ಜೈಪುರ: ಜಗನ್ ಗುರ್ಜರ್ (Jagan Gurjar) ಎಂಬ ಡಕಾಯಿತ ಕೊಲೆ, ಅಪಹರಣ, ಲೂಟಿ ಮತ್ತು ಸುಲಿಗೆಯ 120 ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಈತ ಧೋಲ್‌ಪುರ ಬರಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ವಿಡಿಯೊವೊಂದರಲ್ಲಿ ಬೆದರಿಕೆ ಹಾಕಿದ್ದಕ್ಕಾಗಿ ರಾಜಸ್ಥಾನ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬರಿ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ (Giriraj Singh Malinga) ಅವರಿಗೆ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಆತನ ಬಂಧನಕ್ಕಾಗಿ ರಾಜಸ್ಥಾನ ( Rajasthan)ಪೊಲೀಸರು ಧೋಲ್‌ಪುರದ ಡ್ಯಾಂಗ್ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಜನವರಿಯಲ್ಲಿ ಗುರ್ಜರ್ ಧೋಲ್‌ಪುರದಲ್ಲಿ ಕೆಲವು ಅಂಗಡಿಯವರೊಂದಿಗೆ ವಾಗ್ವಾದ ನಡೆಸಿದ್ದು ಅಲ್ಲಿಂದ ವಿವಾದ ಪ್ರಾರಂಭವಾಯಿತು ಎಂದು ವರದಿಯಾಗಿದೆ. ಅಂಗಡಿಯವರನ್ನು ಹೆದರಿಸಲು ಗುರ್ಜರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ವ್ಯಾಪಾರಿಗಳು ಪೊಲೀಸರಿಗೆ ಹಾಗೂ ಗಿರಿರಾಜ್ ಮಾಲಿಂಗ ಅವರಿಗೆ ದೂರು ನೀಡಿದ್ದಾರೆ. ಪೊಲೀಸರು ಮತ್ತೊಮ್ಮೆ ತನ್ನನ್ನು ಪತ್ತೆಹಚ್ಚುತ್ತಿದ್ದಾರೆ ಎಂದು ಕೋಪಗೊಂಡ ಗುರ್ಜರ್, ಶಾಸಕರಿಗೆ ಬೆದರಿಕೆ ಹಾಕುವ ವಿಡಿಯೊವನ್ನು ಬಿಡುಗಡೆ ಮಾಡಿದ್ದಾನೆ. ಮತ್ತೊಂದು ವಿಡಿಯೊದಲ್ಲಿ, ಗುರ್ಜರ್ ಕಾಂಗ್ರೆಸ್ ನಾಯಕನನ್ನು ನಿಂದಿಸುತ್ತಿರುವುದು ಇದೆ. ಮಾಲಿಂಗ ಒಬ್ಬ ವ್ಯಕ್ತಿಯನ್ನು ಕೊಲ್ಲುವಂತೆ ಕೇಳಿಕೊಂಡಿದ್ದಾರೆ. ‘ಜಸ್ವಂತ್ ವಿಧಾಯಕ್’ (ಜಸ್ವಂತ್ ಎಂಎಲ್ಎ) ಎಂದು ಮಾಲಿಂಗ ಅವರನ್ನು ಉಲ್ಲೇಖಿಸಿದ ಗುರ್ಜರ್, ನಾನು ಅವನನ್ನು ಕೊಂದಿಲ್ಲ ಎಂದು ಹೇಳುತ್ತಾನೆ.
ಬರಿ ಶಾಸಕರು ಆರೋಪಗಳನ್ನು ನಿರಾಕರಿಸಿದ್ದಾರೆ.
ಡಕಾಯಿತ ಮೂರನೇ ವಿಡಿಯೊದಲ್ಲಿ ಯಾವುದೇ ಭದ್ರತೆ ಇಲ್ಲದೆ ತನ್ನನ್ನು ಎದುರಿಸುವಂತೆ ಮಾಲಿಂಗ ಅವರಿಗೆ ಸವಾಲು ಹಾಕಿದ್ದಾನೆ.
ಕಾಂಗ್ರೆಸ್ ಶಾಸಕರು ಇದಕ್ಕೆ ಪ್ರತಿಯಾಗಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು “ನಾನು ಯಾವುದೇ ಪೊಲೀಸ್ ರಕ್ಷಣೆ ತೆಗೆದುಕೊಂಡಿಲ್ಲ, ನಾನು ಅವನಿಗಾಗಿ ಕಾಯುತ್ತಿದ್ದೇನೆ, ಅವನು ಮರ್ದ್ ಕಾ ಬಚ್ಚಾ ಆಗಿದ್ದರೆ ಅವನು ನನ್ನ ಮನೆಗೆ ಬಂದು ನನ್ನನ್ನು ಎದುರಿಸಬೇಕು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಲಿಂಗ, “ಈ ಜನರು ಸ್ಥಳೀಯ ಗೂಂಡಾಗಳು. ಅವರು ನಿಯಮಿತವಾಗಿ ಇಲ್ಲಿ ಜನರನ್ನು ಬೆದರಿಸುತ್ತಾರೆ ಮತ್ತು ಬೊಬ್ಬೆ ಹೊಡೆಯುತ್ತಾರೆ, ಅದನ್ನು ನಾನು ಅನುಮತಿಸುವುದಿಲ್ಲ. ಗುರ್ಜರ್ ನನ್ನ ಮೇಲೆ ಗುಂಡು ಹಾರಿಸುತ್ತೇನೆ ಎಂದು ನನಗೆ ಬೆದರಿಕೆ ಹಾಕಿದರೆ ನನ್ನ ಪಿಸ್ತೂಲ್ ವಾಟರ್ ಪಿಸ್ತೂಲ್ ಅಲ್ಲ ಎಂದು ಗುಡುಗಿದ್ದಾರೆ.
ಜಗನ್ ಗುರ್ಜರ್ನನ್ನು ಬಂಧಿಸಿದವರಿಗೆ ₹ 50,000 ಬಹುಮಾನ ನೀಡುವುದಾಗಿ ರಾಜಸ್ಥಾನ ಪೊಲೀಸರು ಹೇಳಿದ್ದಾರೆ.
“ನಾವು ಚಂಬಲ್ ಮತ್ತು ಮೊರೆನಾದಲ್ಲಿ ಆತನನ್ನು ಹುಡುಕುತ್ತಿದ್ದೇವೆ. ಆತನ ಬಗ್ಗೆ ಮಾಹಿತಿ ಪಡೆಯಲು ನಾವು ಸ್ಥಳೀಯ ಜನರೊಂದಿಗೆ ಮಾತನಾಡುತ್ತಿದ್ದೇವೆ. ನಾವು ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ” ಎಂದು ಧೋಲ್ಪುರ್ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ಮೀನಾ ಹೇಳಿದ್ದಾರೆ.
ಗುರ್ಜರ್ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. 2008ರಲ್ಲಿ ಅಂದಿನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ನಿವಾಸವನ್ನು ಸ್ಫೋಟಿಸುವುದಾಗಿ ಗುರ್ಜರ್ ಬೆದರಿಕೆ ಹಾಕಿದ್ದರು. 2009ರಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭಾಷಣ ಮಾಡುತ್ತಿದ್ದ ರ್ಯಾಲಿಯಲ್ಲಿ ಶರಣಾಗಿದ್ದ ಇದೇ ಗುರ್ಜರ್.
ಇದನ್ನೂ ಓದಿ: UP Election 2022: ಗೋರಖ್‌ಪುರದಿಂದ ನಾಮಪತ್ರ ಸಲ್ಲಿಸಿದ ಯೋಗಿ ಆದಿತ್ಯನಾಥ