ಮಹಾಮಾರಿ ಕೊರೊನಾ ಲಾಕ್ಡೌನ್ನಿಂದಾಗಿ ಆಯಾ ದೇಶಗಳಲ್ಲಿ ವಲಸಿಗರು ಸಿಲುಕಿದ್ದರು. ನಂತರ ತಾಯ್ನಾಡಿಗೆ ಮರಳಲು ವಂದೇ ಭಾರತ್ ಮಿಷನ್ ಅಡಿ ವಿದೇಶಗಳಲ್ಲಿದ್ದ ಭಾರತೀಯರನ್ನು ಕರೆತರಲಾಯಿತು. ಈ ವೇಳೆ ವಿದೇಶದಲ್ಲಿದ್ದವರನ್ನು ವಿಮಾನದಲ್ಲಿ ಉಚಿತವಾಗಿ ಭಾರತಕ್ಕೆ ಕರೆತಂದಿದ್ದಾರೆಂದು ಗುಲ್ಲೆಬ್ಬಿತ್ತು.
ಇದೇ ವೇಳೆ ದೇಶದ ಆಯಾ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರನ್ನೂ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಆಗ ನಾಲ್ಕರಷ್ಟು ಹಣ ಪಡೆದು ವಲಸೆ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ವಿಮಾನದಲ್ಲಿ ಬಂದವರಿಗೆ ಉಚಿತ ಪ್ರಯಾಣ, ನಮಗ್ಯಾಕೆ ಅಷ್ಟೊಂದು ಹಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ಇದುವರೆಗೂ ಯಾರನ್ನೂ ಉಚಿತವಾಗಿ ವಿಮಾನದಲ್ಲಿ ಕರೆತಂದಿಲ್ಲ.
ಆಗಿನಿಂದಲೂ ವಂದೇ ಭಾರತ್ ಮಿಷನ್ ಅಡಿ ಏರ್ ಇಂಡಿಯಾ ವಿಮಾನ ಕಾರ್ಯ ನಿರ್ವಹಿಸುತ್ತಿದೆ. ಆದ್ರೀಗ ಏರ್ ಇಂಡಿಯಾ ಸಂಸ್ಥೆ ವಂದೇ ಭಾರತ್ ಮಿಷನ್ ಅಡಿ ಕರೆತರುವ ಪ್ರಯಾಣಿಕರ ಟಿಕೆಟ್ ಬೆಲೆಯನ್ನು ಡಬಲ್ ಮಾಡಿದೆ.
ವಂದೇ ಭಾರತ್ ಮಿಷನ್ ಅಡಿ ಮೊದಲು ಮತ್ತು 2ನೇ ಹಂತದಲ್ಲಿ ಕೇರಳದಿಂದ ಓಮನ್ ದೇಶಕ್ಕೆ 15 ಸಾವಿರ ರೂಪಾಯಿ ಇತ್ತು. ಆದ್ರೆ ಈಗ 33 ಸಾವಿರ ರೂ. ಮಾಡಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಸಂಬಳವನ್ನೂ ನೀಡಿಲ್ಲ. ಇತ್ತ ಉದ್ಯೋಗವನ್ನೂ ಕಳೆದುಕೊಂಡಿದ್ದೇವೆ. ಇಂತಹ ಸಮಯದಲ್ಲಿ ಪ್ರಯಾಣದ ದರ ಹೆಚ್ಚಳ ಮಾಡಿದರೆ ಹೇಗೆ ಎಂದು ನಿರುದ್ಯೋಗಿಗಳು ಅಳಲು ತೋಡಿಕೊಂಡಿದ್ದಾರೆ.