ವಿಝಿಞಂ ಬಂದರು ನಿರ್ಮಾಣಕ್ಕೆ ತಡೆಯೊಡ್ಡುವುದು ದೇಶ ವಿರೋಧಿ ಚಟುವಟಿಕೆ: ಕೇರಳ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Nov 29, 2022 | 8:18 PM

Vizhinjam sea port ದೇಶದ ಆರ್ಥಿಕ ಬೆಳವಣಿಗೆಗೆ ಬೆನ್ನೆಲುಬಾಗಲಿರುವ ಯಾವುದನ್ನಾದರೂ ತಡೆಯುವುದು ದೇಶ ವಿರೋಧಿ ಚಟುವಟಿಕೆಗೆ ಸಮಾನವಾಗಿದೆ. ರಾಜ್ಯ ಅಥವಾ ದೇಶ ಯೋಜನೆಯನ್ನು ನಿಲ್ಲಿಸಲು ಅವಕಾಶ ನೀಡುವುದಿಲ್ಲ. ಎಲ್‌ಡಿಎಫ್ ಆಡಳಿತ ಸೇರಿದಂತೆ ಸರ್ಕಾರದ ತಾಳ್ಮೆಗೂ ಮಿತಿ ಇದೆ. ಪ್ರತಿಯೊಬ್ಬರೂ ಅದನ್ನು ಅರ್ಥಮಾಡಿಕೊಂಡರೆ ಒಳ್ಳೆಯದು

ವಿಝಿಞಂ ಬಂದರು ನಿರ್ಮಾಣಕ್ಕೆ ತಡೆಯೊಡ್ಡುವುದು ದೇಶ ವಿರೋಧಿ ಚಟುವಟಿಕೆ: ಕೇರಳ ಸರ್ಕಾರ
ಕೇರಳದ ಮೀನುಗಾರಿಕಾ ಸಚಿವ ವಿ ಅಬ್ದುರಹಿಮಾನ್
Follow us on

ತಿರುವನಂತಪುರ: ವಿಝಿಞಂ ಸೀಪೋರ್ಟ್ (Vizhinjam sea port) ವಾಸ್ತವವಾಗಲಿದೆ.ಅದರ ನಿರ್ಮಾಣಕ್ಕೆ ಅಡ್ಡಿಪಡಿಸುವ ಪ್ರಯತ್ನಗಳನ್ನು ದೇಶ ವಿರೋಧಿ ಚಟುವಟಿಕೆ (Anti-national activity) ಎಂದು ಪರಿಗಣಿಸಲಾಗುವುದು ಎಂದು ಕೇರಳ (Kerala) ಸರ್ಕಾರ ಮಂಗಳವಾರ ಹೇಳಿದೆ. ಸರ್ಕಾರದ ತಾಳ್ಮೆಗೂ ಮಿತಿ ಇದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಕೇರಳದ ಮೀನುಗಾರಿಕಾ ಸಚಿವ ವಿ ಅಬ್ದುರಹಿಮಾನ್ (V Abdurahiman) ಗುಡುಗಿದ್ದಾರೆ. ದೇಶವನ್ನು ಪ್ರೀತಿಸುವ, ದೇಶಪ್ರೇಮಿ ಮತ್ತು ರಾಷ್ಟ್ರದ ಅಭಿವೃದ್ಧಿಯನ್ನು ನೋಡಲು ಬಯಸುವ ಯಾರೂ ಬಂದರು ನಿರ್ಮಾಣವನ್ನು ನಿಲ್ಲಿಸಲು ಪ್ರಯತ್ನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ದೇಶದ ಆರ್ಥಿಕ ಬೆಳವಣಿಗೆಗೆ ಬೆನ್ನೆಲುಬಾಗಲಿರುವ ಯಾವುದನ್ನಾದರೂ ತಡೆಯುವುದು ದೇಶ ವಿರೋಧಿ ಚಟುವಟಿಕೆಗೆ ಸಮಾನವಾಗಿದೆ. ರಾಜ್ಯ ಅಥವಾ ದೇಶ ಯೋಜನೆಯನ್ನು ನಿಲ್ಲಿಸಲು ಅವಕಾಶ ನೀಡುವುದಿಲ್ಲ. ಎಲ್‌ಡಿಎಫ್ ಆಡಳಿತ ಸೇರಿದಂತೆ ಸರ್ಕಾರದ ತಾಳ್ಮೆಗೂ ಮಿತಿ ಇದೆ. ಪ್ರತಿಯೊಬ್ಬರೂ ಅದನ್ನು ಅರ್ಥಮಾಡಿಕೊಂಡರೆ ಒಳ್ಳೆಯದು ಎಂದು ವಿಝಿಞಂ ಇಂಟರ್ನ್ಯಾಷನಲ್ ಸೀಪೋರ್ಟ್ ಲಿಮಿಟೆಡ್ ಆಯೋಜಿಸಿದ್ದ ನಿರ್ಮಾಣ ಹಂತದಲ್ಲಿರುವ ಬಂದರಿನ ತಾಂತ್ರಿಕ ಅಂಶಗಳ ಕುರಿತು ತಜ್ಞರ ಸಭೆ ಮತ್ತು ಸೆಮಿನಾರ್‌ನಲ್ಲಿ ಮಾತನಾಡಿದ ಸಚಿವರು ಹೇಳಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕಾರ್ಯಕ್ರಮ ಉದ್ಘಾಟಿಸುವ ನಿರೀಕ್ಷೆಯಿತ್ತು, ಆದರೆ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ನೇರ ಅಥವಾ ಆನ್‌ಲೈನ್ ಮೋಡ್ ಮೂಲಕ ಅದರ ಭಾಗವಾಗಲು ಸಾಧ್ಯವಾಗಲಿಲ್ಲ. ಆದರೆ, ಅವರ ಸಂಪುಟದ ಇತರ ಸಚಿವರು ಅಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಂದರು ಸಚಿವ ಅಹಮ್ಮದ್ ದೇವರಕೋವಿಲ್, ಕೆಲವು ಮಾಧ್ಯಮ ವರದಿಗಳು ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೇಳುತ್ತಿರುವಂತೆ ಇದು ‘ಅದಾನಿ ಬಂದರು’ ಅಲ್ಲ, ಇದು ಕೇರಳ ಸರ್ಕಾರದ್ದು.
ಯೋಜನೆಯ ರೂ 7,500 ಕೋಟಿ ವೆಚ್ಚದ ಬಗ್ಗೆ ಮಾತನಾಡಿದ ಸಚಿವರು, ಅರ್ಧಕ್ಕಿಂತ ಹೆಚ್ಚು ಅಂದರೆ – ಸುಮಾರು ರೂ 4,600 ಕೋಟಿ ವೆಚ್ಚವನ್ನುರಾಜ್ಯ ಸರ್ಕಾರವು ಭರಿಸುತ್ತಿದೆ. ಸುಮಾರು ರೂ 818 ಕೋಟಿಯನ್ನು ಕೇಂದ್ರ ಸರ್ಕಾರವು ಕಾರ್ಯಸಾಧ್ಯತೆಯ ಅಂತರ ನಿಧಿಯಾಗಿ (ವಿಜಿಎಫ್) ಮಂಜೂರು ಮಾಡಿದೆ. ದೇಶದಲ್ಲೇ ಮೊದಲ ಬಾರಿಗೆ ಬಂದರು ನಿರ್ಮಾಣಕ್ಕಾಗಿ ಕೇಂದ್ರದಿಂದ ಇದನ್ನು ನೀಡಲಾಗುತ್ತಿದೆ.ಉಳಿದ ವೆಚ್ಚವನ್ನು ಅದಾನಿ ಭರಿಸಲಿದ್ದು, ಇದು ಸೀಮಿತ ಅವಧಿಗೆ ಬಂದರಿನ ನಿರ್ಮಾಣ ಮತ್ತು ಕಾರ್ಯಾಚರಣೆಯನ್ನು ಸಹ ನೋಡಿಕೊಳ್ಳುತ್ತದೆ ಎಂದು  ಸಚಿವರು ಹೇಳಿದ್ದಾರೆ.

ಯೋಜನೆಯು 2019 ರ ವೇಳೆಗೆ ಪೂರ್ಣಗೊಳ್ಳಬೇಕಾಗಿದ್ದರೂ, ರಾಜ್ಯದಲ್ಲಿನ ನೈಸರ್ಗಿಕ ವಿಕೋಪಗಳು ಮತ್ತು ನಂತರದ ಸಾಂಕ್ರಾಮಿಕ ರೋಗದಿಂದಾಗಿ ಕೆಲಸ ವಿಳಂಬವಾಯಿತು.ಆದರೆ ಸೆಪ್ಟೆಂಬರ್ 2023 ರಲ್ಲಿ ಬಂದರಿನಲ್ಲಿ ಮೊದಲ ಹಡಗು ಬರಲಿದ್ದು ಇದು ಕೇರಳಿಗರಿಗೆ ಓಣಂ ಉಡುಗೊರೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಮೀನುಗಾರರ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ, ಯಾರೂ ಸ್ಥಳಾಂತರಗೊಂಡಿಲ್ಲ, ಹತ್ತಿರದ ಪ್ರದೇಶಗಳಲ್ಲಿ ಕರಾವಳಿ ಸವೆತಕ್ಕೆ ಯೋಜನೆ ಕಾಮಗಾರಿ ಕಾರಣವಲ್ಲ. ಕೆಲವು ವ್ಯಕ್ತಿಗಳು ಹೇಳಿಕೊಂಡಂತೆ ಈ ಪ್ರದೇಶದಲ್ಲಿ ಮೀನು ಲಭ್ಯತೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ ಎಂದು ಇಬ್ಬರೂ ಸಚಿವರು ಹೇಳಿದರು. ಬಂದರು ಸಾಕಾರಗೊಂಡರೆ ರಾಜ್ಯ ಮತ್ತು ದೇಶಕ್ಕೆ ಭಾರಿ ಆರ್ಥಿಕ ಲಾಭವಾಗಲಿದೆ ಎಂದ ಅವರು, ಪ್ರತಿಭಟನೆ ಹಿಂಪಡೆಯುವಂತೆ ಪ್ರತಿಭಟನಾಕಾರರನ್ನು ಒತ್ತಾಯಿಸಿದರು.

ವಿಝಿಞಂ ಮತ್ತು ಇತರ ಕರಾವಳಿ ಪ್ರದೇಶಗಳ ಮೀನುಗಾರರು ಕಳೆದ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದು ನವೆಂಬರ್ 26 ಮತ್ತು 27 ರಂದು ಇಲ್ಲಿ ಹಿಂಸಾಚಾರ ನಡೆದಿದೆ. ನವೆಂಬರ್ 27 ರಂದು ಪ್ರತಿಭಟನೆಗೆ ಸಂಬಂಧಿಸಿದ ಕೆಲವು ವ್ಯಕ್ತಿಗಳನ್ನು ಬಂಧಿಸಿದ ನಂತರ, ವಿಝಿಞಂ ಪೊಲೀಸ್ ಠಾಣೆಯ ಹೊರಗೆ ಒಂದು ದೊಡ್ಡ ಗುಂಪು ದಾಳಿ ಮಾಡಿತು. ಇದರ ಪರಿಣಾಮವಾಗಿ ಸುಮಾರು 40 ಪೊಲೀಸ್ ಸಿಬ್ಬಂದಿಗೆ ಗಾಯಗಳು ಮತ್ತು ಹಲವಾರು ಪೊಲೀಸ್ ವಾಹನಗಳಿಗೆ ಹಾನಿಯಾಯಿತು.

ಹಿಂಸಾತ್ಮಕ ದಾಳಿಯ ಹಿನ್ನೆಲೆಯಲ್ಲಿ, ಕೇರಳ ಪೊಲೀಸರು ತಿರುವನಂತಪುರಂ ರೇಂಜ್ ಡಿಐಜಿ ಆರ್ ನಿಶಾಂತಿನಿ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಲು ನಿರ್ಧರಿಸಿದರು. ಅವರು ವಿಝಿಞಂ, ತಿರುವನಂತಪುರಂ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳು, ಕೊಲ್ಲಂ ಜಿಲ್ಲೆಯ ಕರಾವಳಿ ಪೊಲೀಸ್ ಠಾಣೆಗಳಲ್ಲಿ ಭದ್ರತಾ ವ್ಯವಸ್ಥೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ವಹಿಸುತ್ತಾರೆ ಎಂದು ರಾಜ್ಯ ಪೊಲೀಸ್ ಮಾಧ್ಯಮ ಕೇಂದ್ರದ ಪ್ರಕಟಣೆ ತಿಳಿಸಿದೆ.

ವಿಝಿಞಂ ಬಂದರು ಮುಷ್ಕರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ತನಿಖೆಗೆ ವಿಶೇಷ ತಂಡವನ್ನು ರಚಿಸುವಂತೆ ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಜಿ ಸ್ಪರ್ಜನ್ ಕುಮಾರ್ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ಸೂಚಿಸಿದ್ದಾರೆ ಎಂದು ಅದು ಹೇಳಿದೆ.

ನವೆಂಬರ್ 26 ಮತ್ತು 27 ರಂದು ವಿಝಿಞಂನಲ್ಲಿ ನಡೆದ ಹಿಂಸಾಚಾರದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಎರಡು ವಾರಗಳವರೆಗೆ ಇಡೀ ರಾಜ್ಯ ಪೊಲೀಸರನ್ನು ಸಜ್ಜುಗೊಳಿಸಲು ಎಡಿಜಿಪಿ ಆದೇಶಿಸಿದ್ದಾರೆ. ಏತನ್ಮಧ್ಯೆ, ಬಂದರಿನ ಬಳಿಯ ಪ್ರತಿಭಟನಾ ಸ್ಥಳಗಳು ಮಂಗಳವಾರ ಶಾಂತವಾಗಿವೆ. ಆಂದೋಲನವನ್ನು ಮುನ್ನಡೆಸುತ್ತಿರುವ ಪಾದ್ರಿಯೊಬ್ಬರು ಕೇರಳ ಸಿಎಂ ಮತ್ತು ಅವರ ಕ್ಯಾಬಿನೆಟ್ ಮೀನುಗಾರರಿಗೆ “ದ್ರೋಹ” ಮಾಡಿದ್ದಾರೆ ಎಂದು ಹೇಳಿದರು.

ಮೀನುಗಾರರ ಏಳು ಬೇಡಿಕೆಗಳಲ್ಲಿ ಐದು ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಸಚಿವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಯಾರಿಗೂ ಪುನರ್ವಸತಿ ನೀಡಲಾಗಿಲ್ಲ. ಮನೆಗಳ ನಷ್ಟಕ್ಕೆ ಪರಿಹಾರ ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಪೊಲೀಸ್ ಠಾಣೆಯ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸರ್ವಪಕ್ಷ ಸಭೆಯ ಕುರಿತು ಮಾತನಾಡಿದ ಅವರು ಸಭೆ ಆಯೋಜಿಸಿದವರು ಪ್ರತಿಭಟನೆಯನ್ನು ಹಿಮ್ಮಟ್ಟಿಸಲು ಸಭೆ ಮಾಡಿದ್ದಾರೆ. ಮೀನುಗಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದ್ದರೆ ಮಾತುಕತೆಗೆ ಸಿದ್ಧ ಎಂದು ಅವರು ಹೇಳಿದರು.

Published On - 8:11 pm, Tue, 29 November 22