ಅಪ್ಪ, ಅಮ್ಮ, ಅಜ್ಜ, ಅಜ್ಜಿ ಎಲ್ಲರನ್ನೂ ಕಸಿದುಕೊಂಡ ಕೊರೊನಾ; ಇಬ್ಬರು ಕಂದಮ್ಮಗಳ ಕಣ್ಣೆದುರೇ ಸ್ಮಶಾನವಾಯ್ತು ಮನೆ

|

Updated on: May 15, 2021 | 4:05 PM

ಒಂದೇ ಕುಟುಂಬದ ನಾಲ್ವರ ಜೀವವನ್ನು ಪಡೆದ ಕೊರೊನಾ ಸೋಂಕು 6 ಮತ್ತು 8 ವರ್ಷದ ಹುಡುಗಿಯರಿಬ್ಬರನ್ನು ತಬ್ಬಲಿಗಳನ್ನಾಗಿಸಿದೆ. ನಗುವಿನಿಂದ ತುಂಬಿ ತುಳುಕುತ್ತಿದ್ದ ಮನೆಯೀಗ ಇಬ್ಬರು ಹೆಣ್ಣುಮಕ್ಕಳ ಕಣ್ಣೀರಿಗೆ, ಆಕ್ರಂದನಕ್ಕೆ ಮೂಕಸಾಕ್ಷಿಯಾಗಿದೆ.

ಅಪ್ಪ, ಅಮ್ಮ, ಅಜ್ಜ, ಅಜ್ಜಿ ಎಲ್ಲರನ್ನೂ ಕಸಿದುಕೊಂಡ ಕೊರೊನಾ; ಇಬ್ಬರು ಕಂದಮ್ಮಗಳ ಕಣ್ಣೆದುರೇ ಸ್ಮಶಾನವಾಯ್ತು ಮನೆ
ಕೊರೊನಾದಿಂದ ಕಣ್ಮುಚ್ಚಿದ ಒಂದೇ ಕುಟುಂಬದ ನಾಲ್ವರು
Follow us on

ಲಕ್ನೋ: ಕೊರೊನಾ ಎರಡನೇ ಅಲೆ ದೇಹಕ್ಕೆ ಎಷ್ಟು ಪೆಟ್ಟು ಕೊಟ್ಟಿದೆಯೋ ಅದಕ್ಕಿಂತಲೂ ಹೆಚ್ಚು ಆಘಾತವನ್ನು ಮನಸ್ಸಿಗೆ ಉಂಟುಮಾಡಿದೆ. ಎದೆಯೆತ್ತರಕ್ಕೆ ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡ ಹೆತ್ತವರು, ಜಗತ್ತನ್ನು ಅರಿಯುವ ಮುನ್ನವೇ ಅನಾಥರಾದ ಕಂದಮ್ಮಗಳು, ಯಾರದ್ದೋ ತಪ್ಪಿಗೆ ಬಲಿಯಾದ ವೃದ್ಧ ಜೀವಗಳು ಹೀಗೆ ಕೊರೊನಾದಿಂದ ಕಣ್ಮುಚ್ಚಿದ ಪ್ರತಿಯೊಬ್ಬರ ಹಿಂದೆಯೂ ಒಂದೊಂದು ಕರುಣಾಜನಕ ಕಥೆಗಳಿವೆ. ಇಂಥದ್ದೇ ಒಂದು ಕರುಳು ಹಿಂಡುವ ಘಟನೆ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದಿದ್ದು, ಒಂದು ವೈರಾಣು ಎಷ್ಟು ನಿರ್ದಯವಾಗಿ ಸಂಬಂಧಗಳ ಎಳೆಯನ್ನು ಕತ್ತರಿಸಿ ಹಾಕುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಕೇವಲ ಹನ್ನೆರೆಡು ದಿನಗಳ ಅಂತರದಲ್ಲಿ ತುಂಬು ಕುಟುಂಬವೊಂದು ಒಡೆದು ಚೂರಾಗಿದೆ. ಅಪ್ಪ, ಅಮ್ಮ, ಅಜ್ಜ, ಅಜ್ಜಿಯ ಮಡಿಲಲ್ಲಿ ಆಟವಾಡಿಕೊಂಡಿದ್ದ ಪುಟ್ಟ ಹುಡುಗಿಯರಿಬ್ಬರು ಇದೀಗ ಅನಾಥರಾಗಿ ಕಣ್ಣೀರುಡುತ್ತಿದ್ದಾರೆ. ಒಂದೇ ಕುಟುಂಬದ ನಾಲ್ವರ ಜೀವವನ್ನು ಪಡೆದ ಕೊರೊನಾ ಸೋಂಕು 6 ಮತ್ತು 8 ವರ್ಷದ ಹುಡುಗಿಯರಿಬ್ಬರನ್ನು ತಬ್ಬಲಿಗಳನ್ನಾಗಿಸಿದೆ. ನಗುವಿನಿಂದ ತುಂಬಿ ತುಳುಕುತ್ತಿದ್ದ ಮನೆಯೀಗ ಇಬ್ಬರು ಹೆಣ್ಣುಮಕ್ಕಳ ಕಣ್ಣೀರಿಗೆ, ಆಕ್ರಂದನಕ್ಕೆ ಮೂಕಸಾಕ್ಷಿಯಾಗಿದೆ.

ಗಾಜಿಯಾಬಾದ್​ನಲ್ಲಿ ವಾಸಿಸುತ್ತಿದ್ದ ಈ ಕುಟುಂಬದ ಹಿರಿಯ ವ್ಯಕ್ತಿ ದುರ್ಗೇಶ್ ಪ್ರಸಾದ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಮೊದಲಿಗೆ ಪತ್ತೆಯಾಗಿದೆ. ನಿವೃತ್ತ ಶಾಲಾ ಶಿಕ್ಷಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು ಪತ್ನಿ, ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳ ಜತೆ ಮನೆಯಲ್ಲಿದ್ದ ಕಾರಣ ತಕ್ಷಣ ಎಚ್ಚೆತ್ತು ಪ್ರತ್ಯೇಕವಾಗಿರುವುದಕ್ಕೆ ಆರಂಭಿಸಿ ವೈದ್ಯರು ನೀಡಿದ ಸಲಹೆಯಂತೆ ಔಷಧ ಸೇವಿಸಿದ್ದಾರೆ. ಎಲ್ಲವೂ ಸರಿಹೋಗುತ್ತದೆ ಎಂಬ ಆಶಾವಾದದಲ್ಲಿದ್ದ ಕುಟುಂಬ ಸದಸ್ಯರು ಮನೆಯ ಹಿರಿಯರ ಆರೋಗ್ಯ ಸುಧಾರಣೆಗೆ ಪ್ರಾಮುಖ್ಯತೆ ನೀಡಿದ್ದಾರೆ.

ಆದರೆ, ಎಚ್ಚರಿಕೆ ವಹಿಸಿದ ಹೊರತಾಗಿಯೂ ದುರ್ಗೇಶ್ ಪತ್ನಿ, ಮಗ, ಸೊಸೆ ಮೂವರಲ್ಲೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಎಲ್ಲರನ್ನೂ ಒಟ್ಟಿಗೆ ಸಂಕಷ್ಟಕ್ಕೆ ನೂಕಿದೆ. ಮನೆಯಲ್ಲಿ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಏಪ್ರಿಲ್ 27ರಂದು ದುರ್ಗೇಶ್ ಪ್ರಸಾದ್ ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿ ವಿಧಿವಶರಾಗಿದ್ದಾರೆ. ಹಿರಿಯ ಸದಸ್ಯರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಕುಟುಂಬಸ್ಥರಿಗೆ ಕೇವಲ ಒಂದೇ ಒಂದು ವಾರದಲ್ಲಿ ಮತ್ತೊಂದು ಆಘಾತ ಬಂದಪ್ಪಳಿಸಿದೆ. ತಂದೆಯ ಸಾವಿನ ಬೆನ್ನಲ್ಲೇ ಮನೆಯ ಆಧಾರ ಸ್ತಂಭವಾಗಿದ್ದ ದುರ್ಗೇಶ್ ಪುತ್ರ ಅಶ್ವಿನ್ ಕೊರೊನಾ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ.

ಒಂದೆಡೆ ಕಾಡುತ್ತಿರುವ ಕೊರೊನಾ ಇನ್ನೊಂದೆಡೆ ಮನೆಯ ಇಬ್ಬರು ಗಂಡಸರನ್ನು ಕಳೆದುಕೊಂಡ ಅತ್ತೆ, ಸೊಸೆಗೆ ಏನಾಗುತ್ತಿದೆ ಎನ್ನುವುದೇ ಅರ್ಥವಾಗದಂತಾಗಿದೆ. ಅತ್ತ ಮನೆಯ ಪರಿಸ್ಥಿತಿ ಹದಗೆಡುತ್ತಿದ್ದಂತೆ ಸಂಬಂಧಿಗಳ ಮನೆಗೆ ತೆರಳಿದ್ದ ಪುಟ್ಟಮಕ್ಕಳು ಅಪ್ಪ, ಅಜ್ಜನನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇಷ್ಟಾದರೂ ಕ್ರೂರ ವಿಧಿ ತನ್ನ ಆಟವನ್ನು ಅಲ್ಲಿಗೇ ನಿಲ್ಲಿಸದೆ ದುರ್ಗೇಶ್ ಪತ್ನಿಯನ್ನು ಬಲಿತೆಗೆದುಕೊಂಡು, ಮೇ 7ನೇ ತಾರೀಖಿನಂದು ಪುಟ್ಟ ಕಂದಮ್ಮಗಳ ತಾಯಿಯ ಜೀವವನ್ನೂ ಕಸಿದುಕೊಂಡಿದೆ. ಅಲ್ಲಿಗೆ ಕೇವಲ 12 ದಿನಗಳ ಅವಧಿಯಲ್ಲಿ ತುಂಬು ಕುಟುಂಬವಿದ್ದ ಮನೆಯೊಂದು ಸ್ಮಶಾನವಾಗಿ ಪರಿವರ್ತನೆ ಹೊಂದಿದೆ.

ಒಂದೇ ಕುಟುಂಬದ ನಾಲ್ವರ ಸರಣಿ ಸಾವಿನಿಂದ ದಿಗ್ಭ್ರಮೆಗೆ ಒಳಗಾದ ನೆರೆಹೊರೆಯವರು ಈ ಸಾವಿಗೆ ವ್ಯವಸ್ಥೆಯ ನಿರ್ಲಕ್ಷ್ಯವೇ ಕಾರಣ, ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಒದಗಿಸಿದ್ದರೆ ಜೀವ ಉಳಿಸಬಹುದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ದುರದೃಷ್ಟವಶಾತ್ ವ್ಯವಸ್ಥೆ ಎಚ್ಚೆತ್ತುಕೊಳ್ಳುವ ಮುನ್ನ ನಾಲ್ವರೂ ಕಣ್ಮುಚ್ಚಿದ ಕಾರಣ ಪುಟ್ಟ ಮಕ್ಕಳಿಬ್ಬರು ಅನಾಥರಾಗಿದ್ದು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ದೇಶದಲ್ಲಿ ಇಂತಹ ಹಲವು ಘಟನೆಗಳು ಜರುಗುತ್ತಿರುವ ಕಾರಣ, ಮಕ್ಕಳ ಹಕ್ಕು ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್​ಸಿಪಿಸಿಆರ್​) ಅಧ್ಯಕ್ಷ ಪ್ರಶಾಂತ್ ಕನುಂಗೋ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಮಕ್ಕಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದಿದ್ದು ಕಾನೂನಿನ ಪ್ರಕಾರ ಅನಾಥ ಮಕ್ಕಳಿಗೆ ರಕ್ಷಣೆ ಒದಗಿಸಲು ತಿಳಿಸಿದ್ದಾರೆ. ಪೋಷಕರು ತೀರಿಕೊಂಡ ತಕ್ಷಣ ಯಾವುದೇ ಎನ್​ಜಿಓ ಅಥವಾ ವ್ಯಕ್ತಿ ಅಂತಹ ಮಕ್ಕಳನ್ನು ದತ್ತು ಪಡೆಯುವಂತಿಲ್ಲ. ಹೀಗಾಗಿ ಮಕ್ಕಳ ಶೋಷಣೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು NCPCR ಎಚ್ಚರಿಸಿದೆ.

(Viral News Uttar Pradesh Family dies of Covid Pandemic and left 6 and 8 years old kids alone heart wrenching)

ಇದನ್ನೂ ಓದಿ:
ಮೊನ್ನೆಯಷ್ಟೇ ಹಾಡಿಗೆ ತಲೆದೂಗಿದ ಯುವತಿ ಇಂದಿಲ್ಲ; ಪುಟ್ಟ ಕಂದನ ಕೂಗು, ಸಾವಿರಾರು ಜನರ ಪ್ರಾರ್ಥನೆಗೆ ದೇವರು ಸಹ ಕಿವಿಗೊಡಲಿಲ್ಲ

Published On - 3:55 pm, Sat, 15 May 21