ಚಂಡಿಗಡ್: ಕಾಂಗ್ರೆಸ್ನಿಂದ ಹೊರಬಿದ್ದಿರುವ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh) ಹೊಸ ಪಕ್ಷ ಕಟ್ಟುವುದಾಗಿ ಮಂಗಳವಾರ ಘೋಷಣೆ ಮಾಡಿದ್ದಾರೆ. ಹಾಗೇ, ಮೂರು ಕೃಷಿ ಕಾಯ್ದೆ (Farm Laws)ಗಳ ವಿಚಾರದಲ್ಲಿ ಎದ್ದಿರುವ ಸಮಸ್ಯೆಯನ್ನು ಕೇಂದ್ರ ಸರ್ಕಾರ ಬಗೆಹರಿಸಿದರೆ ಮುಂದಿನ ಪಂಜಾಬ್ ಚುನಾವಣೆಯ ಹೊತ್ತಿಗೆ ನಮ್ಮ ಪಕ್ಷ ಬಿಜೆಪಿಗೆ ಜತೆಯಾಗಲಿದೆ ಎಂದೂ ಹೇಳಿದ್ದಾರೆ. ಅಮರಿಂದರ್ ಸಿಂಗ್ ಮಾತಿಗೆ ಇದೀಗ ಪಂಜಾಬ್ ಬಿಜೆಪಿ ಉಸ್ತುವಾರಿ ದುಷ್ಯಂತ್ ಗೌತಮ್ ಪ್ರತಿಕ್ರಿಯೆ ನೀಡಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಟ್ಟುವ ಹೊಸ ಪಕ್ಷದ ಜತೆ ಮೈತ್ರಿಗೆ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಅಮರಿಂದರ್ ಜತೆ ಮೈತ್ರಿಗೆ ನಾವು ಬಾಗಿಲು ತೆರೆದಿದ್ದೇವೆ. ಆದರೂ ನಮ್ಮ ಸಂಸದೀಯ ಮಂಡಳಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ರನ್ನು ಕಳೆದ ತಿಂಗಳು ಹುದ್ದೆಯಿಂದ ಕೆಳಗೆ ಇಳಿಸಿ ಅವರ ಜಾಗಕ್ಕೆ ಚರಣಜಿತ್ ಸಿಂಗ್ ಛನ್ನಿಯವರನ್ನು ಕರೆತರಲಾಗಿದೆ. ಅಲ್ಲಿ ಅಮರಿಂದರ್ ಸಿಂಗ್ ಸ್ಥಾನ ಕಳೆದುಕೊಳ್ಳಲು ನವಜೋತ್ ಸಿಂಗ್ ಸಿಧು ಕಾರಣ. ಸಿಎಂ ಹುದ್ದೆಯಿಂದ ಕೆಳಗೆ ಇಳಿಯುತ್ತದ್ದಂತೆ ಅವರು ಪಕ್ಷವನ್ನೇ ತೊರೆದಿದ್ದಾರೆ. ಬಿಜೆಪಿಗೆ ಸೇರುವುದಿಲ್ಲ, ಬೇರೆ ಪಕ್ಷವನ್ನೇ ಕಟ್ಟುತ್ತೇನೆ ಎಂದು ಅವರು ಹೇಳಿದ್ದಾರೆ. ಇನ್ನು ಪಂಜಾಬ್ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರೂ, ಕೃಷಿ ಕಾಯ್ದೆಗಳನ್ನುಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದೂ ಹೇಳಿದ್ದಾರೆ.
ಅಮರಿಂದರ್ನ್ನು ನಮ್ಮೊಂದಿಗೆ ಮೈತ್ರಿಗೆ ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದ ದುಷ್ಯಂತ್ ಗೌತಮ್, ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ನಾವು ಅವರನ್ನು ವಿರೋಧಿಸಿದ್ದೇವೆ. ಪಂಜಾಬ್ ಜನರ ಅಭಿವೃದ್ಧಿಗೆ ವ್ಯತಿರಿಕ್ತವಾಗಿ ಅವರು ನಡೆದುಕೊಂಡಾಗಲೆಲ್ಲ ನಾವೂ ಅವರನ್ನು ವಿರೋಧಿಸಿದ್ದೇವೆ. ಆದರೆ ರಾಷ್ಟ್ರೀಯ ಭದ್ರತೆ, ಗಡಿ ಭದ್ರತೆ ವಿಚಾರಕ್ಕೆ ಬಂದಾಗ ನಾವವರನ್ನು ಸದಾ ಶ್ಲಾಘಿಸುತ್ತೇವೆ. ಅವರೊಬ್ಬ ಯೋಧ ಮತ್ತು ದೇಶಭಕ್ತ ಎಂದು ನಾವು ನಂಬಿದ್ದೇವೆ ಎಂದಿದ್ದಾರೆ. ಆದರೆ ಅವರು ರೈತರ ಪ್ರತಿಭಟನೆಗೆ ಪರಿಹಾರ ಸಿಗಬೇಕು ಎಂಬ ಬೇಡಿಕೆಯಿಟ್ಟಿದ್ದರಿಂದ ಈ ಮೈತ್ರಿ ಭವಿಷ್ಯದಲ್ಲಿ ನಿಜಕ್ಕೂ ಆಗಬಹುದೇ? ಮುಂದೇನು ಎಂಬ ಪ್ರಶ್ನೆ ಸಹಜವಾಗಿಯೇ ಕಾಡಿದೆ.
ಕಾರ್ತಿಕ ಮಾಸ ವಿದ್ಯಾರ್ಥಿಗಳಿಗೆ ಅನುಕೂಲಕರ; ಈ 5 ದುರಭ್ಯಾಸ ಬಿಟ್ಟು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಖಚಿತ