ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ್ದ ಭೀಕರ ಘಟನೆ ಮತ್ತೆ ಪುನರಾವರ್ತನೆ ಆಗುವ ಭೀತಿ ಎದುರಾಗಿದೆ. ಭಾರೀ ಪ್ರವಾಹದ ನಂತರ ತಣ್ಣಗಾಗಿದ್ದ ಅನೇಕ ನದಿಗಳಲ್ಲಿ ನೀರಿನ ಮಟ್ಟ ನಿಧಾನವಾಗಿ ಹೆಚ್ಚುತ್ತಿದ್ದು, ರಕ್ಷಣಾ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ನದಿ ತಟದ ಗ್ರಾಮಗಳಲ್ಲಿ ಮತ್ತೆ ಮುಳುಗುವ ಭೀತಿ ಹೆಚ್ಚಾಗಿದೆ.
ಉತ್ತರಾಖಂಡದ ತಪೋವನದಲ್ಲಿ ಭಾನುವಾರ ಹಿಮಸ್ಫೋಟ ಸಂಭವಿಸಿತ್ತು. ಒಂದೇ ಸಮನೆ ಹಿಮ ಕರಗಿದ್ದರಿಂದ ಭಾರೀ ನೀರು ನದಿಗಳಿಗೆ ನುಗ್ಗಿತ್ತು. ಋಷಿಗಂಗಾ ಜಲ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ನದಿ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದವರು ಕೊಚ್ಚಿ ಹೋಗಿದ್ದರು. ಇಲ್ಲಿ ಕಾಣೆಯಾದ ನೂರಾರು ಜನರಿಗೆ ಹುಡುಕಾಟ ಮುಂದುವರಿದಿದೆ. ಆದರೆ, ನಿಧಾನವಾಗಿ ನದಿ ನೀರು ಹೆಚ್ಚುತ್ತಿದ್ದು, ಅನಿವಾರ್ಯವಾಗಿ ರಕ್ಷಣಾ ಕಾರ್ಯವನ್ನು ನಿಲ್ಲಿಸಲಾಗಿದೆ.
ವಿದ್ಯುತ್ ಉತ್ಪಾದನ ಘಟಕದ ಸುರಂಗದ ಬಳಿ 30ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆ ಇದೆ. ಇವರನ್ನು ರಕ್ಷಣೆ ಮಾಡಲು ಭಾನುವಾರದಿಂದಲೂ ಹರಸಾಹಸ ಪಡಲಾಗುತ್ತಿದೆ. ಈಗಾಗಲೇ ಅನೇಕರ ಶವ ಸಿಕ್ಕಿದ್ದು, ಉಳಿದವರನ್ನು ಹೊರ ತೆಗೆಯುವ ಕೆಲಸ ಮುಂದುವರಿದಿದೆ. ಈ ಸಂದರ್ಭದಲ್ಲೇ ನದಿ ನೀರು ಹೆಚ್ಚುತ್ತಿದ್ದು ಭಾರೀ ಆತಂಕ ಸೃಷ್ಟಿಸಿದೆ.
ಸುರಂಗದ ಸುತ್ತಲೂ ರಾಶಿ ರಾಶಿ ಮಣ್ಣು ಬಂದು ಬಿದ್ದಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ಮಣ್ಣನ್ನು ಹೊರ ತೆಗೆದಂತೆ ಶವಗಳು ಸಿಗುತ್ತಿವೆ. ಈ ಮಣ್ಣಿನ ಅಡಿಯಲ್ಲಿ ಸಿಲುಕಿದವರು ಬದಿಕಿರುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ಉತ್ತರಾಖಂಡ್ ಹಿಮ ಸ್ಫೋಟ: ಹೆಚ್ಚುತ್ತಲೇ ಇದೆ ಮೃತರ ಸಂಖ್ಯೆ, ಇನ್ನೂ 60 ಮೀಟರ್ ಸುರಂಗ ಶೋಧ ನಡೆಸಬೇಕಿದೆ