ವಿಜಯದಶಮಿಯಾದ ಇಂದು ಪ್ರಧಾನಿ ನರೇಂದ್ರ ಮೋದಿಯಿಂದ 7 ರಕ್ಷಣಾ ಕಂಪನಿಗಳಿಗೆ ಚಾಲನೆ

| Updated By: ಸುಷ್ಮಾ ಚಕ್ರೆ

Updated on: Oct 15, 2021 | 8:16 AM

Narendra Modi: ವಿಜಯದಶಮಿಯ ದಿನವಾದ ಇಂದು ಮಧ್ಯಾಹ್ನ 12.10ಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಆಯೋಜಿಸಿರುವ 7 ಹೊಸ ರಕ್ಷಣಾ ಕಂಪನಿಗಳನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ.

ವಿಜಯದಶಮಿಯಾದ ಇಂದು ಪ್ರಧಾನಿ ನರೇಂದ್ರ ಮೋದಿಯಿಂದ 7 ರಕ್ಷಣಾ ಕಂಪನಿಗಳಿಗೆ ಚಾಲನೆ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ನವದೆಹಲಿ: ವಿಜಯದಶಮಿ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ವಲಯದ 7 ಹೊಸ ರಕ್ಷಣಾ ಕಂಪನಿಗಳಿಗೆ ಚಾಲನೆ ನೀಡಲಿದ್ದಾರೆ. ಭಾರತದ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಆರ್ಡನನ್ಸ್​ ಫ್ಯಾಕ್ಟರಿ ಬೋರ್ಡ್ ಅನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ವಿಜಯದಶಮಿಯ ದಿನವಾದ ಇಂದು ಮಧ್ಯಾಹ್ನ 12.10ಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಆಯೋಜಿಸಿರುವ 7 ಹೊಸ ರಕ್ಷಣಾ ಕಂಪನಿಗಳನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಲಿದ್ದಾರೆ. ಭಾರತದ ರಕ್ಷಣಾ ವಲಯವನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ ಈ 7 ರಕ್ಷಣಾ ಕಂಪನಿಗಳನ್ನು ಸ್ಥಾಪಿಸಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 12.10ಕ್ಕೆ ಏಳು ಹೊಸ ರಕ್ಷಣಾ ಕಂಪನಿಗಳನ್ನು ದೇಶಕ್ಕೆ ಅರ್ಪಿಸಲಿದ್ದು, ಬಳಿಕ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಷಣ ಮಾಡಲಿದ್ದಾರೆ. ಈ ವರ್ಚುವಲ್​​ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಡಿಫೆನ್ಸ್ ಮತ್ತು ರಕ್ಷಣಾ ಉದ್ಯಮ ಸಂಘಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ರಕ್ಷಣಾ ಇಲಾಖೆಯಿಂದ ಸ್ಥಾಪನೆಯಾಗಿರುವ 7 ರಕ್ಷಣಾ ಕಂಪನಿಗಳೆಂದರೆ, ಮುನಿಷನ್ಸ್ ಇಂಡಿಯಾ ಲಿಮಿಟೆಡ್ (MIL), ಆರ್ಮ್​ಡ್ ವೆಹಿಕಲ್ಸ್​ (ಶಸ್ತ್ರಸಜ್ಜಿತ ವಾಹನಗಳು) ನಿಗಮ ಲಿಮಿಟೆಡ್ (AVANI), ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್ (AWE India), ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್ (TCL), ಯಂತ್ರ ಇಂಡಿಯಾ ಲಿಮಿಟೆಡ್ (YIL), ಇಂಡಿಯಾ ಆಪ್ಟೆಲ್ ಲಿಮಿಟೆಡ್ (IOL) ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್ (GIL).

ಸರ್ಕಾರಿ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿಯನ್ನು ಶೇ. 100ರಷ್ಟು ಸರ್ಕಾರಿ ಒಡೆತನದ 7 ಕಾರ್ಪೊರೇಟ್ ಸಂಸ್ಥೆಗಳಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿತ್ತು. ನಂತರ ಈ ಹೊಸ ರಕ್ಷಣಾ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಈ ಕಂಪನಿಗಳು ದೇಶದ ರಕ್ಷಣೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ವಾಹನಗಳು, ಅಸ್ತ್ರಗಳು ಹಾಗೂ ಇತರ ಸಲಕರಣೆಗಳು, ಸೇನಾಪಡೆಗಳಿಗೆ ಬೇಕಾಗುವ ವಸ್ತುಗಳು, ಪ್ಯಾರಾಚೂಟ್​ಗಳನ್ನು ತಯಾರಿಸಲಿವೆ.

ಭಾರತದ ರಕ್ಷಣಾ ವಲಯವನ್ನು ಆಧುನೀಕರಣಗೊಳಿಸಲು ಮತ್ತು ದೇಶದಲ್ಲಿ ಆತ್ಮನಿರ್ಭರ ಭಾರತ ಯೋಜನೆಯನ್ನು ಉತ್ತೇಜಿಸಲು ಈ 7 ರಕ್ಷಣಾ ಕಂಪನಿಗಳನ್ನು ದೇಶದ ಜನರಿಗೆ ಅರ್ಪಣೆ ಮಾಡಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Jamboo Savari 2021: ಮೈಸೂರು ಅರಮನೆಯಲ್ಲಿ ವಿಜಯದಶಮಿ ಸಂಭ್ರಮ; ಇಂದು ಸಂಜೆ ಐತಿಹಾಸಿಕ ದಸರಾ ಜಂಬೂಸವಾರಿ

Manmohan Singh ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯ ಸ್ಥಿತಿ ಸ್ಥಿರ; ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಮೋದಿ

Published On - 8:13 am, Fri, 15 October 21