ಮುಂಬೈ: ಈಗಾಗಲೇ ನರೇಂದ್ರ ಮೋದಿ (Narendra Modi) 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ (PM Oath Taking Ceremony) ಸ್ವೀಕರಿಸಿದ್ದಾರೆ. ಇಂದು ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಕೂಡ ಆಗಿದೆ. ಈ ನಡುವೆ ಎನ್ಡಿಎ ಬಣದಲ್ಲಿ ಅಸಮಾಧಾನ ಉಂಟಾಗಿದ್ದು, ಬಿಜೆಪಿಯ ಮಿತ್ರಪಕ್ಷವಾದ ಶಿವಸೇನಾ ಏಕನಾಥ್ ಶಿಂಧೆ ಬಣದ ಸಂಸದ ಶ್ರೀರಂಗ್ ಬಾರ್ನೆ ಅವರು ಮೋದಿ ಸರ್ಕಾರದಲ್ಲಿನ ಪಕ್ಷಪಾತವನ್ನು ಖಂಡಿಸಿದ್ದಾರೆ. ಹೊಸದಾಗಿ ರಚನೆಯಾದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಚಿವ ಸಂಪುಟದಿಂದ ಶಿವಸೇನೆ ಶಿಂಧೆ ಬಣವನ್ನು ಹೊರಗಿಟ್ಟಿರುವ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನೂತನ ಮೋದಿ ಸಂಪುಟ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ಬಳಿಕ ಶಿಂಧೆ ಬಣದ ಈ ಹೇಳಿಕೆ ಬಂದಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಭಾಗವೂ ಸಹ ಕ್ಯಾಬಿನೆಟ್ ಸ್ಥಾನಕ್ಕಾಗಿ ಒತ್ತಾಯಿಸಿದೆ. ರಾಜ್ಯ ಸಚಿವ ಸ್ಥಾನ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಿದೆ.
‘ಶಿವಸೇನೆಗೆ ಕ್ಯಾಬಿನೆಟ್ ಸಚಿವ ಸ್ಥಾನ ಸಿಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು’ ಎಂದು ಶಿವಸೇನಾ ಏಕನಾಥ್ ಶಿಂಧೆ ಬಣದ ಸಂಸದ ಶ್ರೀರಂಗ್ ಬಾರ್ನೆ ಅಸಮಾಧಾನ ಹೊರಹಾಕಿದ್ದಾರೆ. ಶಿವಸೇನೆಯ (ಯುಬಿಟಿ) ಸಂಜೋಗ್ ವಾಘೆರೆ ಪಾಟೀಲ್ ಅವರನ್ನು ಸೋಲಿಸುವ ಮೂಲಕ ಮಾವಲ್ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ ಬಾರ್ನೆ, ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ 7 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೂ, ಪಕ್ಷಕ್ಕೆ ಕೇವಲ ರಾಜ್ಯ ಸಚಿವ ಸ್ಥಾನವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಕಲಿ ಶಿವಸೇನೆಯವರು ನನ್ನನ್ನು ಜೀವಂತ ಸಮಾಧಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ: ನರೇಂದ್ರ ಮೋದಿ
ಹೆಚ್.ಡಿ ಕುಮಾರಸ್ವಾಮಿ ಮತ್ತು ಜಿತನ್ ರಾಮ್ ಮಾಂಝಿ ಅವರಂತಹ ನಾಯಕರ ಪಕ್ಷಗಳು ಕ್ರಮವಾಗಿ 2 ಮತ್ತು 1 ಸ್ಥಾನವನ್ನು ಗೆದ್ದಿದ್ದವು. ಅವರನ್ನು ಕೇಂದ್ರ ಕ್ಯಾಬಿನೆಟ್ ಮಂತ್ರಿಗಳಾಗಿ ನೇಮಿಸಲಾಗಿದೆ ಎಂದು ಬಾರ್ನೆ ಬೇಸರ ಹೊರಹಾಕಿದ್ದಾರೆ. ಸತಾರದ ಬಿಜೆಪಿ ಸಂಸದ ಉದಯನರಾಜೆ ಭೋಸಲೆ ಅವರು ಸಂಪುಟ ಸ್ಥಾನಕ್ಕೆ ಅರ್ಹರು ಎಂದು ಅವರು ಒತ್ತಿ ಹೇಳಿದ್ದಾರೆ.
#WATCH | Pimpri Chinchwad, Maharashtra | On Shiv Sena getting one MoS seat in Central govt, party MP Shrirang Barne says, “Shiv Sena is an old ally of BJP-NDA. Yesterday, Shiv Sena got one MoS seat, but I think the party should have got a Cabinet berth like Majhi ji’s and… pic.twitter.com/G1R5V71M5O
— ANI (@ANI) June 10, 2024
“ಶಿವಸೇನೆಗೆ ಕ್ಯಾಬಿನೆಟ್ ಮಂತ್ರಿಗಿರಿ ಸಿಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ, ಕೇವಲ 1 ಸ್ಥಾನವನ್ನು ಗೆದ್ದ ಪಕ್ಷಗಳು ಕೂಡ ಕ್ಯಾಬಿನೆಟ್ ಸ್ಥಾನವನ್ನು ಪಡೆದಿವೆ. ಉದಾಹರಣೆಗೆ, ಕರ್ನಾಟಕದಲ್ಲಿ 2 ಸ್ಥಾನ, ಬಿಹಾರದಿಂದ ಒಂದು ಸ್ಥಾನವನ್ನು ಗೆದ್ದವರಿಗೆ ಕ್ಯಾಬಿನೆಟ್ ಸ್ಥಾನವನ್ನೂ ನೀಡಲಾಯಿತು” ಎಂದು ಬಾರ್ನೆ ಟೀಕಿಸಿದ್ದಾರೆ.
ಹೊಸ ಮೋದಿ ಸರ್ಕಾರದಲ್ಲಿ ಶಿವಸೇನೆ ಶಿಂಧೆ ಬಣದ ಪ್ರತಾಪ್ರಾವ್ ಜಾಧವ್ ಅವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆಯಲು ಶಿವಸೇನೆಯೂ ಕಾರಣ: ಸಂಜಯ್ ರಾವತ್
ಮಹಾರಾಷ್ಟ್ರದಲ್ಲಿ ಸ್ಪರ್ಧಿಸಿದ್ದ 15 ಸ್ಥಾನಗಳಲ್ಲಿ ಶಿವಸೇನೆ 7 ಸ್ಥಾನಗಳನ್ನು ಗೆದ್ದಿದೆ. ಆದರೆ, ಬಿಜೆಪಿ 28ರಲ್ಲಿ 9 ಸ್ಥಾನಗಳನ್ನು ಗೆದ್ದಿದೆ ಎಂದು ಬಾರ್ನೆ ಹೇಳಿದ್ದಾರೆ. “ನಾವು ಬಿಜೆಪಿಯ ಹಳೆಯ ಮಿತ್ರ ಪಕ್ಷವಾಗಿರುವ ಶಿವಸೇನೆಗೆ ಕನಿಷ್ಠ 1 ಕ್ಯಾಬಿನೆಟ್ ಮತ್ತು 1 ಎಂಒಎಸ್ ಸ್ಥಾನವನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. ಶ್ರೀರಂಗ್ ಬಾರ್ನೆ ಅವರು ಕ್ಯಾಬಿನೆಟ್ ಸ್ಥಾನಗಳ ಹಂಚಿಕೆಯಲ್ಲಿ ಪಕ್ಷಪಾತವನ್ನು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕ್ಯಾಬಿನೆಟ್ ಸ್ಥಾನಗಳ ಹಂಚಿಕೆಯಲ್ಲಿ ಪಕ್ಷಪಾತವಿದೆ ಎಂದು ಆರೋಪಿಸಿದ ಬಾರ್ನೆ, ಜೆಡಿಯು ಮತ್ತು ಟಿಡಿಪಿ ನಂತರ ಶಿವಸೇನೆ ಬಿಜೆಪಿಯ ಮೂರನೇ ಅತಿದೊಡ್ಡ ಮಿತ್ರ ಪಕ್ಷವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
“5 ಸ್ಥಾನಗಳನ್ನು ಗೆದ್ದ ಚಿರಾಗ್ ಪಾಸ್ವಾನ್ ಅವರಿಗೂ ಕ್ಯಾಬಿನೆಟ್ ಸ್ಥಾನ ನೀಡಲಾಯಿತು. ಆದರೆ ಶಿವಸೇನೆಗೆ ಕೇವಲ 1 ರಾಜ್ಯ ಖಾತೆ ಸ್ಥಾನ ಸಿಕ್ಕಿತು. ಶಿವಸೇನೆ ಬಗ್ಗೆ ಪಕ್ಷಪಾತ ಮಾಡಲಾಗಿದೆ ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಮುಂದಿನ 3 ತಿಂಗಳಲ್ಲಿ ನಾವು ಒಟ್ಟಾಗಿ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ. ಶಿವಸೇನೆಗೆ ನ್ಯಾಯಯುತವಾದ ಚಿಕಿತ್ಸೆ ಸಿಗಬೇಕು ಎಂದು ಹೇಳಿದ್ದಾರೆ.
ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಬೇರ್ಪಟ್ಟರು. ಜೂನ್ 2022ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಸೇರಿಕೊಂಡರು. ಅವರಿಗೆ ನಿಷ್ಠರಾಗಿರುವ ಗಮನಾರ್ಹ ಸಂಖ್ಯೆಯ ಶಾಸಕರನ್ನು ತಮ್ಮೊಟ್ಟಿಗೆ ಕರೆತಂದರು. ಇದರ ಬೆನ್ನಲ್ಲೇ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ