ಚುನಾವಣೆಯ ಹೊತ್ತಲ್ಲಿ ರಾಜಕೀಯ ಪಕ್ಷಗಳು/ ಅಭ್ಯರ್ಥಿಗಳು ಜನರಿಗೆ ನೀಡುವ ವಿವಿಧ ಭರವಸೆಗಳ ಮೇಲೆ ನಾವು ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಹಾಗೆಲ್ಲ ಮಾಡಿದರೆ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗುತ್ತದೆ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್ಗೆ ಹೇಳಿದೆ. ಹಾಗೇ, ಸಾರ್ವಜನಿಕರ ಹಣವನ್ನೇ ಬಳಸಿಕೊಂಡು, ಅದು ರಾಜ್ಯದ ಆರ್ಥಿಕ ಸುಸ್ಥಿತಿಯನ್ನು ಹಾಳುಗೆಡವುಂತಿದ್ದರೂ ಉಚಿತ ಭರವಸೆಗಳನ್ನು ನೀಡುವ ನಾಯಕರಿಗೆ ನಾವು ಮತ ಹಾಕಬೇಕೇ? ಅವರನ್ನು ಆಯ್ಕೆ ಮಾಡಬೇಕೆ ಎಂಬುದನ್ನು ಮತದಾರರೇ ವಿಮರ್ಶಿಸಿಕೊಳ್ಳಬೇಕು, ಕೆಟ್ಟದ್ದು ಯಾವುದು, ಒಳ್ಳೆಯದು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದೂ ಎಲೆಕ್ಷನ್ ಕಮಿಷನ್ ತಿಳಿಸಿದೆ.
ಭಾರತೀಯ ಜನತಾ ಪಾರ್ಟಿಯ ನಾಯಕ, ಸುಪ್ರಿಂಕೋರ್ಟ್ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅಫಿಡಿವಿಟ್ ಒಂದಕ್ಕೆ ಉತ್ತರಿಸಿದ ಚುನಾವಣಾ ಆಯೋಗ, ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು ಉಚಿತವಾಗಿ ಅದು ನೀಡುತ್ತೇವೆ, ಇದು ಕೊಡುತ್ತೇವೆ ಎಂದು ನೀಡುವ ಭರವಸೆಗಳನ್ನು ತಡೆಯಲು ನಮಗೆ ಸಾಧ್ಯವಿಲ್ಲ. ಹಾಗೇ, ಮತದಾರರನ್ನು ಸೆಳೆಯುವ ಇಂಥ ಭರವಸೆಗಳನ್ನು ಕೊಟ್ಟ ಮಾತ್ರಕ್ಕೆ ನಾವು ಆ ಪಕ್ಷದ/ ಅಭ್ಯರ್ಥಿಗಳ ನೋಂದಣಿಯನ್ನು ಮಾಡದೆ ಇರಲೂ ಆಗುವುದಿಲ್ಲ. ಅದಕ್ಕೆ ನಮ್ಮಲ್ಲಿ ಯಾವ ಕಾನೂನೂ ಇಲ್ಲ ಎಂದೂ ಸ್ಪಷ್ಟಪಡಿಸಿದೆ.
ಇನ್ನು ರಾಜಕೀಯ ಪಕ್ಷವೊಂದು ಚುನಾವಣೆಯಲ್ಲಿ ಗೆದ್ದು, ಅವರು ಸರ್ಕಾರ ರಚನೆ ಮಾಡುವಾಗ ತೆಗೆದುಕೊಳ್ಳುವ ನಿರ್ಧಾರಗಳನ್ನು, ರಾಜ್ಯದ ನೀತಿಗಳನ್ನು ನಿಯಂತ್ರಿಸಲೂ ಚುನಾವಣಾ ಆಯೋಗಕ್ಕೆ ಸಾಧ್ಯವಿಲ್ಲ. ಕಾನೂನಿನಲ್ಲಿ ಅವಕಾಶ ಇಲ್ಲದೆ, ನಾವು ಏನೇ ಮಾಡಲು ಹೋದರೂ ಅದು ಇನ್ನೊಬ್ಬರ ಅಧಿಕಾರದಲ್ಲಿ ಅತಿಕ್ರಮಣ ಮಾಡಿದಂತೆ ಎಂದೂ ಸಹ ಚುನಾವಣಾ ಆಯೋಗ ತಿಳಿಸಿದೆ. ಜನವರಿ 25ರಂದು ಅಶ್ವಿನಿ ಉಪಾಧ್ಯಾಯ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಬಳಿಕ, ಪ್ರತಿಕ್ರಿಯೆ ನೀಡುವಂತೆ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಲಾಗಿತ್ತು. ಅದಕ್ಕೆ ಚುನಾವಣಾ ಆಯೋಗ ಹೀಗೆ ಉತ್ತರ ನೀಡಿದೆ.
ಅಶ್ವಿನಿ ಉಪಾಧ್ಯಾಯ ಮನವಿಯೇನು?
ರಾಜಕೀಯ ಪಕ್ಷಗಳು ಚುನಾವಣೆಯ ಹೊತ್ತಲ್ಲಿ ಮತದಾರರನ್ನು ಸೆಳೆಯಲು ಭರವಸೆಗಳನ್ನು ನೀಡುತ್ತಾರೆ. ನಾವು ಅಧಿಕಾರಕ್ಕೆ ಬಂದರೆ ಉಚಿತವಾಗಿ ಅದು ಕೊಡುತ್ತೇವೆ, ಈ ಸೌಲಭ್ಯ ಒದಗಿಸುತ್ತೇವೆ ಎಂದು ಹೇಳುತ್ತಾರೆ. ಸಾಲದಲ್ಲಿ ಮುಳುಗಿರುವ ರಾಜ್ಯಗಳಲ್ಲೂ ಕೂಡ ರಾಜಕೀಯ ಪಕ್ಷಗಳು ಇದನ್ನೇ ಮಾಡುತ್ತವೆ. ಉದಾಹರಣೆಗೆ ಪಂಜಾಬ್ ರಾಜ್ಯ ಸದ್ಯ 2.8.ಲಕ್ಷ ಕೋಟಿ ರೂಪಾಯಿ ಸಾಲದಲ್ಲಿದ್ದರೂ, ರಾಜಕೀಯ ಪಕ್ಷಗಳು ಇನ್ನಿಲ್ಲದಷ್ಟು ಉಚಿತ ಭರವಸೆ ನೀಡಿವೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಹಾಗೇ, ಅಶ್ವಿನಿ ಉಪಾಧ್ಯಾಯ ಪರ ವಕೀಲ ವಿಕಾಸ್ ಸಿಂಗ್ ಕೋರ್ಟ್ನಲ್ಲಿ ಇದೇ ವಾದ ಮಂಡನೆ ಮಾಡಿದ್ದರು. ಈ ಬಗ್ಗೆ ಚುನಾವಣಾ ಆಯೋಗವೂ ಗಮನಹರಿಸಬೇಕು ಎಂದು ಮನವಿ ಮಾಡಲಾಗಿತ್ತು.
ಆದರೆ ಚುನಾವಣಾ ಆಯೋಗ ಈ ವಿಚಾರದಲ್ಲಿ ತಾವೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. 2004ಲ್ಲಿ ಒಂದು ಬಾರಿ ಮತ್ತು 2016ರಲ್ಲಿ ಇನ್ನೊಂದು ಬಾರಿ, ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಚುನಾವಣಾ ಸುಧಾರಣೆಗಳ ಕುರಿತಂತೆ ಪ್ರಸ್ತಾಪವೊಂದನ್ನು ಕಳಿಸಿತ್ತು. ಕೆಲವು ನಿಯಮಗಳನ್ನು ವಿಧಿಸಬೇಕು. ಅದನ್ನು ಮೀರುವ ಚುನಾವಣಾ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಬೇಕು ಎಂಬ ಮನವಿಯೂ ಅದರಲ್ಲಿ ಸೇರಿತ್ತು. ಆದರೆ ಈ ಪ್ರಸ್ತಾಪಕ್ಕೆ ಯಾವುದೇ ಪ್ರತಿಕ್ರಿಯೆಯೂ ಸಿಗದೆ, ಅಲ್ಲಿಗೇ ಅಂತ್ಯಗೊಂಡಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: 40 ವರ್ಷಗಳಲ್ಲೇ ರಾಯಚೂರಿನಲ್ಲಿ ಅತೀ ಹೆಚ್ಚು ತಾಪಮಾನ! ನಿತ್ಯ ದಾಖಲಾಗುತ್ತಿದೆ 40c-43c ಟೆಂಪ್ರೇಚರ್
Published On - 9:55 am, Sun, 10 April 22