ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕಿ, ಇಲ್ಲದಿದ್ದರೆ ಮಸೀದಿ ಮುಂದೆ ಲೌಡ್ ಸ್ಪೀಕರ್ನಲ್ಲಿ ಹನುಮಾನ್ ಚಾಲೀಸಾ ಹಾಕುತ್ತೇವೆ: ರಾಜ್ ಠಾಕ್ರೆ
ನಾನು ಪ್ರಾರ್ಥನೆಗೆ ವಿರೋಧಿಯಲ್ಲ, ನೀವು ನಿಮ್ಮ ಮನೆಯಲ್ಲಿ ಪ್ರಾರ್ಥನೆ ಮಾಡಬಹುದು, ಆದರೆ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ನಾನು ಈಗ ಎಚ್ಚರಿಕೆ ನೀಡುತ್ತಿದ್ದೇನೆ. ಧ್ವನಿವರ್ಧಕಗಳನ್ನು ತೆಗೆದುಹಾಕಿ ಇಲ್ಲದಿದ್ದರೆ ಮಸೀದಿಯ ಮುಂದೆ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕುತ್ತೇವೆ
ಮುಂಬೈ: ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ (Maharashtra) ಸರ್ಕಾರಕ್ಕೆ ಹೇಳಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಅವರು “ಮಸೀದಿಗಳ ಮುಂದೆ ಇರುವ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, “ನಾನು ಪ್ರಾರ್ಥನೆಗೆ ವಿರೋಧಿಯಲ್ಲ, ನೀವು ನಿಮ್ಮ ಮನೆಯಲ್ಲಿ ಪ್ರಾರ್ಥನೆ ಮಾಡಬಹುದು, ಆದರೆ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ನಾನು ಈಗ ಎಚ್ಚರಿಕೆ ನೀಡುತ್ತಿದ್ದೇನೆ. ಧ್ವನಿವರ್ಧಕಗಳನ್ನು ತೆಗೆದುಹಾಕಿ ಇಲ್ಲದಿದ್ದರೆ ಮಸೀದಿಯ ಮುಂದೆ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಹಾಕುತ್ತೇವೆ ಎಂದಿದ್ದಾರೆ. ಎಂಎನ್‌ಎಸ್ ಮುಖ್ಯಸ್ಥರು ಸಂಸದರು ಮತ್ತು ಶಾಸಕರಿಗೆ ನೀಡುತ್ತಿರುವ ಪಿಂಚಣಿಯನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಿದ್ದು ಅವರಿಗೆ ಮನೆಗಳನ್ನು ನೀಡಬೇಕಾದರೆ ಶಾಸಕರ ಫಾರ್ಮ್‌ಹೌಸ್ ಅನ್ನು ತೆಗೆದುಕೊಳ್ಳಿ ಎಂದಿದ್ದಾರೆ. ‘ಶಾಸಕ, ಸಂಸದರ ಪಿಂಚಣಿ ನಿಲ್ಲಿಸಬೇಕು, ಕೊಳೆಗೇರಿಗಳಲ್ಲಿ ವಾಸಿಸುವ ಬಡವರಿಗೆ ಮನೆ ನೀಡಬೇಕೆಂದರೆ, ಶಾಸಕರಿಗೆ ಮನೆ ಏಕೆ ಕೊಡಬೇಕು? ಮನೆ ಕೊಡಬೇಕಾದರೆ ಶಾಸಕರ ತೋಟದ ಮನೆಗಳನ್ನು ತೆಗೆದುಕೊಂಡು ಹೋಗಿ ಕೊಡಿ ಎಂದಿದ್ದಾರೆ ಠಾಕ್ರೆ. ಮುಂಬೈನ ಮುಸ್ಲಿಂ ಪ್ರದೇಶಗಳಲ್ಲಿರುವ ಮಸೀದಿಗಳ ಮೇಲೆ ದಾಳಿ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಠಾಕ್ರೆ ಮನವಿ ಮಾಡಿದರು ಮತ್ತು ಅಲ್ಲಿ ವಾಸಿಸುವ ಜನರು “ಪಾಕಿಸ್ತಾನ ಬೆಂಬಲಿಗರು” ಎಂದು ಹೇಳಿದರು.
“ಮುಸ್ಲಿಂ ಗುಡಿಸಲುಗಳಲ್ಲಿರುವ ಮದರಸಾಗಳ ಮೇಲೆ ದಾಳಿ ಮಾಡುವಂತೆ ನಾನು ಪ್ರಧಾನಿ ಮೋದಿಗೆ ಮನವಿ ಮಾಡುತ್ತೇನೆ. ಪಾಕಿಸ್ತಾನಿ ಬೆಂಬಲಿಗರು ಈ ಗುಡಿಸಲುಗಳಲ್ಲಿ ನೆಲೆಸಿದ್ದಾರೆ. ಮುಂಬೈ ಪೊಲೀಸರಿಗೆ ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿದಿದೆ. ನಮ್ಮ ಶಾಸಕರು ಅವರನ್ನು ಮತ ಬ್ಯಾಂಕ್‌ಗಾಗಿ ಬಳಸುತ್ತಿದ್ದಾರೆ. ಅಂತಹವರಿಗೆ ಆಧಾರ್ ಕಾರ್ಡ್ ಕೂಡ ಇಲ್ಲ. ಆದರೆ ಶಾಸಕರು ಅವುಗಳನ್ನು ಮಾಡುತ್ತಾರೆ,” ಎಂದು ಅವರು ಹೇಳಿದರು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ 1999 ರಲ್ಲಿ ತಮ್ಮ ಪಕ್ಷವನ್ನು ಸ್ಥಾಪಿಸಿದ ನಂತರ ಮಹಾರಾಷ್ಟ್ರದಲ್ಲಿ ಜಾತಿವಾದಿ ರಾಜಕೀಯದ ಏರಿಕೆಗೆ ಅವರೇ ಕಾರಣ ಎಂದು ಹೇಳಿದರು. 1999 ರಲ್ಲಿ ಎನ್‌ಸಿಪಿ ರಚನೆಯಾಯಿತು ಮತ್ತು ಅಂದಿನಿಂದ ಶರದ್ ಪವಾರ್ ಮಾಡಿದ ಜಾತೀಯತೆ ರಾಜ್ಯದಲ್ಲಿ ಏರಿತು. ಪವಾರ್ ಅವರ ಎನ್‌ಸಿಪಿ ಯಾವಾಗಲೂ ಜಾತಿಯ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ ಮತ್ತು ಜನರ ನಡುವೆ ಒಡಕು ಮೂಡಿಸಿದೆ. ಜಾತಿ ರಾಜಕಾರಣದಿಂದ ಹೊರಬರದಿದ್ದರೆ ಹಿಂದುವಾಗುವುದು ಹೇಗೆ? ನಾವು ಯಾವ ಹಿಂದುತ್ವದ ಧ್ವಜವನ್ನು ಹಿಡಿಯುತ್ತೇವೆ?” ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವನ್ನು ಶ್ಲಾಘಿಸಿದ ಠಾಕ್ರೆ ರಾಜ್ಯವು ಪ್ರಗತಿಯಲ್ಲಿದೆ ಮತ್ತು ಮಹಾರಾಷ್ಟ್ರದಲ್ಲಿ ಅದೇ ಅಭಿವೃದ್ಧಿಯನ್ನು ಅವರು ಬಯಸುತ್ತಾರೆ ಎಂದು ಹೇಳಿದರು. ಉತ್ತರ ಪ್ರದೇಶ ಪ್ರಗತಿಯಾಗುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ.ಮಹಾರಾಷ್ಟ್ರದಲ್ಲೂ ಅದೇ ಅಭಿವೃದ್ಧಿಯನ್ನು ಬಯಸುತ್ತೇವೆ.ನಾನು ಅಯೋಧ್ಯೆಗೆ ಭೇಟಿ ನೀಡುತ್ತೇನೆ ಆದರೆ ಇಂದು ಯಾವಾಗ ಎಂದು ಹೇಳುವುದಿಲ್ಲ. ಹಿಂದುತ್ವದ ಬಗ್ಗೆಯೂ ಮಾತನಾಡುತ್ತೇನೆ ಎಂದರು.
ಮಾಜಿ ರಾಜ್ಯ ಸಚಿವ ಅನಿಲ್ ದೇಶಮುಖ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭ್ರಷ್ಟಾಚಾರದ ಗಂಭೀರ ಆರೋಪಗಳಿಗಾಗಿ ಅವರು ಜೈಲಿನಲ್ಲಿದ್ದಾರೆ ಎಂದಿದ್ದಾರೆ. ಎನ್‌ಸಿಪಿ ನಾಯಕ ಮತ್ತು ಸಚಿವ ನವಾಬ್ ಮಲಿಕ್ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ಭೂಗತ ಪಾತಕಿಯೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಪಂಚಾಯತ್: ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಹಿಂದೂಗಳಿಗೆ ಕರೆ ನೀಡಿದ ಯತಿ ನರಸಿಂಗಾನಂದ್