ನೊಯ್ಡಾ: ಉತ್ತರ ಪ್ರದೇಶದ ಔರಿಯಾದಲ್ಲಿ 10ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು (Dalit Student) ಆತನ ಶಾಲೆಯ ಶಿಕ್ಷಕ ಹೊಡೆದು ಕೊಲೆ (Murder) ಮಾಡಿದ್ದರು. ಪರೀಕ್ಷೆಯಲ್ಲಿ ತಪ್ಪಾಗಿ ಉತ್ತರ ಬರೆದಿದ್ದಕ್ಕೆ ಶಿಕ್ಷಕ ತನ್ನ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ವಿದ್ಯಾರ್ಥಿ ಸಾವನ್ನಪ್ಪಿದ್ದ. ಈ ಘಟನೆಯನ್ನು ವಿರೋಧಿಸಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಶಾಲೆಯ ಹೊರಗೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಬಾಲಕ ಮೃತಪಟ್ಟ ನಂತರ ಪರಾರಿಯಾಗಿರುವ ಆರೋಪಿ ಶಿಕ್ಷಕನನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಮೃತನ ಕುಟುಂಬಸ್ಥರು ಮತ್ತು ರಾಜಕೀಯ ಸಂಘಟನೆ ಭೀಮ್ ಆರ್ಮಿ ಸದಸ್ಯರು ಶವವನ್ನು ಅಂತ್ಯಸಂಸ್ಕಾರ ಮಾಡಲು ಆರಂಭದಲ್ಲಿ ನಿರಾಕರಿಸಿದ್ದರು. ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತು. ಕೋಪಗೊಂಡ ಕೆಲವು ಸ್ಥಳೀಯರು ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿದರು. ಅಲ್ಲದೇ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Shocking News: ಪರೀಕ್ಷೆಯಲ್ಲಿ ತಪ್ಪು ಬರೆದಿದ್ದಕ್ಕೆ ದಲಿತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ
ಹಿರಿಯ ಪೊಲೀಸ್ ಮತ್ತು ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತ್ವರಿತ ಕ್ರಮದ ಭರವಸೆ ನೀಡಿದ ನಂತರ ಬಾಲಕನ ಕುಟುಂಬ ಮತ್ತು ಭೀಮ್ ಆರ್ಮಿ ಸದಸ್ಯರು ಶವಸಂಸ್ಕಾರಕ್ಕಾಗಿ ನಿಖಿತ್ ಅವರ ಮೃತದೇಹವನ್ನು ಅವರ ಗ್ರಾಮಕ್ಕೆ ಕೊಂಡೊಯ್ಯಲು ಒಪ್ಪಿಕೊಂಡರು. ಶಿಕ್ಷಕನಿಗಾಗಿ ಹುಡುಕಾಟ ಮುಂದುವರಿದಿದ್ದು, ಅಶ್ವಿನ್ ಸಿಂಗ್ ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
10ನೇ ತರಗತಿ ಓದುತ್ತಿದ್ದ ನಿಖಿಲ್ ದೋಹ್ರೆ ಎಂಬ ವಿದ್ಯಾರ್ಥಿ ಸೆಪ್ಟೆಂಬರ್ 7ರಂದು ಪರೀಕ್ಷೆಯಲ್ಲಿ ತಪ್ಪು ಮಾಡಿದ್ದ. ಅದಾದ ನಂತರ ಪ್ರಶ್ನೆ ಪತ್ರಿಕೆ ನೋಡಿ ಆತನ ಸಮಾಜ ವಿಜ್ಞಾನದ ಶಿಕ್ಷಕ ಆತನನ್ನು ಕ್ಲಾಸ್ ರೂಂನಲ್ಲೇ ಥಳಿಸಿದ್ದರು. ಬಳಿಕ ಆತನ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ತಾನು ಹೊಡೆದಿದ್ದರಿಂದ ಆ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಶಿಕ್ಷಕನಿಗೂ ಗಾಬರಿಯಾಗಿತ್ತು. ಹೀಗಾಗಿ, ಅವರು ಕೂಡ ಆತನ ಚಿಕಿತ್ಸೆಗೆ ಹಣ ನೀಡಿ ಕಾಳಜಿ ತೋರಿಸಿದ್ದರು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಇದನ್ನೂ ಓದಿ: ವಿವಾಹಿತರ ತ್ರೀಕೋನ ಪ್ರೇಮ ಪ್ರಕರಣ! ವಿಧವೆಯ ಹಿಂದೆ ಬಿದ್ದು ಆತ್ಮಹತ್ಯೆಗೆ ಶರಣಾದ ವಿಚ್ಚೇದಿತ!!
ಸೆಪ್ಟೆಂಬರ್ 24ರಂದು ನಿಖಿಲ್ ಅವರ ತಂದೆ ರಾಜು ದೋಹ್ರೆ ಅವರು ತನ್ನ ಮಗನ ಶಿಕ್ಷಕನ ವಿರುದ್ಧ ಅಚ್ಚಲ್ದಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜಾತಿ ಸೂಚಿಸುವ ನಿಂದನೀಯ ಪದಗಳನ್ನು ಬಳಸಿ ತನ್ನ ಮಗನಿಗೆ ಬೈದು ಅವಮಾನ ಮಾಡಿದ್ದಾರೆ, ಮನಸಿಗೆ ಬಂದಂತೆ ಹೊಡೆದಿದ್ದಾರೆ ಎಂದು ಆರೋಪಿಸಿದ್ದರು.