Navratri 2026: ನವರಾತ್ರಿಯ ನಾಲ್ಕನೇ ದಿನ ದೇವಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು?
ನವರಾತ್ರಿ ಹಬ್ಬದಲ್ಲಿ ಜಗನ್ಮಾತೆ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಮತ್ತು ದೇವಿಯನ್ನು ಪೂಜಿಸುವಾಗ ಪ್ರತಿನಿತ್ಯ ಒಂದೊಂದು ಬಗೆಯ ನೈವೇದ್ಯವನ್ನು ದೇವರಿಗೆ ಅರ್ಪಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಧೈರ್ಯ ಮತ್ತು ಶಕ್ತಿಯ ಸಂಕೇತವಾದ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ದೇವಿಯ ಕೃಪೆಗೆ ಪಾತ್ರರಾಗಲು ಯಾವ ಭಕ್ಷ್ಯವನ್ನು ನೈವೇದ್ಯವಾಗಿ ಅರ್ಪಿಸಿದರೆ ಶ್ರೇಷ್ಠ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಹಿಂದೂ ಧರ್ಮದಲ್ಲಿ, ನವರಾತ್ರಿ (Navratri) ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕೂಷ್ಮಾಂಡಾ ದೇವಿಯು ತನ್ನ ನಗುವಿನಿಂದಲೇ ವಿಶ್ವವನ್ನು ಸೃಷ್ಟಿಸಿದಳು. ಈ ಕಾರಣಕ್ಕಾಗಿ, ಅವಳನ್ನು ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ಆದಿಶಕ್ತಿ ಎಂದು ಪೂಜಿಸಲಾಗುತ್ತದೆ. ಈ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತದೆ ಮತ್ತು ಅವರ ಜೀವನದಿಂದ ನಕಾರಾತ್ಮಕತೆ ಕಳೆದು ಹೋಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ದೇವಿಗೆ ಪ್ರಿಯವಾದ ನೈವೇದಯವನ್ನು ಅರ್ಪಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಹಾಗಿದ್ರೆ ಯಾವ ಭಕ್ಷ್ಯವನ್ನು ನೈವೇದ್ಯವಾಗಿ ಅರ್ಪಿಸುವುದು ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.
ಕೂಷ್ಮಾಂಡ ದೇವಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು?
ನವರಾತ್ರಿಯ ನಾಲ್ಕನೇ ದಿನದಂದು, ನೀವು ಕೂಷ್ಮಾಂಡ ದೇವಿಗೆ ಕುಂಬಳಕಾಯಿಯಿಂದ ತಯಾರಿಸಿದ ಸಿಹಿ ಭಕ್ಷ್ಯ ಅಥವಾ ಮಾಲ್ಪರಿಯನ್ನು ನೈವೇದ್ಯವಾಗಿ ಅರ್ಪಿಸಬಹುದು. ಕೂಷ್ಮಾಂಡ ದೇವಿಗೆ ಮಾಲ್ಪುವಾ ಅಥವಾ ಮಾಲ್ಪುರಿ ಅಂದರೆ ತುಂಬಾ ಇಷ್ಟ ಎಂದು ನಂಬಲಾಗಿದೆ. ಕೂಷ್ಮಾಂಡ ದೇವಿಯ ಆರಾಧನೆಯ ದಿನ ಮಾಲ್ಪುರಿಯನ್ನು ನೈವೇದ್ಯವಾಗಿ ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗಬಹುದು. ನೀವು ಮನೆಯಲ್ಲಿಯೇ ದೇವಿಗೆ ಶುದ್ಧ ಮತ್ತು ರುಚಿಕರವಾದ ಮಾಲ್ಪುವಾವನ್ನು ಸುಲಭವಾಗಿ ತಯಾರಿಸಬಹುದು.
ಮಾಲ್ಪುರಿ ಮಾಡಲು ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು – 1 ಕಪ್, ರವೆ – ½ ಕಪ್, ಖೋವಾ – 3 ಟೀಸ್ಪೂನ್, ಹಾಲು – 1 ಕಪ್, ಏಲಕ್ಕಿ ಪುಡಿ – 1 ಟೀಸ್ಪೂನ್, ಪಿಸ್ತಾ, ಗೋಡಂಬಿ, ಬಾದಮಿ, ಸಕ್ಕರೆ – 1 ಕಪ್, ಸೋಂಪು ಪುಡಿ – ½ ಟೀಸ್ಪೂನ್, ತುಪ್ಪ, ಸ್ವಲ್ಪ ಕೇಸರಿ ದಳ
ಇದನ್ನೂ ಓದಿ: ನವರಾತ್ರಿಯ ಮೂರನೇ ದಿನ ದೇವಿಗೆ ನೈವೇದ್ಯವಾಗಿ ಏನನ್ನು ಅರ್ಪಿಸಿದರೆ ಶ್ರೇಷ್ಠ?
ಮಾಲ್ಪುರಿ ಮಾಡುವ ವಿಧಾನ:
- ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಗೋಧಿ ಹಿಟ್ಟು ಮತ್ತು ರವೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಸಕ್ಕರೆ, ಏಲಕ್ಕಿ ಪುಡಿ ಮತ್ತು ಸೋಂಪು ಪುಡಿಯನ್ನು ಸೇರಿಸಿ ಇನ್ನೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಈಗ ಈ ಮಿಶ್ರಣಕ್ಕೆ ಖೋವಾ ಸೇರಿಸಿ ಮತ್ತೊಮ್ಮೆ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ನಂತರ ಸ್ವಲ್ಪ ಸ್ವಲ್ಪ ಹಾಲು ಸೇರಿಸಿ ಹಿಟ್ಟನ್ನು ತಯಾರಿಸಿಕೊಳ್ಳಿ, ಹಿಟ್ಟು ಹದವಾಗಿರಲಿ. ತೀರಾ ದಪ್ಪ ಅಥವಾ ತೀರಾ ತೆಳುವಾಗಿರದಂತೆ ನೋಡಿಕೊಳ್ಳಿ. ಹಿಟ್ಟು ತಯಾರಾದ ಬಳಿಕ ಅದನ್ನು ಸ್ವಲ್ಪ ಹೊತ್ತು ಹಾಗೆಯೇ ಇಟ್ಟುಬಿಡಿ.
- ಈಗ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ, ಅದಕ್ಕಾಗಿ ಒಂದು ಪಾತ್ರೆಯಲ್ಲಿ ಒಂದು ಕಪ್ ಸಕ್ಕರೆ ಮತ್ತು ಅರ್ಧ ಕಪ್ ನೀರನ್ನು ಸೇರಿಸಿ, ನಯವಾದ ಸಕ್ಕರೆ ಪಾಕವನ್ನು ತಯಾರಿಸಿ, ಮತ್ತು ಅದಕ್ಕೆ ಕೇಸರಿ ದಳಗಳನ್ನು ಸೇರಿಸಿ ಪಕ್ಕಕ್ಕೆ ಇಡಿ.
- ನಂತರ ಬಾಣಲೆಗೆ ತುಪ್ಪವನ್ನು ಹಾಕಿ, ತುಪ್ಪ ಕಾದ ಬಳಿಕ, ತಯಾರಿಸಿಟ್ಟ ಹಿಟ್ಟಿನಿಂದ ಮಾಲ್ಪರಿಯನ್ನು ತಯಾರಿಸಿ, ಮಾಲ್ಪುರಿಯ ಎರಡು ಬದಿಗಳನ್ನು ಚೆನ್ನಾಗಿ ಹುರಿದು ಅದನ್ನು ಸಕ್ಕರೆ ಪಾಕದಲ್ಲಿ ಅದ್ದಿ, ಬಳಿಕ ಅನ್ನು ಒಂದು ತಟ್ಟೆಗೆ ವರ್ಗಾಯಿಸಿ. ಹೀಗೆ ತಯಾರಾದ ಮಾಲ್ಪುರಿಯನ್ನು ಶುದ್ಧ ತಟ್ಟೆಯಲ್ಲಿ ಇಟ್ಟು ಅದರ ಮೇಲೆ ಗೋಡಂಬಿ, ಬಾದಮಿ, ಪಿಸ್ತಾ ಚೂರುಗಳನ್ನು ಹಾಕಿ ಅಲಂಕರಿಸಿ, ಈ ಸಿಹಿ ಖಾದ್ಯವನ್ನು ಕೂಷ್ಮಾಂಡ ದೇವಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




