Electric Car: ಮನೆಯಲ್ಲೇ ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸಿದ ಕೇರಳದ ವ್ಯಕ್ತಿ; ಕೇವಲ 5 ರೂ.ಗೆ 60 ಕಿ.ಮೀ. ಓಡುತ್ತೆ ಈ ಕಾರು!
ಈ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡಲು 5 ರೂ. ಖರ್ಚಾಗುತ್ತದೆ. 5 ರೂ. ಮೌಲ್ಯದ ಚಾರ್ಜ್ ಮಾಡಿದರೆ 60 ಕಿ.ಮೀ.ವರೆಗೂ ಈ ವಾಹನವನ್ನು ಚಲಾಯಿಸಬಹುದು. ಈ ವಾಹನ ಸಣ್ಣದಾಗಿರುವುದರಿಂದ ಕಿರಿದಾದ ರಸ್ತೆಗಳಲ್ಲೂ ಸುಲಭವಾಗಿ ಚಲಾಯಿಸಬಹುದು.
ತಿರುವನಂತಪುರಂ: ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಹೀಗಾಗಿ, ಜನರು ಎಲೆಕ್ಟ್ರಿಕ್ ವಾಹನದ (Electric Vehicle) ಕಡೆಗೆ ಒಲವು ತೋರಿಸುತ್ತಿದ್ದಾರೆ. ತಂತ್ರಜ್ಞಾನವು ವಿಕಸನಗೊಂಡಂತೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಸುಲಭವಾಗಿ ಪ್ರವೇಶಿಸುವಂತೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಅದೇನೇ ಇದ್ದರೂ, ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳು ಆರಂಭದಲ್ಲಿ ಕೊಳ್ಳುವಾಗ ಪೆಟ್ರೋಲ್, ಡೀಸೆಲ್ ವಾಹನಗಳಿಗಿಂತಲೂ ದುಬಾರಿಯಾಗಿರುತ್ತವೆ. ಇದೇ ಕಾರಣಕ್ಕೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಮಧ್ಯಮ ಮತ್ತು ಕೆಳವರ್ಗದವರು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ದುಬಾರಿಯಾಗಿವೆ. ದೇಶದಲ್ಲಿ ಲಭ್ಯವಿರುವ ಅಗ್ಗದ ಎಲೆಕ್ಟ್ರಿಕ್ ಕಾರು ಟಾಟಾ ಟಿಗೊರ್ EV ಆಗಿದ್ದು, ಇದರ ಬೆಲೆ 11.99 ಲಕ್ಷ ರೂ. (ಎಕ್ಸ್-ಶೋರೂಮ್)ಇದೆ. ಹಾಗೂ ಇದಕ್ಕೆ ವೇಯ್ಟಿಂಗ್ ಪಿರಿಯಡ್ ಕೂಡ ಹೆಚ್ಚಾಗಿರುತ್ತದೆ.
ಹೀಗಾಗಿ, ಕಡಿಮೆ ದರದಲ್ಲಿ ಎಲೆಕ್ಟ್ರಿಕ್ ವಾಹನವನ್ನು ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಕೇರಳದ ಕೆರಿಯರ್ ಕನ್ಸಲ್ಟೆಂಟ್ ಆಂಟೋನಿ ಜಾನ್ (67) ಅವರು ತಮ್ಮ ಮನೆ ಮತ್ತು ಕಚೇರಿಯ ನಡುವೆ 30 ಕಿ.ಮೀ ದೂರದಲ್ಲಿ ಓಡಿಸಲು ತಾವೇ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಲು ನಿರ್ಧರಿಸಿದರು. ಮೊದಲು, ಅವರು ತಮ್ಮ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಸ್ಕೂಟರ್ ಬಳಸುತ್ತಿದ್ದರು. ಅದರ ಬದಲಾಗಿ ಕಾರು ಕೊಳ್ಳಬೇಕೆಂದು ಅವರು ಎಲೆಕ್ಟ್ರಿಕ್ ಕಾರನ್ನು ಹುಡುಕಲು ಪ್ರಾರಂಭಿಸಿದರು. ಆದರೆ, ಆಗ ಅವರ ಬಜೆಟ್ಗೆ ಸರಿಹೊಂದುವ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಇರಲಿಲ್ಲ.
ಹೀಗಾಗಿ, 2018ರಲ್ಲಿ ಆಂಟೋನಿ ಜಾನ್ ತಾವೇ ಮನೆಯಲ್ಲಿ ಎಲೆಕ್ಟ್ರಿಕ್ ವಾಹನವನ್ನು ತಯಾರಿಸಲು ನಿರ್ಧರಿಸಿ, ಕಾರ್ಯೋನ್ಮುಖರಾದರು. ಕಾರಿನ ದೇಹವನ್ನು ನಿರ್ಮಿಸಲು, ಆಂಟೋನಿ ಅವರು ಬಸ್ ಬಾಡಿ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಗ್ಯಾರೇಜ್ ಅನ್ನು ಸಂಪರ್ಕಿಸಿದರು. ಗ್ಯಾರೇಜ್ ಅವರು ಆನ್‌ಲೈನ್‌ನಲ್ಲಿ ಪಡೆದ ಅವರ ವಿನ್ಯಾಸದ ಪ್ರಕಾರ ಕಾರಿನ ದೇಹವನ್ನು ನಿರ್ಮಿಸಿಕೊಟ್ಟರು. ಈ ಚಿಕ್ಕ ವಾಹನದಲ್ಲಿ ಇಬ್ಬರು ಕುಳಿತುಕೊಳ್ಳಬಹುದು. ಆಂಟೋನಿ ಅವರ ಈ ಕಾರಿನ ದೇಹವನ್ನು ವರ್ಕ್ಶಾಪ್ನಲ್ಲಿ ನಿರ್ಮಿಸಲಾಗಿದೆ. ಆದರೆ ಎಲೆಕ್ಟ್ರಿಕಲ್ ಕೆಲಸವನ್ನು ಸ್ವತಃ ಅವರೇ ಮಾಡಿದ್ದಾರೆ.
ದೆಹಲಿ ಮೂಲದ ಮಾರಾಟಗಾರರು ಆಂಟೋನಿ ಅವರಿಗೆ ಬ್ಯಾಟರಿಗಳು, ಮೋಟಾರ್ ಮತ್ತು ವೈರಿಂಗ್ ಒದಗಿಸಿದ್ದಾರೆ. ಕೊವಿಡ್ ಸಾಂಕ್ರಾಮಿಕ ರೋಗ ಮತ್ತು ಎಲೆಕ್ಟ್ರಿಕ್ ಕಾರ್ ತಯಾರಿಕೆಯಲ್ಲಿ ಅನುಭವದ ಕೊರತೆಯಿಂದಾಗಿ ಅವರು 2018ರಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ, ಅವರು ಕಾರಿನ ಬ್ಯಾಟರಿ ಸಾಮರ್ಥ್ಯ ಜಾಸ್ತಿ ಇರಬೇಕೆಂದು ಅಂದಾಜು ಮಾಡಿದರು. ಆದರೆ, ಇದು ಕಡಿಮೆ ಮೇಲೇಜ್ಗೆ ಕಾರಣವಾಯಿತು. ಬಳಿಕ ಲಾಕ್‌ಡೌನ್ ತೆರವಾದ ನಂತರ ಅವರು ಮತ್ತೆ ಮಾರಾಟಗಾರರನ್ನು ಸಂಪರ್ಕಿಸಿದಾಗ ಅವರು ಕಾರಿನ ಬ್ಯಾಟರಿಯನ್ನು ನವೀಕರಿಸಲು ಸಲಹೆ ನೀಡಿದರು.
ಎಲೆಕ್ಟ್ರಿಕ್ ಕಾರಿಗೆ ಹೊಸ ಬ್ಯಾಟರಿಯನ್ನು ಅಳವಡಿಸಿದ ನಂತರ, ಎಲೆಕ್ಟ್ರಿಕ್ ವಾಹನವು ಗರಿಷ್ಠ 60 ಕಿ.ಮೀ. ಮೇಲೇಜ್ ನೀಡಲಾರಂಭಿಸಿತು. ಈ ವಾಹನವನ್ನು ಚಾರ್ಜ್ ಮಾಡಲು 5 ರೂ. ಖರ್ಚಾಗುತ್ತದೆ. 5 ರೂ. ಮೌಲ್ಯದ ಚಾರ್ಜ್ ಮಾಡಿದರೆ 60 ಕಿ.ಮೀ.ವರೆಗೂ ಈ ವಾಹನವನ್ನು ಚಲಾಯಿಸಬಹುದು. ಈ ವಾಹನ ಸಣ್ಣದಾಗಿರುವುದರಿಂದ ಕಿರಿದಾದ ರಸ್ತೆಗಳಲ್ಲೂ ಸುಲಭವಾಗಿ ಚಲಾಯಿಸಬಹುದು.
ಈ ಎಲೆಕ್ಟ್ರಿಕ್ ವಾಹನವನ್ನು ಸಿದ್ಧಪಡಿಸಲು ಆಂಟೋನಿ ಅವರಿಗೆ 4.5 ಲಕ್ಷ ರೂ. ಖರ್ಚಾಗಿದೆ. ಇವರ ವಾಹನವನ್ನು ನೋಡಿ ಬೇರೆಯವರು ಕೂಡ ತಮಗೂ ಈ ರೀತಿಯ ಕಾರು ಸಿದ್ಧಪಡಿಸಿಕೊಡಲು ಹೇಳಿರುವುದರಿಂದ ಮತ್ತೆ ಹೊಸ ಕಾರುಗಳನ್ನು ಅವರು ಸಿದ್ಧಪಡಿಸುತ್ತಿದ್ದಾರೆ.
ಇದನ್ನೂ ಓದಿ: Electric air taxis: ಶೀಘ್ರದಲ್ಲೇ ಶುರುವಾಗಲಿದೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ..!