ಪಿಲಿಭಿತ್‌ನೊಂದಿಗಿನ ಸಂಬಂಧವು ನನ್ನ ಕೊನೆಯ ಉಸಿರು ಇರುವವರೆಗೂ ಇರುತ್ತದೆ: ವರುಣ್ ಗಾಂಧಿ

|

Updated on: Mar 28, 2024 | 12:52 PM

ಲೋಕಸಭೆ ಚುನಾವಣೆಗೆ ಪಿಲಿಭಿತ್‌ನಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ ಕೆಲವು ದಿನಗಳ ನಂತರ ವರುಣ್ ಗಾಂಧಿ, ತಾನು ಸಂಸದರಾಗಿಲ್ಲದಿದ್ದರೆ, ಮಗನಾಗಿ, ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ನಾನು ಬದ್ಧನಾಗಿದ್ದೇನೆ. ನನ್ನ ಬಾಗಿಲುಗಳು ಮೊದಲಿನಂತೆ ನಿಮಗೆ ಯಾವಾಗಲೂ ತೆರೆದಿರುತ್ತವೆ ಎಂದು ಪತ್ರ ಬರೆದಿದ್ದಾರೆ

ಪಿಲಿಭಿತ್‌ನೊಂದಿಗಿನ ಸಂಬಂಧವು ನನ್ನ ಕೊನೆಯ ಉಸಿರು ಇರುವವರೆಗೂ ಇರುತ್ತದೆ: ವರುಣ್ ಗಾಂಧಿ
ವರುಣ್ ಗಾಂಧಿ
Follow us on

ದೆಹಲಿ ಮಾರ್ಚ್ 28: ಮುಂಬರುವ ಲೋಕಸಭೆ ಚುನಾವಣೆಗೆ (Lok Sabha elections) ಪಿಲಿಭಿತ್‌ನಿಂದ (Pilibhit) ಟಿಕೆಟ್ ನಿರಾಕರಿಸಿದ ಕೆಲವು ದಿನಗಳ ನಂತರ, ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi) ಗುರುವಾರ ಈ ಪ್ರದೇಶಕ್ಕೆ ಮೊದಲ ಬಾರಿಗೆ ಕಾಲಿಟ್ಟಾಗ ತಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡು ತಮ್ಮ ಮತದಾರರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ತಮ್ಮ ಸಂದೇಶದಲ್ಲಿ ವರುಣ್ ಗಾಂಧಿ ಅವರು, ಈ ಭೂಮಿ ತನ್ನ ಕರ್ಮ ಭೂಮಿ ಮಾತ್ರವಲ್ಲದೆ  ತನ್ನ ಅಸ್ಮಿತೆಯ ಒಂದು ಭಾಗವಾಗಿ ಹೇಗೆ ಮಾರ್ಪಟ್ಟಿದೆ, ಅಲ್ಲಿನ ಜನರು ತಮ್ಮ ಜೀವನದ ಪ್ರಯಾಣದ ಅವಿಭಾಜ್ಯ ಅಂಶ ಹೇಗಾದರು ಎಂಬುದನ್ನು ಹೇಳಿದ್ದಾರೆ.

ಇಂದು ಈ ಪತ್ರ ಬರೆಯುತ್ತಿರುವಾಗ ಅಸಂಖ್ಯಾತ ನೆನಪುಗಳು ನನ್ನನ್ನು ಭಾವುಕರನ್ನಾಗಿಸಿದೆ. 1983 ರಲ್ಲಿ ಮೊದಲ ಬಾರಿ ತನ್ನ ತಾಯಿಯ ಬೆರಳು ಹಿಡಿದು ಪಿಲಿಭಿತ್‌ಗೆ ಬಂದ 3 ವರ್ಷದ ಪುಟ್ಟ ಬಾಲಕ ನನಗೆ ನೆನಪಿದೆ. ಮುಂದೊಂದು ದಿನ ಈ ಭೂಮಿ ತನ್ನ ಕರ್ಮ ಭೂಮಿಯಾಗುತ್ತದೆ, ಇಲ್ಲಿನ ಜನರೇ ತನ್ನ ಕುಟುಂಬವಾಗುತ್ತಾರೆ ಎಂದು ಆಗ ಏನು ಗೊತ್ತಿತ್ತು ? ಪಿಲಿಭಿತ್‌ನ ಮಹಾನ್ ಜನರಿಗೆ ವರ್ಷಗಳ ಕಾಲ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದು ವರುಣ್ ಗಾಂಧಿ ಹೇಳಿದ್ದಾರೆ.

ವರುಣ್ ಗಾಂಧಿಯವರ ಪತ್ರ

ತಾವು ಮತದಾರರಿಂದ ಪಡೆದ ಆದರ್ಶಗಳು, ಸರಳತೆ ಮತ್ತು ಕರುಣೆಯ ಅಮೂಲ್ಯವಾದ ಪಾಠಗಳನ್ನು ಸ್ಮರಿಸಿದ ಅವರು ಇದು ಸಂಸತ್ತಿನ ಸದಸ್ಯರಾಗಿ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಬೆಳವಣಿಗೆಗೂ ಕಾರಣವಾಗಿದೆ ಎಂದಿದ್ದಾರೆ. “ಸಂಸದರಾಗಿ ನನ್ನ ಅಧಿಕಾರಾವಧಿಯು ಕೊನೆಗೊಳ್ಳುತ್ತಿದ್ದರೂ, ಪಿಲಿಭಿತ್‌ನೊಂದಿಗಿನ ನನ್ನ ಸಂಬಂಧವು ನನ್ನ ಕೊನೆಯ ಉಸಿರು ಇರುವವರೆಗೂ ಇರುತ್ತದೆ” ಎಂದು ವರುಣ್ ಗಾಂಧಿ ಬರೆದಿದ್ದಾರೆ.

ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದ ವರುಣ್ ಗಾಂಧಿ ಅವರು ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಪಿಲಿಭಿತ್‌ಗೆ ಹಾಜರಾಗಲಿಲ್ಲ. ಸುಲ್ತಾನ್‌ಪುರದ ಹಾಲಿ ಸಂಸದೆ ಅವರ ತಾಯಿ ಮೇನಕಾ ಗಾಂಧಿ ಅವರಿಗೆ ಅದೇ ಸ್ಥಾನದಿಂದ ಬಿಜೆಪಿ ಮತ್ತೊಂದು ಅವಕಾಶ ನೀಡಿತು. ನೇಪಾಳದ ತೆರಾಯ್ ಬೆಲ್ಟ್‌ನಲ್ಲಿರುವ ಪಿಲಿಭಿತ್ ಕ್ಷೇತ್ರದಿಂದ ಮೂರು ದಶಕಗಳಲ್ಲಿ ತಾಯಿ-ಮಗ ಜೋಡಿ ಮೇನಕಾ ಮತ್ತು ವರುಣ್ ಗಾಂಧಿ ಕಣದಲ್ಲಿಲ್ಲದಿರುವುದು ಇದೇ ಮೊದಲು.

ಟಿಕೆಟ್ ಸಿಗದ ರಾಜಕೀಯ ಹಿನ್ನಡೆಯ ನಡುವೆಯೂ ವರುಣ್ ಗಾಂಧಿ ಜನ ಸೇವೆಯನ್ನು ಮುಂದುವರಿಸುವುದಾಗಿ ಪಣ ತೊಟ್ಟಿದ್ದಾರೆ.
“ಸಂಸದರಾಗಿಲ್ಲದಿದ್ದರೆ, ಮಗನಾಗಿ, ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ನಾನು ಬದ್ಧನಾಗಿದ್ದೇನೆ ಮತ್ತು ನನ್ನ ಬಾಗಿಲುಗಳು ಮೊದಲಿನಂತೆ ನಿಮಗೆ ಯಾವಾಗಲೂ ತೆರೆದಿರುತ್ತವೆ.”

ಇದನ್ನೂ ಓದಿ: ಭಾರತದ ಆಂತರಿಕ ವಿಷಯಗಳ ಬಗ್ಗೆ ಮತ್ತೆ ಮಾತಾಡಿದ ಅಮೆರಿಕ, ಕೇಜ್ರಿವಾಲ್ ಬಂಧನ, ಕಾಂಗ್ರೆಸ್​ ಖಾತೆ ಸ್ಥಗಿತ ಪ್ರಸ್ತಾಪ

“ಸಾಮಾನ್ಯರ ಧ್ವನಿ ಎತ್ತಲು ನಾನು ರಾಜಕೀಯಕ್ಕೆ ಬಂದಿದ್ದೇನೆ.ಈ ಕೆಲಸವನ್ನು ಯಾವಾಗಲೂ ಮಾಡುವುದನ್ನು ಮುಂದುವರಿಸಲು ಇಂದು ನಾನು ನಿಮ್ಮ ಆಶೀರ್ವಾದವನ್ನು ಬಯಸುತ್ತೇನೆ. ನನ್ನ ಮತ್ತು ಪಿಲಿಭಿತ್ ನಡುವಿನ ಸಂಬಂಧವು ಪ್ರೀತಿ ಮತ್ತು ವಿಶ್ವಾಸದಿಂದ ಕೂಡಿದೆ, ಅದು ಯಾವುದೇ ರಾಜಕೀಯ ಅರ್ಹತೆಗಿಂತ ಹೆಚ್ಚು. ನಾನು ಇದ್ದೆ, ಇದ್ದೇನೆ ಮತ್ತು ನಿಮ್ಮವನಾಗಿರುತ್ತೇನೆ” ಎಂದು ವರುಣ್ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ