇಶಗಳು ಮುಳುಗಡೆಯಾಗಿವೆ ಎಂದು ತಿಳಿಸಲಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ? ಐಎಂಡಿ ನೀಡಿರುವ ಮಾಹಿತಿಯಂತೆ, ನವೆಂಬರ್ 1 ರಿಂದ ನವೆಂಬರ್ 21 ರವರೆಗೆ ಕರ್ನಾಟಕದಲ್ಲಿ 145.1mm ಮಳೆಯಾಗಿದೆ. ವಾಡಿಕೆಯಂತಾದರೆ 35.5mm ಮಳೆಯಾಗಬೇಕಿತ್ತು. ತಮಿಳುನಾಡಿನಲ್ಲಿ ವಾಡಿಕೆಯಂತೆ 142.4mm ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ 299.1mm ಮಳೆಯಾಗಿದೆ. ಕೇರಳದಲ್ಲಿ 134.5mm ಬದಲಾಗಿ, 331.1mm ಮಳೆಯಾಗಿದೆ. ಆಂಧ್ರಪ್ರದೇಶದಲ್ಲಿ 81.1mm ಬದಲಾಗಿ, 227.3mm ಮಳೆಯಾಗಿದೆ.

ಇದನ್ನೂ ಓದಿ:

ತಮಿಳುನಾಡಿನಲ್ಲಿ ನವೆಂಬರ್​ 26ರವರೆಗೂ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಚಿನ್ನವಿದ್ದ ಬ್ಯಾಗ್ ಬಿಟ್ಟು ಹೋದ ಮಹಿಳೆ; ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದ ಸಿಬ್ಬಂದಿ

Follow us on

Related Stories

Most Read Stories

Click on your DTH Provider to Add TV9 Kannada