ನ್ಯಾಯಾಂಗದ ಮೇಲೆ ನಂಬಿಕೆ ಇದೆ: ಸತ್ಯೇಂದರ್ ಜೈನ್ ಬಂಧನ ಬಗ್ಗೆ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯೆ

| Updated By: ರಶ್ಮಿ ಕಲ್ಲಕಟ್ಟ

Updated on: May 31, 2022 | 2:38 PM

ನಾನು ಸತ್ಯೇಂದರ್ ಜೈನ್ ಬಂಧನ ಪ್ರಕರಣ ಬಗ್ಗೆ ತಿಳಿದುಕೊಂಡಿದ್ದೇನೆ. ನಾವು  ಭ್ರಷ್ಟಾಚಾರ ಮಾಡುವುದಿಲ್ಲ, ಭ್ರಷ್ಟಾಚಾರವನ್ನು ಸಹಿಸುವುದೂ ಇಲ್ಲ. ನಮ್ಮಲ್ಲಿ ತುಂಬಾ ಪ್ರಾಮಾಣಿಕವಾದ ಸರ್ಕಾರವಿದೆ

ನ್ಯಾಯಾಂಗದ ಮೇಲೆ ನಂಬಿಕೆ ಇದೆ: ಸತ್ಯೇಂದರ್ ಜೈನ್ ಬಂಧನ ಬಗ್ಗೆ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯೆ
ಆಪ್ ನಾಯಕ ಅರವಿಂದ ಕೇಜ್ರಿವಾಲ್
Follow us on

ದೆಹಲಿ: ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ (Satyendar Jain) ಮೇಲಿನ ಆರೋಪ ಸತ್ಯಕ್ಕೆ ದೂರವಾದುದು. ನಮ್ಮ  ಸರ್ಕಾರ ಪ್ರಾಮಾಣಿಕವಾಗಿದೆ. ನಾವು  ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಜೈನ್ ಮೇಲಿರುವುದು ಸುಳ್ಳು ಪ್ರಕರಣ, ನಾವು ಸತ್ಯದ ದಾರಿಯಲ್ಲಿ ನಡೆಯುತ್ತಿದ್ದೇವೆ ಎಂದು ಸುದ್ದಿಗಾರರರೊಂದಿಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal) ಹೇಳಿದ್ದಾರೆ. ಅಕ್ರಮ ಹಣ ವ್ಯವಹಾರ ಆರೋಪದಲ್ಲಿ(money laundering case) ಜೈನ್ ಅವರನ್ನು ಸೋಮವಾರ ಇಡಿ ಬಂಧಿಸಿದೆ.  ನಾನು ಸತ್ಯೇಂದರ್ ಜೈನ್ ಬಂಧನ ಪ್ರಕರಣ ಬಗ್ಗೆ ತಿಳಿದುಕೊಂಡಿದ್ದೇನೆ. ನಾವು  ಭ್ರಷ್ಟಾಚಾರ ಮಾಡುವುದಿಲ್ಲ, ಭ್ರಷ್ಟಾಚಾರವನ್ನು ಸಹಿಸುವುದೂ ಇಲ್ಲ. ನಮ್ಮಲ್ಲಿ ತುಂಬಾ ಪ್ರಾಮಾಣಿಕವಾದ ಸರ್ಕಾರವಿದೆ.  ರಾಜಕೀಯ ಉದ್ದೇಶದಿಂದ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ ಕೇಜ್ರಿವಾಲ್. ಹಿಮಾಚಲ ಪ್ರದೇಶ ಚುನಾವಣೆ ಉಸ್ತುವಾರಿ ಜೈನ್ ಅವರಿಗೆ ವಹಿಸಲಾಗಿದೆ. ಈ ಕಾರಣದಿಂದಲೇ ಕೇಂದ್ರ ತನಿಖಾ ಸಂಸ್ಥೆ ಜೈನ್ ವಿರುದ್ಧ ಕ್ರಮ ತೆಗೆದುಕೊಂಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ.

ಭ್ರಷ್ಟಾಚಾರದ ಆರೋಪದ ಮೇಲೆ ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯ ಸಂಪುಟದಿಂದ ಇತ್ತೀಚೆಗೆ ವಜಾಗೊಳಿಸಿರುವುದನ್ನು ಉಲ್ಲೇಖಿಸಿದ ದೆಹಲಿ ಮುಖ್ಯಮಂತ್ರಿ, ತಮ್ಮ ಪಕ್ಷದ ಸರ್ಕಾರವೇ ಈ ಕ್ರಮ  ತೆಗೆದುಕೊಂಡಿತು. ಅವರು ಸಾಕ್ಷ್ಯವನ್ನು ನಿರ್ಲಕ್ಷಿಸಿದಾಗ ಸಚಿವರನ್ನು ಬಂಧಿಸಲಾಯಿತು ಎಂದು ಹೇಳಿದರು.

“ಯಾವುದೇ ತನಿಖಾ ಸಂಸ್ಥೆ ಅಥವಾ ವಿರೋಧ ಪಕ್ಷ ಊಹಿಸಲೂ  ಸಾಧ್ಯವಾಗದ ರಾಜ್ಯ ಸಚಿವರ ಆಡಿಯೊ ರೆಕಾರ್ಡಿಂಗ್ ಅನ್ನು ನೀವು ಪಂಜಾಬ್‌ನಲ್ಲಿ ನೋಡಿದ್ದೀರಿ. ನಾವು ಬಯಸಿದರೆ ನಾವು ಅದನ್ನು ಹತ್ತಿಕ್ಕಬಹುದಿತ್ತು ಆದರೆ ನಾವು ಅವರ ವಿರುದ್ಧ ನಾವೇ ಕ್ರಮ ಕೈಗೊಂಡಿದ್ದೇವೆ ಮತ್ತು ಅವರನ್ನು ಬಂಧಿಸಿದ್ದೇವೆ” ಎಂದು  ಕೇಜ್ರಿವಾಲ್ ಹೇಳಿದರು.

ರಾಜ್ಯ ಸಚಿವ ಸಂಪುಟದಿಂದ ಸಚಿವರನ್ನು ವಜಾಗೊಳಿಸಿದ ಮತ್ತು ಅದರ ಬಗ್ಗೆ ಸ್ವತಃ ಕೇಂದ್ರ ತನಿಖಾ ಸಂಸ್ಥೆಗೆ ತಿಳಿಸಿದ್ದ ದೆಹಲಿಯಲ್ಲಿ ಐದು ವರ್ಷಗಳ ಹಿಂದಿನ ಘಟನೆಯನ್ನು ಕೇಜ್ರಿವಾಲ್ ನೆನಪಿಸಿದರು. “ನಾವು ತನಿಖಾ ಸಂಸ್ಥೆಗಳಿಗಾಗಿ ಕಾಯುವುದಿಲ್ಲ, ನಾವೇ ಕ್ರಮ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ ದೆಹಲಿ ಸಿಎಂ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 1:41 pm, Tue, 31 May 22