ದೆಹಲಿ ಸರ್ಕಾರದಿಂದ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಆರಂಭ; 2 ಗಂಟೆಯಲ್ಲಿ ಆಕ್ಸಿಜನ್ ಹೋಮ್ ಡೆಲಿವರಿ ಸೇವೆ
200 ಕಾನ್ಸನ್ಟ್ರೇಟರ್ಗಳ ಆಕ್ಸಿಜನ್ ಬ್ಯಾಂಕ್ಗಳನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಹೋಮ್ ಐಸೋಲೇಷನ್ನಲ್ಲಿ ಇರುವ ಕೊರೊನಾ ಸೋಂಕಿತರಿಗೆ 2 ಗಂಟೆಯ ಅವಧಿಯ ಒಳಗಾಗಿ ಒದಗಿಸಲಾಗುತ್ತದೆ.
ದೆಹಲಿ: ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವುದು ಮತ್ತು ವೈದ್ಯಕೀಯ ಪರಿಕರಗಳ, ಆಮ್ಲಜನಕ ಪೂರೈಕೆಯ ಕೊರತೆ ಉಂಟಾಗಿರುವುದು ದೇಶದಲ್ಲಿ ದಿನನಿತ್ಯ ಸುದ್ದಿಯಾಗುತ್ತಿದೆ. ಅದನ್ನು ಸರಿದೂಗಿಸಲು ಸರ್ಕಾರ ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವೈದ್ಯಕೀಯ ಆಮ್ಲಜನಕ ಪೂರೈಕೆ ಸಮಸ್ಯೆ ಸರಿಪಡಿಸಲು ದೆಹಲಿ ಸರ್ಕಾರ ನೂತನ ಕ್ರಮ ಕೈಗೊಂಡಿದೆ. ದೆಹಲಿಯ ಕೊರೊನಾ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ಆಕ್ಸಿಜನ್ ಪೂರೈಸುವ ಸಲುವಾಗಿ ಶನಿವಾರದಿಂದ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
200 ಕಾನ್ಸನ್ಟ್ರೇಟರ್ಗಳ ಆಕ್ಸಿಜನ್ ಬ್ಯಾಂಕ್ಗಳನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಹೋಮ್ ಐಸೋಲೇಷನ್ನಲ್ಲಿ ಇರುವ ಕೊರೊನಾ ಸೋಂಕಿತರಿಗೆ 2 ಗಂಟೆಯ ಅವಧಿಯ ಒಳಗಾಗಿ ಒದಗಿಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಕೊರೊನಾ ಸೋಂಕಿತರಿಗೆ ಕ್ಲಪ್ತ ಸಮಯದಲ್ಲಿ ಆಕ್ಸಿಜನ್ ಲಭ್ಯವಾಗುವುದು ಅನಿವಾರ್ಯ. ಹಾಗಾಗಿ ಈ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ಹೋಮ್ ಐಸೋಲೇಷನ್ನಲ್ಲಿ ಇರುವ ಸೋಂಕಿತರಿಗೆ ಅಥವಾ ಕೊವಿಡ್ನಿಂದ ಗುಣಮುಖರಾಗುವ ಹಂತದಲ್ಲಿ ಇರುವ ಸೋಂಕಿತರಿಗೆ ಈ ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಬಳಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಪ್ರತಿ ಜಿಲ್ಲೆಯಲ್ಲಿ 200 ಆಕ್ಸಿಜನ್ ಕಾನ್ಸನ್ಟ್ರೇಟರ್ ಬ್ಯಾಂಕ್ ಸ್ಥಾಪಿಸಲಾಗುತ್ತದೆ. ಅಗತ್ಯವಿರುವವರಿಗೆ 2 ಗಂಟೆಯಲ್ಲಿ ಆಕ್ಸಿಜನ್ ಲಭ್ಯವಾಗಲಿದೆ. ಆಕ್ಸಿಜನ್ ನೀಡುವಾಗ ಡೆಲಿವರಿ ತಂಡದೊಂದಿಗೆ ಓರ್ವ ತಾಂತ್ರಿಕ ವ್ಯಕ್ತಿಯೂ ಜೊತೆಗಿರುತ್ತಾನೆ. ಆಕ್ಸಿಜನ್ ಸಿಲಿಂಡರ್ನ್ನು ಹೇಗೆ ಬಳಸುವುದು ಎಂದು ಅವನು ತಿಳಿಸಿಕೊಡುತ್ತಾನೆ ಎಂದು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಕೊರೊನಾ ಸೋಂಕಿತರ ಜೊತೆಗೆ ವೈದ್ಯರು ಸಂಪರ್ಕದಲ್ಲಿರುತ್ತಾರೆ. ಅಗತ್ಯ ಬಿದ್ದರೆ ಸೋಂಕಿತರನ್ನು ಆಸ್ಪತ್ರೆಗೆ ಕೂಡ ದಾಖಲಿಸಲಾಗುತ್ತದೆ. ಆಕ್ಸಿಜನ್ ಕಾನ್ಸನ್ಟ್ರೇಟರ್ ನೀಡುವ ಮೊದಲು ಆ ರೋಗಿಗೆ ನಿಜವಾಗಿಯೂ ಆಮ್ಲಜನಕದ ಅವಶ್ಯಕತೆ ಇದೆಯೇ ಎಂದು ವೈದ್ಯರು ಪರಿಶೀಲನೆ ನಡೆಸಲಿದ್ದಾರೆ. ಈ ಕಾರ್ಯದಲ್ಲಿ ಕೈಜೋಡಿಸಿರುವ ಓಲಾ ಫೌಂಡೇಷನ್ ಹಾಗೂ ಗೀವ್ ಇಂಡಿಯಾ ಸಂಸ್ಥೆಗೆ ಕೇಜ್ರಿವಾಲ್ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕು ಇಳಿಕೆಯಾಗಿರುವುದನ್ನು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೇವಲ 6,500 ಹೊಸ ಕೊವಿಡ್ ಕೇಸ್ಗಳು ವರದಿಯಾಗಿವೆ. ಕೊರೊನಾ ಪಾಸಿಟಿವಿಟಿ ರೇಟ್ ಶೇ. 11ಕ್ಕೆ ಇಳಿಕೆಯಾಗಿದೆ. 15 ದಿನಗಳಲ್ಲಿ 1,000 ಐಸಿಯು ಬೆಡ್ಗಳನ್ನು ಹೆಚ್ಚಿಸಲಾಗಿದೆ. ವೈದ್ಯರು ಹಾಗೂ ಇಂಜಿನಿಯರ್ಗಳಿಗೆ ಈ ಕಾರ್ಯಕ್ಕೆ ಧನ್ಯವಾದಗಳು ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಳಿಯಲ್ಲಿರುವ ಆಕ್ಸಿಜನ್ ಪಡೆದು ರೋಗಿಗೆ ಸರಬರಾಜು ಮಾಡಬಲ್ಲ ಜನರೇಟರ್ ಸದ್ಯವೇ ಲಭ್ಯವಾಗಲಿದೆ: ಸಚಿವ ಡಾ.ಸುಧಾಕರ್
ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿ; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
Published On - 4:15 pm, Sat, 15 May 21