ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆದು, ಸಂಸತ್ತಿನಲ್ಲಿ ಕೂಡ ಅದನ್ನು ರದ್ದುಗೊಳಿಸಿದೆ. ಹಾಗಿದ್ದಾಗ್ಯೂ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಮಧ್ಯೆ ಗೃಹ ಸಚಿವ ಅಮಿತ್ ಅವರನ್ನು ರೈತರನ್ನು ಮಾತುಕತೆಗೆ ಆಹ್ವಾನಿಸಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸಿದ್ಧರಿದ್ದೇವೆ. ಈ ಬಗ್ಗೆ ಮುಕ್ತ ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ. ಹೀಗಾಗಿ ಇಷ್ಟು ದಿನ ರೈತ ಪ್ರತಿಭಟನೆ ಮುನ್ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ ಇಂದು ಸಿಂಘು ಗಡಿಯಲ್ಲಿ ಆಂತರಿಕ ಸಭೆ ನಡೆಸಿ, ಐದು ರೈತ ಮುಖಂಡರನ್ನೊಳಗೊಂಡ ಸಮಿತಿ ರಚಿಸಿದೆ. ಈ ಸಮಿತಿ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಲಿದೆ. ಈ ಕಮಿಟಿಯಲ್ಲಿ ರೈತ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್, ಶಿವಕುಮಾರ್ ಕಕ್ಕಾ, ಗುರ್ನಾಮ್ ಸಿಂಗ್ ಚರುನಿ, ಯದ್ವೀರ್ ಸಿಂಗ್ ಮತ್ತು ಅಶೋಕ್ ಧಾವಲೆ ಇರಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ ಮುಂದಿನ ಸಭೆ ಡಿಸೆಂಬರ್ 7ರಂದು ನಡೆಯಲಿದೆ ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಆದರೆ ಈ ಮಧ್ಯೆ ರೈತ ಮುಖಂಡ ದರ್ಶನ್ ಪಾಲ್ ಸಿಂಗ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದು, ನಾವು ಕೇಂದ್ರ ಸರ್ಕಾರದ ಜತೆಗೆ ಮಾತುಕತೆ ನಡೆಸುತ್ತೇವೆ. ಆದರೆ ಈ ಒಂದು ವರ್ಷದಲ್ಲಿ ಪ್ರತಿಭಟನೆ ಮಾಡುತ್ತಿರುವ ಹಲವು ರೈತರ ವಿರುದ್ಧ ಕೆಲವು ಪ್ರಕರಣಗಳು ದಾಖಲಾಗಿವೆ. ಅವಿಷ್ಟನ್ನೂ ವಾಪಸ್ ಪಡೆದ ವಿನಃ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ, ಸಿಂಘು ಗಡಿ ಬಿಟ್ಟು ಕದಲುವುದಿಲ್ಲ. ಇದು ನನ್ನೊಬ್ಬನ ಮಾತಲ್ಲ, ಇಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿ ರೈತಸಂಘಟನೆಗಳೂ ಇದನ್ನೇ ಹೇಳುತ್ತಿವೆ. ಕೇಸ್ಗಳನ್ನು ಹಿಂಪಡೆದ ಹೊರತು ನಾವ್ಯಾರೂ ಆಂದೋಲನ ನಡೆಸುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸ್ಪಷ್ಟ ಸಂದೇಶ ಕಳಿಸಿದ್ದೇವೆ ಎಂದಿದ್ದಾರೆ.
ಸದ್ಯ ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಪಟ್ಟಂತೆ ನಮ್ಮ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದೇವೆ. ಹಾಗೇ, ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ನೀಡುವ ಮತ್ತು ರೈತರ ವಿರುದ್ಧ ದಾಖಲಿಸಲಾದ ಸುಳ್ಳು ಪ್ರಕರಣಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ. ಅಷ್ಟೇ ಅಲ್ಲ, ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆಯೂ ನಾವು ಕೆಲವು ವಿಷಯಗಳನ್ನು ಚರ್ಚಿಸಿದ್ದೇವೆ ಎಂದು ರೈತ ಮುಖಂಡ ಅಶೋಕ್ ಧಾವಲೆ ತಿಳಿಸಿದ್ದಾರೆ.
ಕಳೆದ ವರ್ಷ ಮುಂಗಾರು ಅಧಿವೇಶನದಲ್ಲಿ ಮೂರು ಕೃಷಿ ಮಸೂದೆಗಳನ್ನು ಕೇಂದ್ರ ಸರ್ಕಾರ ಪಾಸ್ ಮಾಡಿ, ಅದನ್ನು ಕಾಯ್ದೆಗಳನ್ನಾಗಿ ರೂಪಿಸಿತ್ತು. ಆದರೆ ವ್ಯಾಪಕ ವಿರೋಧ, ರೈತಸಂಘಟನೆಗಳು ವರ್ಷದಿಂದ ನಡೆಸುತ್ತಿರುವ ತೀವ್ರತರನಾದ ಪ್ರತಿಭಟನೆ ಹಿನ್ನೆಲೆಯಲ್ಲಿ ನವೆಂಬರ್ 19ರಂದು (ಗುರುನಾನಕ ಜಯಂತಿ) ಪ್ರಧಾನಿ ಮೋದಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದರು. ಆದರೆ ಅಷ್ಟಕ್ಕೇ ಪ್ರತಿಭಟನೆ ನಿಲ್ಲಿಸದ ರೈತ ಮುಖಂಡರು, ಸಂಸತ್ತಿನಲ್ಲಿಯೂ ಕಾಯ್ದೆ ರದ್ದಾಗಬೇಕು ಎಂದಿದ್ದರು. ಅದರಂತೆ ನವೆಂಬರ್ 29ರಂದು ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳ ರದ್ದತಿ ಮಸೂದೆಯನ್ನು ಕೇಂದ್ರ ಸರ್ಕಾರ ಅಂಗೀಕಾರ ಮಾಡಿದೆ. ಆದರೆ ಈಗಲೂ ರೈತ ಸಂಘಟನೆಗಳು ಗಡಿ ಪ್ರದೇಶದಿಂದ ಕದಲುತ್ತಿಲ್ಲ. ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಗ್ಯಾರಂಟಿ ಕೊಡಬೇಕು, ರೈತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟಿವೆ.
ಇದನ್ನೂ ಓದಿ: ಝೂನಿಂದ ಎರಡು ಸಿಂಹಗಳನ್ನು ದತ್ತು ಪಡೆದ ರಾಮ್ ಚರಣ್ ಪತ್ನಿ ಉಪಾಸನಾ
Published On - 7:54 pm, Sat, 4 December 21