ನವರಾತ್ರಿ 2026: ದುರ್ಗಾ ವಿಸರ್ಜನೆಗೆ ಅತ್ಯುತ್ತಮ ಸಮಯ ಯಾವುದು? ರಾತ್ರಿ ವೇಳೆ ವಿಗ್ರಹ ನಿಮಜ್ಜನೆ ಮಾಡಬಹುದೇ? ಮಾಹಿತಿ ಇಲ್ಲಿದೆ
ಶರನ್ನವರಾತ್ರಿ ಮಹೋತ್ಸವದಲ್ಲಿ ದುರ್ಗಾ ವಿಸರ್ಜನೆ ವಿಜಯದಶಮಿಯಂದು ನಡೆಯುತ್ತದೆ. ನಿಮಜ್ಜನೆಗೆ ಶುಭ ಸಮಯ, ಬೆಳಿಗ್ಗೆ ಸಾಧ್ಯವಾಗದಿದ್ದರೆ ಪರ್ಯಾಯಗಳು ಹಾಗೂ ರಾತ್ರಿ ವಿಸರ್ಜನೆ ಕುರಿತು ಭಕ್ತರಲ್ಲಿ ಗೊಂದಲಗಳಿವೆ. ಶಾಸ್ತ್ರಗಳ ಪ್ರಕಾರ ಹಗಲಿನ ಶುಭ ಮುಹೂರ್ತಕ್ಕೆ ಆದ್ಯತೆ ನೀಡಬೇಕು. ಸ್ಥಳೀಯ ಪಂಚಾಂಗ ಹಾಗೂ ಸಂಪ್ರದಾಯದಂತೆ ಸೂಕ್ತ ಮುಹೂರ್ತ ಆಯ್ಕೆ ಮಾಡುವುದು ಮುಖ್ಯ.

ದೇಶಾದ್ಯಂತ ಶರನ್ನವರಾತ್ರಿ ಉತ್ಸವಗಳು ಭಕ್ತಿ-ಶ್ರದ್ಧೆಯಿಂದ ವಿಜೃಂಭಣೆಯಿಂದ ಜರುಗುತ್ತಿವೆ. ಅಕ್ಟೋಬರ್ 11 ರಂದು ಪ್ರಾರಂಭಗೊಂಡ ಈ ನವರಾತ್ರಿ ಮಹೋತ್ಸವದಲ್ಲಿ ಭಕ್ತರು ಒಂಬತ್ತು ದಿನಗಳ ಕಾಲ ದುರ್ಗಾದೇವಿಯನ್ನು ವಿವಿಧ ರೂಪಗಳಲ್ಲಿ ಆರಾಧಿಸುತ್ತಾರೆ. ನಂತರ ವಿಜಯದಶಮಿಯ ಪವಿತ್ರ ದಿನದಂದು ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಿ, ದುರ್ಗಾ ವಿಗ್ರಹವನ್ನು ಜಲಾವೃತಗೊಳಿಸುವ (ನಿಮಜ್ಜನೆ) ಮೂಲಕ ಭಾವಪೂರ್ಣ ಬೀಳ್ಕೊಡುಗೆ ನೀಡಲಾಗುತ್ತದೆ. ಆದರೆ, ದುರ್ಗಿ ವಿಸರ್ಜನೆಯನ್ನು ಯಾವಾಗ ಮಾಡಬೇಕು? ಯಾವ ಸಮಯದಲ್ಲಿ ನಿಮಜ್ಜನೆ ಮಾಡುವುದು ಅತ್ಯಂತ ಶುಭಪ್ರದ? ರಾತ್ರಿ ವೇಳೆಯಲ್ಲಿ ನಿಮಜ್ಜನೆ ಮಾಡಬಹುದೇ? ಎಂಬಿತ್ಯಾದಿ ವಿಷಯಗಳ ಕುರಿತು ಭಕ್ತರಲ್ಲಿ ಅನೇಕ ಸಂಶಯಗಳಿರುತ್ತವೆ. ಈ ಕುರಿತು ತಿಳಿಯಬೇಕಾದ ಪ್ರಮುಖ ವಿಚಾರಗಳು ಇಲ್ಲಿವೆ.
ದುರ್ಗಾ ನಿಮಜ್ಜನೆಗೆ ಅತ್ಯುತ್ತಮ ಸಮಯ ಯಾವುದು?
ಹಿಂದೂ ಸನಾತನ ಸಂಪ್ರದಾಯ ಮತ್ತು ಶಾಸ್ತ್ರಗಳ ಪ್ರಕಾರ, ವಿಜಯದಶಮಿಯಂದು ದುರ್ಗಾದೇವಿಯ ವಿಗ್ರಹ ನಿಮಜ್ಜನೆಗೆ ಹಗಲಿನ ಸಮಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ವಿಜಯದಶಮಿಯ ದಿನದಂದು ಬೆಳಗಿನ ಪೂಜಾವಿಧಿಗಳನ್ನು ಪೂರ್ಣಗೊಳಿಸಿದ ನಂತರ ವಿಗ್ರಹವನ್ನು ನಿಮಜ್ಜನೆ ಮಾಡುವುದು ಅತ್ಯಂತ ಶ್ರೇಷ್ಠ ಹಾಗೂ ಶುಭಪ್ರದವೆಂದು ಪರಿಗಣಿಸಲಾಗಿದೆ. ನಿಮಜ್ಜನೆಗೆ ಸೂಕ್ತವಾದ ಸಮಯವು ಆ ದಿನದ ತಿಥಿ, ಸೂರ್ಯೋದಯದ ಸಮಯ ಮತ್ತು ಸ್ಥಳೀಯ ಪಂಚಾಂಗದ ವಿವರಗಳನ್ನು ಆಧರಿಸಿರುತ್ತದೆ. ಸಾಮಾನ್ಯವಾಗಿ ಬೆಳಿಗ್ಗೆ 6:00 ರಿಂದ 10:00 ಗಂಟೆಯ ನಡುವಿನ ಸಮಯವನ್ನು ನಿಮಜ್ಜನೆಗೆ ಸೂಕ್ತವೆಂದು ಕೆಲವು ಸಂಪ್ರದಾಯಗಳು ಸೂಚಿಸುತ್ತವೆ. ಆದಾಗ್ಯೂ, ಈ ಸಮಯವು ಎಲ್ಲಾ ಪ್ರದೇಶಗಳಿಗೂ ಒಂದೇ ರೀತಿ ಅನ್ವಯಿಸುವುದಿಲ್ಲವಾದ್ದರಿಂದ ನಿಮ್ಮ ಸ್ಥಳೀಯ ಪಂಚಾಂಗದಲ್ಲಿ ಸೂಚಿಸಲಾದ ಶುಭ ಮುಹೂರ್ತವನ್ನು ಪರಿಶೀಲಿಸುವುದು ಸೂಕ್ತ. ವಿಜಯದಶಮಿಯಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಪ್ರಾದೇಶಿಕ ಸಂಪ್ರದಾಯಕ್ಕನುಗುಣವಾಗಿ ಅಪರಾಜಿತ ಪೂಜೆ ಹಾಗೂ ಶಮಿ (ಬನ್ನಿ) ಪೂಜೆಗಳನ್ನು ನೆರವೇರಿಸಿ, ದೇವಿಗೆ ಮಹಾಮಂಗಳಾರತಿ ಬೆಳಗಿ, ನೈವೇದ್ಯ ಅರ್ಪಿಸಿ ಕುಟುಂಬಸ್ಥರೆಲ್ಲರೂ ಭಕ್ತಿಯಿಂದ ಬೀಳ್ಕೊಡುಗೆ ನೀಡುತ್ತಾರೆ.
ಇದನ್ನೂ ಓದಿ: ನವರಾತ್ರಿಯ 9 ದಿನಗಳ ಮಹತ್ವವೇನು? ನವದುರ್ಗೆಯ ಒಂಬತ್ತು ರೂಪಗಳ ವಿಶೇಷತೆ ತಿಳಿಯಿರಿ
ಬೆಳಿಗ್ಗೆ ನಿಮಜ್ಜನೆ ಮಾಡಲು ಸಾಧ್ಯವಾಗದಿದ್ದರೆ ಏನು ಮಾಡಬೇಕು?
ಕುಟುಂಬದ ಪರಿಸ್ಥಿತಿಗಳು, ಪ್ರಯಾಣದ ಅಡಚಣೆಗಳು ಅಥವಾ ಇತರ ಅನಿವಾರ್ಯ ಕಾರಣಗಳಿಂದ ಬೆಳಗಿನ ವೇಳೆಯಲ್ಲಿ ನಿಮಜ್ಜನೆ ಮಾಡಲು ಸಾಧ್ಯವಾಗದಿರುವ ಸಂದರ್ಭಗಳೂ ಇರುತ್ತವೆ. ಇಂತಹ ಅನಿವಾರ್ಯತೆಗಳಲ್ಲಿ ಸ್ಥಳೀಯ ಪಂಚಾಂಗಕ್ಕೆ ಅನುಗುಣವಾಗಿ ಅನುಕೂಲಕರವಾದ ಹಗಲಿನ ಸಮಯವನ್ನು, ಅಂದರೆ ಮಧ್ಯಾಹ್ನದ ವೇಳೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಜಯದಶಮಿಯ ‘ದಶಮಿ ತಿಥಿ’ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಯಾವಾಗ ಮುಕ್ತಾಯಗೊಳ್ಳುತ್ತದೆ ಎಂಬುದನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವುದು ಅತ್ಯಗತ್ಯ. ತಿಥಿ ಬದಲಾವಣೆಯಿಂದಾಗಿ ಸಮಯದ ಕುರಿತು ಗೊಂದಲ ಉಂಟಾಗದಂತೆ ತಡೆಯಲು ಪಂಡಿತರು ಅಥವಾ ಪಂಚಾಂಗ ತಜ್ಞರ ಸೂಕ್ತ ಸಲಹೆ ಪಡೆದು ಮುಂದುವರಿಯುವುದು ಶ್ರೇಯಸ್ಕರ.
ರಾತ್ರಿ ವೇಳೆಯಲ್ಲಿ ದುರ್ಗಾ ವಿಸರ್ಜನೆ ಮಾಡಬಹುದೇ?
ಧಾರ್ಮಿಕ ನಿಯಮಗಳು ಮತ್ತು ಆಚಾರ-ವಿಚಾರಗಳ ಪ್ರಕಾರ ದುರ್ಗಾ ವಿಸರ್ಜನೆಯನ್ನು ಹಗಲಿನ ವೇಳೆಯಲ್ಲೇ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ರಾತ್ರಿಯ ವೇಳೆಯನ್ನು ಹೊರತುಪಡಿಸಿ, ಸೂರ್ಯಾಸ್ತಕ್ಕೆ ಮುನ್ನ ಹಗಲಿನ ಶುಭ ಮುಹೂರ್ತದಲ್ಲೇ ನಿಮಜ್ಜನೆ ಪೂರ್ಣಗೊಳಿಸುವುದು ಶಾಸ್ತ್ರಸಮ್ಮತವೆಂದು ಸಂಪ್ರದಾಯಗಳು ಹೇಳುತ್ತವೆ. ಆದರೆ, ವಿಸರ್ಜನೆಗೆ ಸಂಬಂಧಿಸಿದ ನಿಯಮಗಳು ಆಯಾ ಪ್ರದೇಶ ಮತ್ತು ದೇವಾಲಯಗಳ ಆಚಾರ-ವಿಚಾರಗಳಿಗೆ ಅನುಗುಣವಾಗಿ ಬದಲಾಗಬಹುದು. ಆದ್ದರಿಂದ ರಾತ್ರಿ ನಿಮಜ್ಜನೆ ಸಂಪೂರ್ಣ ನಿಷಿದ್ಧ ಎಂದು ಏಕಪಕ್ಷೀಯವಾಗಿ ತೀರ್ಮಾನಿಸುವ ಬದಲು, ನಿಮ್ಮ ಪ್ರದೇಶದ ಧಾರ್ಮಿಕ ಪರಂಪರೆ ಮತ್ತು ಪಂಚಾಂಗದ ಮಾರ್ಗದರ್ಶನವನ್ನು ಅನುಸರಿಸುವುದು ಉತ್ತಮ. ಒಟ್ಟಾರೆಯಾಗಿ, ದುರ್ಗಾ ವಿಸರ್ಜನೆಯ ಸಂದರ್ಭದಲ್ಲಿ ತಿಥಿ, ಶುಭ ಮುಹೂರ್ತ ಮತ್ತು ಸ್ಥಳೀಯ ಧಾರ್ಮಿಕ ಸಂಪ್ರದಾಯಗಳಿಗೆ ಮೊದಲ ಆದ್ಯತೆ ನೀಡಿ, ಶ್ರದ್ಧಾ-ಭಕ್ತಿಗಳಿಂದ ಶರನ್ನವರಾತ್ರಿ ಉತ್ಸವವನ್ನು ಮಂಗಳಕರವಾಗಿ ಪೂರ್ಣಗೊಳಿಸಬೇಕು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:54 am, Wed, 14 October 26




