ವಾರಾಣಸಿಯ 18ನೇ ಶತಮಾನದ ದುರ್ಗಾ ಮೂರ್ತಿಯನ್ನೇಕೆ ವಿಜಯದಶಮಿಯಂದು ವಿಸರ್ಜನೆ ಮಾಡುವುದಿಲ್ಲ?

ಸಾಮಾನ್ಯವಾಗಿ ದುರ್ಗಾ ಪೂಜೆ ಮುಗಿದ ಬಳಿಕ ವಿಜಯದಶಮಿಯ ದಿನದಂದು ದೇವಿಯ ಮೂರ್ತಿಯನ್ನು ನದಿಯಲ್ಲಿ ವಿಸರ್ಜಿಸುವುದು ವಾಡಿಕೆ. ಆದರೆ, ಉತ್ತರ ಪ್ರದೇಶದ ವಾರಾಣಸಿಯ ಮದನ್‌ಪುರದಲ್ಲಿರುವ 'ಪುರಾಣ ದುರ್ಗಾ ಬಾರಿ' ದೇವಾಲಯದಲ್ಲಿರುವ ದುರ್ಗಾ ಮಾತೆಯ ಮೂರ್ತಿಯನ್ನು ಕಳೆದ 250 ವರ್ಷಗಳಿಗೂ ಹೆಚ್ಚು ಕಾಲದಿಂದ ವಿಸರ್ಜಿಸಿಲ್ಲ ಎಂಬುದು ವಿಶೇಷ. ಈ ಮೂರ್ತಿಯ ಬಣ್ಣವನ್ನು ಬದಲಾಯಿಸುವುದನ್ನು ಹೊರತುಪಡಿಸಿ, ಅದನ್ನು ತಯಾರಿಸಲು ಬಳಸಲಾದ ಮೂಲ ಮಣ್ಣು, ಹುಲ್ಲು ಮತ್ತು ಬಿದಿರು ಇಂದಿಗೂ ಹಾಗೆಯೇ ಇವೆ ಎನ್ನಲಾಗುತ್ತದೆ.

ವಾರಾಣಸಿಯ 18ನೇ ಶತಮಾನದ ದುರ್ಗಾ ಮೂರ್ತಿಯನ್ನೇಕೆ ವಿಜಯದಶಮಿಯಂದು ವಿಸರ್ಜನೆ ಮಾಡುವುದಿಲ್ಲ?
ದುರ್ಗಾ ಮೂರ್ತಿ
Image Credit source: TV9

Updated on: Oct 19, 2026 | 5:10 PM

ನವದೆಹಲಿ, ಅಕ್ಟೋಬರ್ 19: ನವರಾತ್ರಿ ವೇಳೆ ನಡೆಯುವ 5 ದಿನಗಳ ದುರ್ಗಾ ಪೂಜೆಯ ಸಂಭ್ರಮವು ವಿಜಯದಶಮಿಯಂದು ದೇವಿಯ ಮೂರ್ತಿಯ ವಿಸರ್ಜನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಆದರೆ, ವಾರಾಣಸಿಯ ಮದನ್‌ಪುರದಲ್ಲಿ ದುರ್ಗಾ ಮೂರ್ತಿಯನ್ನು ಎಂದೂ ವಿಸರ್ಜನೆ ಮಾಡುವುದಿಲ್ಲ. ಮಣ್ಣು, ಹುಲ್ಲು, ಬಿದಿರು ಮತ್ತು ಇತರ ನೈಸರ್ಗಿಕ ವಸ್ತುಗಳಿಂದ ತಯಾರಿಸಲ್ಪಟ್ಟ ದುರ್ಗಾ ಮಾತೆಯ ಮೂರ್ತಿಯು ಬೆಂಗಾಲಿ ತೋಲಾದ ‘ಪುರಾಣ ದುರ್ಗಾ ಬಾರಿ’ಯಲ್ಲಿ ಸ್ಥಾಪನೆಯಾದಾಗಿನಿಂದ ಅದೇ ಸ್ಥಳದಲ್ಲಿಯೇ ಇದೆ.

ಐತಿಹ್ಯಗಳ ಪ್ರಕಾರ, 1767ರಲ್ಲಿ ಮುಖೋಪಾಧ್ಯಾಯ (ಮುಖರ್ಜಿ) ಕುಟುಂಬವು ಈ ಮೂರ್ತಿಯನ್ನು ಸ್ಥಾಪಿಸಿದ ನಂತರ, ವಿಜಯದಶಮಿಯಂದು ವಿಸರ್ಜನೆಗಾಗಿ ಅದನ್ನು ಸ್ಥಳಾಂತರಿಸಲು ಮುಂದಾದಾಗ ಈ ವಿಗ್ರಹ ಅಲ್ಲಿಂದ ಜರುಗಲು ನಿರಾಕರಿಸಿತು ಎನ್ನಲಾಗುತ್ತದೆ! ಅದೇ ರಾತ್ರಿ, ದುರ್ಗೆಯು ಆ ಕುಟುಂಬದ ಹಿರಿಯರ ಕನಸಿನಲ್ಲಿ ಬಂದು ತಾನು ಅದೇ ಸ್ಥಳದಲ್ಲಿ ಶಾಶ್ವತವಾಗಿ ನೆಲೆಸುವ ಇಚ್ಛೆಯನ್ನು ವ್ಯಕ್ತಪಡಿಸಿದಳು. ದೇವಿಯ ಇಷ್ಟಕ್ಕೆ ಶರಣಾದ ಕುಟುಂಬದ ಮುಖ್ಯಸ್ಥರು, ಆ ಮೂರ್ತಿಯನ್ನು ಅದೇ ಸ್ಥಳದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದರು. ದುರ್ಗಾದೇವಿ ಮಾತ್ರವಲ್ಲದೆ, ಸಾಂಪ್ರದಾಯಿಕ ಬೆಂಗಾಲಿ ಉಡುಗೆ ಮತ್ತು ಆಭರಣಗಳಿಂದ ಅಲಂಕೃತಗೊಂಡ ಸರಸ್ವತಿ, ಲಕ್ಷ್ಮಿ, ಗಣೇಶ ಮತ್ತು ಕಾರ್ತಿಕೇಯನ ಮೂರ್ತಿಗಳೂ ಇಲ್ಲಿವೆ.

Loading...

ಇದನ್ನೂ ಓದಿ: ಕೊಲ್ಕತ್ತಾದ ದುರ್ಗಾ ಪೂಜೆ ಪೆಂಡಾಲ್ ಕಾಲ್ತುಳಿತ ದುರಂತ; ಇಂದು ಸಂಜೆ 7.40ಕ್ಕೆ ನಿಜಕ್ಕೂ ಆಗಿದ್ದೇನು?

11ನೇ ಶತಮಾನದ ವಿಷ್ಣುವಿನ ವಿಗ್ರಹ:

ದುರ್ಗಾದೇವಿಯ ಮೂರ್ತಿಯ ಬಳಿ ದಶಾವತಾರದ ರೂಪದಲ್ಲಿರುವ ಭಗವಾನ್ ವಿಷ್ಣುವಿನ ಸಣ್ಣ ಕಪ್ಪು ಕಲ್ಲಿನ ವಿಗ್ರಹವಿದೆ. ಈ ವಿಗ್ರಹವು ಕ್ರಿ.ಶ. 11ನೇ ಶತಮಾನದ್ದು (ಪಾಲ ರಾಜವಂಶದ ಕಾಲದ್ದು) ಎಂದು ಹೇಳಲಾಗುತ್ತದೆ.

ಭೂಮಿಯಡಿ ಸಿಕ್ಕ 22 ಶಿವಲಿಂಗಗಳು:

ಪುರಾಣ ದುರ್ಗಾ ಬಾರಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನೋಂದಾಯಿತ ನೂರಾರು ವರ್ಷಗಳ ಹಳೆಯ ದುರ್ಗಾ ಮೂರ್ತಿಯನ್ನು ನೋಡಲು ಭಕ್ತರು ಆಗಮಿಸುವುದಷ್ಟೇ ಅಲ್ಲದೆ, ಕುಟುಂಬವು ಈ ಜಾಗದಲ್ಲಿ ನೆಲೆಸಿದಾಗ ಭೂಮಿಯ ಅಡಿಯಿಂದ ಸಿಕ್ಕ 22 ಶಿವಲಿಂಗಗಳನ್ನೂ ವೀಕ್ಷಿಸಬಹುದು.

ಇದನ್ನೂ ಓದಿ: ನವರಾತ್ರಿ 2026: ದುರ್ಗಾ ವಿಸರ್ಜನೆಗೆ ಅತ್ಯುತ್ತಮ ಸಮಯ ಯಾವುದು? ರಾತ್ರಿ ವೇಳೆ ವಿಗ್ರಹ ನಿಮಜ್ಜನೆ ಮಾಡಬಹುದೇ? ಮಾಹಿತಿ ಇಲ್ಲಿದೆ

ಬಣ್ಣ ಬಿಟ್ಟರೆ ಮತ್ತೇನೂ ಬದಲಾಗಿಲ್ಲ:

ಹಲವು ವರ್ಷಗಳು ಕಳೆದರೂ ದುರ್ಗಾ ಮೂರ್ತಿಯ ಬಣ್ಣವನ್ನು ಹೊರತುಪಡಿಸಿ, ಅದನ್ನು ತಯಾರಿಸಲು ಬಳಸಿದ ಮಣ್ಣು, ಹುಲ್ಲು, ಬಿದಿರು ಅಥವಾ ಯಾವುದೇ ವಸ್ತುಗಳು ಹಾಳಾಗದೆ ಹಾಗೆಯೇ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ.

ವಿಶೇಷ ಆಚರಣೆ ಮತ್ತು ನಿಯಮ:

ಮುಖರ್ಜಿ ಕುಟುಂಬವು ಹಲವು ತಲೆಮಾರುಗಳಿಂದ ಈ ದೇವಾಲಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರೂ, ಕಟ್ಟುನಿಟ್ಟಾದ ಆಚರಣೆಯಂತೆ ಕುಟುಂಬದ ಸದಸ್ಯರು ಈ ಮೂರ್ತಿಯನ್ನು ಸ್ಪರ್ಶಿಸುವಂತಿಲ್ಲ. ಎಲ್ಲಾ ಪೂಜಾ ವಿಧಿಗಳನ್ನು ಮತ್ತು ನೈವೇದ್ಯಗಳನ್ನು ಕೇವಲ ನಿರ್ದಿಷ್ಟ ಅರ್ಚಕರು ಮಾತ್ರ ನೆರವೇರಿಸುತ್ತಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us