ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು: ಕೇರಳ ಸಿಎಂ ಪಿಣರಾಯಿ ವಿಜಯನ್
ಸುಮಾರು 3,379 ಮಲಯಾಳಿ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಮತ್ತು ಮುಂಬೈ ಹಾಗೂ ದೆಹಲಿಯಲ್ಲಿರುವ ಅನಿವಾಸಿ ಕೇರಳಿಗರ ವ್ಯವಹಾರಗಳ ಅಭಿವೃದ್ಧಿ ಇಲಾಖೆ (NORKA)ಯ ಸಹಕಾರದಿಂದ ಉಕ್ರೇನ್ನಿಂದ ವಾಪಸ್ ರಾಜ್ಯಕ್ಕೆ ಬಂದಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.
ಯುದ್ಧ ನೆಲ ಉಕ್ರೇನ್ನಿಂದ (War hit Ukraine) ವಾಪಸ್ ಬಂದಿರುವ ಕೇರಳದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಮುಂದುವರಿಸಲು ಕೇರಳ ಸರ್ಕಾರ ಎಲ್ಲ ರೀತಿಯ ಅನುಕೂಲ ಮಾಡಿಕೊಡುವುದಾಗಿ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ವೈದ್ಯಕೀಯ ಮತ್ತಿ ಇನ್ನಿತರ ಕೋರ್ಸ್ಗಳನ್ನು ಅರ್ಧಕ್ಕೆ ಬಿಟ್ಟು ಹಲವು ವಿದ್ಯಾರ್ಥಿಗಳು ಬಂದಿದ್ದಾರೆ. ಅವರಿಗೆ ರಾಜ್ಯದಲ್ಲಿಯೇ ಶಿಕ್ಷಣ ಮುಂದುವರಿಸಲು ಏನೆಲ್ಲ ವ್ಯವಸ್ಥೆ ಮಾಡಬೇಕು ಅದನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಸಿಎಂ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC-National Medical Commission) ಕ್ಕೂ ತಿಳಿಸಿದ್ದಾರೆ.
ಉಕ್ರೇನ್ನಿಂದ ಬಂದಿರುವ ಕೇರಳದ ವಿದ್ಯಾರ್ಥಿಗಳಿಗೆ ಅವರ ಒಂದು ವರ್ಷದ ಇಂಟರ್ನ್ಶಿಪ್ ಮತ್ತು ಬಾಕಿ ಉಳಿದಿರುವ ವರ್ಷದ ಅಧ್ಯಯನಕ್ಕೆ ಸಂಯೋಜಿತ ವೈದ್ಯಕೀಯ ಕಾಲೇಜುಗಳು ಮತ್ತು ಅವುಗಳ ಆಸ್ಪತ್ರೆಗಳಲ್ಲಿ ತಾತ್ಕಾಲಿಕವಾದ, ಶುಲ್ಕ ರಹಿತ ನೋಂದಣಿ ನೀಡುವಂತೆ ರಾಜ್ಯ ವೈದ್ಯಕೀಯ ಮಂಡಳಿಗೆ ಸೂಚಿಸಲಾಗಿದೆ ಎಂದೂ ಪಿಣರಾಯಿ ವಿಜಯನ್ ಕೇರಳ ವಿಧಾನಸಭೆ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ಸಿಪಿಐ (ಎಂ) ಶಾಸಕ ಸಿ.ಎಕ.ಹರೀಂದ್ರನ್ ಅವರ ಪ್ರಶ್ನೆಗೆ ಉತ್ತರಿಸುತ್ತ ಈ ವಿಷಯಗಳನ್ನು ತಿಳಿಸಿದ್ದಾರೆ. ಕೇರಳದ ವಿದ್ಯಾರ್ಥಿಗಳು ಹಲವರು ಉಕ್ರೇನ್ನಿಂದ ಬಂದಿದ್ದಾರೆ. ಅಲ್ಲಿನ ಯುದ್ಧದಿಂದಾಗಿ ಅವರ ಶಿಕ್ಷಣ ಅರ್ಧಕ್ಕೇ ಕಡಿತಗೊಂಡಿದೆ. ಈಗ ಅವರ ಪಾಡೇನು? ಅವರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಏನೆಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ಹರೀಂದ್ರನ್ ಪ್ರಶ್ನೆ ಕೇಳಿದ್ದರು. ಈ ವೇಳೆ ಪಿಣರಾಯಿ ವಿಜಯನ್ ಹೀಗೆ ಉತ್ತರಿಸಿದ್ದಾರೆ.
ಸುಮಾರು 3,379 ಮಲಯಾಳಿ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಮತ್ತು ಮುಂಬೈ ಹಾಗೂ ದೆಹಲಿಯಲ್ಲಿರುವ ಅನಿವಾಸಿ ಕೇರಳಿಗರ ವ್ಯವಹಾರಗಳ ಅಭಿವೃದ್ಧಿ ಇಲಾಖೆ (NORKA)ಯ ಸಹಕಾರದಿಂದ ಉಕ್ರೇನ್ನಿಂದ ವಾಪಸ್ ರಾಜ್ಯಕ್ಕೆ ಬಂದಿದ್ದಾರೆ. ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಪಾತ್ರ ವಹಿಸಿದೆ. ಹೀಗೆ ಅಲ್ಲಿಂದ ಬಂದಿರುವವರ ಶಿಕ್ಷಣದ ಜವಾಬ್ದಾರಿ ನಮ್ಮದು. ಅವರು ಕೋರ್ಸ್ಗಳನ್ನು ಮುಂದುವರಿಸಿ, ಸರ್ಟಿಫಿಕೆಟ್ ಪಡೆಯಲು ವ್ಯವಸ್ಥೆ ಮಾಡಲಾಗುವುದು ಎಂದೂ ಸಿಎಂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ನಿಂದ ಹೊರಬಿದ್ದಿರುವ ಸುಮಾರು 28 ಲಕ್ಷ ನಿರಾಶ್ರಿತರು ಯಾವ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿದ್ದಾರೆ?
Published On - 8:38 am, Tue, 15 March 22