ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಹಾಕಿದ ರಾಜ್ ಠಾಕ್ರೆ ಪಕ್ಷದ ಕಾರ್ಯಕರ್ತರು; ಕೂಡಲೇ ಬಂದು ತಡೆದ ಪೊಲೀಸರು
ರಾಜ್ಯಾದ್ಯಂತ ಮಸೀದಿಗಳಿಗೆ ಹಾಕಿರುವ ಧ್ವನಿವರ್ಧಕಗಳನ್ನು ತೆಗೆದುಹಾಕಲು ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ, ನಾವು ಮಸೀದಿಗಳ ಹೊರಗೆ ಧ್ವನಿವರ್ಧಕ ಹಾಕಿ ಹನುಮಾನ ಚಾಲೀಸಾ ಪಠಣ ಹಾಕುತ್ತೇವೆ ಎಂದು ರಾಜ್ ಠಾಕ್ರೆ ಹೇಳಿದ್ದರು.
ಮುಂಬೈನಲ್ಲಿರುವ ಶಿವಸೇನೆ ಪಕ್ಷದ ಪ್ರಧಾನ ಕಚೇರಿ ಎದುರು ಇಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS)ಕಾರ್ಯಕರ್ತರು ಹನುಮಾನ ಚಾಲೀಸಾ ಮತ್ತು ಇತರ ಧಾರ್ಮಿಕ ಗೀತೆಗಳನ್ನು ಹಾಕಿದ ಘಟನೆ ನಡೆಯಿತು. ಅಷ್ಟೇ ಅಲ್ಲ, ಹನುಮಾನ ಚಾಲೀಸಾ ಮತ್ತು ಭಕ್ತಿಗೀತೆಗಳು ದೊಡ್ಡದಾಗಿ ಕೇಳುವಂತೆ ಧ್ವನಿವರ್ಧಕವನ್ನೂ ಅಳವಡಿಸಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಪೊಲೀಸರು ಅದನ್ನು ತಡೆದಿದ್ದಾರೆ. ಹಾಡುಗಳನ್ನು ಹಾಕಲು ಬಳಸಿದ್ದ ಉಪಕರಣಗಳು ಇದ್ದ ವಾಹನ, ಧ್ವನಿವರ್ಧಕಗಳನ್ನೆಲ್ಲ ಜಪ್ತಿ ಮಾಡುವ ಜತೆ, ಎಂಎನ್ಎಸ್ ನಾಯಕ ಯಶವಂತ್ ಕಿಲ್ಲೇಕರ್ ಅವರನ್ನು ವಶಕ್ಕೆ ಪಡೆದು, ಶಿವಾಜಿ ಪಾರ್ಕ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಎಚ್ಚರಿಕೆ ಕೊಟ್ಟಿದ್ದ ರಾಜ್ ಠಾಕ್ರೆ
ಕೆಲವೇ ದಿನಗಳ ಹಿಂದೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಈ ಎಚ್ಚರಿಕೆಯನ್ನು ನೀಡಿದ್ದರು. ರಾಜ್ಯಾದ್ಯಂತ ಮಸೀದಿಗಳಿಗೆ ಹಾಕಿರುವ ಧ್ವನಿವರ್ಧಕಗಳನ್ನು ತೆಗೆದುಹಾಕಲು ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ, ನಾವು ಮಸೀದಿಗಳ ಹೊರಗೆ ಧ್ವನಿವರ್ಧಕ ಹಾಕಿ ಹನುಮಾನ ಚಾಲೀಸಾ ಪಠಣ ಹಾಕುತ್ತೇವೆ. ಆಜಾನ್ಕ್ಕಿಂತಲೂ ದೊಡ್ಡದಾಗಿ ಕೇಳುವಂತೆ ಮಾಡುತ್ತೇವೆ ಎಂದು ಹೇಳಿದ್ದರು. ಹಾಗಂತ ನಾನು ಪ್ರಾರ್ಥನೆಗಳ ವಿರೋಧಿಯಲ್ಲ. ಯಾವುದೇ ಒಂದು ನಿರ್ಧಿಷ್ಟ ಧರ್ಮದ ವಿರೋಧಿಯೂ ಅಲ್ಲ, ಆದರೆ ನಾನೂ ನನ್ನ ಧರ್ಮದ ಗೌರವವನ್ನು ಎತ್ತಿ ಹಿಡಿಯುತ್ತೇನೆ ಎಂದಿದ್ದರು.
Maharashtra | MNS has announced to put a loudspeaker outside Shiv Sena Party HQ ‘Shiv Sena Bhawan’ in Mumbai and play Hanuman Chalisa on it today on the occasion of #RamNavami pic.twitter.com/CkQXME2aeX
— ANI (@ANI) April 10, 2022
ರಾಜ್ ಠಾಕ್ರೆ ಈ ಹೇಳಿಕೆ ವಿವಾದವನ್ನು ಎಬ್ಬಿಸಿತ್ತು. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಶಿವಸೇನೆ ಸಂಸದ ಸಂಜಯ್ ರಾವತ್ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ಹೇಳಿಕೆಯನ್ನು ವಿರೋಧಿಸಿದ್ದರು. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಎಂಎನ್ಎಸ್ ಕಾರ್ಯಕರ್ತರು, ಮುಂಬೈನ ಘಾಟ್ಕೋಪರ್ನಲ್ಲಿರುವ ಎಂಎನ್ಎಸ್ ಪಕ್ಷದ ಕಚೇರಿ ಎದುರು ದೊಡ್ಡದಾಗಿ ಹನುಮಾನ್ ಚಾಲೀಸಾ ಹಾಕಿದ್ದರು. ಆಗ ಪೊಲೀಸರು ಅವರಿಗೆ ದಂಡ ವಿಧಿಸಿದ್ದಲ್ಲದೆ, ಮತ್ತೊಮ್ಮೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಹಾಗಿದ್ದಾಗ್ಯೂ ಇಂದು ರಾಮನವಮಿ ಪ್ರಯುಕ್ತ ಎಂಎನ್ಎಸ್ ಕಾರ್ಯಕರ್ತರು ಶಿವಸೇನೆ ಪಕ್ಷದ ಪ್ರಧಾನ ಕಚೇರಿ ಎದುರು ಮತ್ತೊಮ್ಮೆ ಧ್ವನಿವರ್ಧಕದ ಮೂಲಕ ಹನುಮಾನ ಚಾಲೀಸಾ ಮತ್ತು ಭಕ್ತಿಗೀತೆಗಳನ್ನು ಹಾಕಿದ್ದಾರೆ.
ಇದನ್ನೂ ಓದಿ: ಕೊವಿಡ್ 19 ಲಸಿಕೆ 2ನೇ ಡೋಸ್ ಪಡೆದು 9 ತಿಂಗಳು ಕಳೆದವರೆಲ್ಲ 3ನೇ ಡೋಸ್ಗೆ ಸಿದ್ಧರಾಗಿ; ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ