ಉಕ್ರೇನ್​ನಿಂದ ಹೊರಬಿದ್ದಿರುವ ಸುಮಾರು 28 ಲಕ್ಷ ನಿರಾಶ್ರಿತರು ಯಾವ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿದ್ದಾರೆ?

ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರು ಸೇರಿದಂತೆ ತೃತೀಯ ರಾಷ್ಟ್ರಗಳ ಸುಮಾರು 1,27,000 ನಾಗರಿಕರು, ಉಕ್ರೇನ್‌ನಿಂದ ಪಲಾಯನ ಮಾಡಿರುವ 2.8 ಮಿಲಿಯನ್‌ಗಳಲ್ಲಿ ಸೇರಿದ್ದಾರೆ ಎಂದು ಐಒಎಮ್ ಹೇಳಿದೆ.

ಉಕ್ರೇನ್​ನಿಂದ ಹೊರಬಿದ್ದಿರುವ ಸುಮಾರು 28 ಲಕ್ಷ ನಿರಾಶ್ರಿತರು ಯಾವ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿದ್ದಾರೆ?
ಉಕ್ರೇನ್ ತೊರೆಯುತ್ತಿರುವ ನಿರಾಶ್ರಿತರು
Follow us
TV9 Web
| Updated By: shivaprasad.hs

Updated on: Mar 15, 2022 | 9:35 AM

ಜಿನೀವಾ: ವಿಶ್ವಸಂಸ್ಥೆ ಸೋಮವಾರ ಬಿಡುಗಡೆ ಮಾಡಿರುವ ವರದಿಯೊಂದರ ಪ್ರಕಾರ ರಷ್ಯಾ, ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಫೆಬ್ರವರಿ 24 ರಿಂದ ಮಾರ್ಚ್ 14 ರವರೆಗೆ 28 ಲಕ್ಷಕ್ಕಿಂತಲೂ ಹೆಚ್ಚು ಉಕ್ರೇನಿಯನ್ ನಿರಾಶ್ರಿತರು ಬೇರೆ ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ. 28,08,792 ನಿರಾಶ್ರಿತರು ಉಕ್ರೇನ್ ನಿಂದ ಹೊರಬಿದ್ದಿದ್ದಾರೆ, ರವಿವಾರ ಒಂದೇ ದಿನ 1,10,152 ನಿರಾಶ್ರಿತರು ದೇಶ ತೊರೆದಿದ್ದಾರೆ ಎಂದಿರುವ ವಿಶ್ವಸಂಸ್ಥೆ ನಿರಾಶ್ರಿತರ ಏಜೆನ್ಸಿ ಎನ್ ಹೆಚ್ ಸಿ ಆರ್ (UNHCR), ಎರಡನೇ ಮಹಾಯುದ್ಧದ (World War II) ನಂತರ ತಮ್ಮ ದೇಶವೊಂದನ್ನು ತೊರೆದ ಅತಿದೊಡ್ಡ ನಿರಾಶ್ರಿತರ ಸಂಖ್ಯೆ ಇದಾಗಿದೆ ಎಂದು ಹೇಳಿದೆ.

10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು ಭದ್ರತೆ ಮತ್ತು ಸುರಕ್ಷತೆಯನ್ನು ಅರಸಿ ಉಕ್ರೇನ್ ನಿಂದ ಹೊರಬಿದ್ದಿವೆ ಎಂದು ಹೇಳಿರುವ ಯುನಿಸೆಫ್ (UNICEF) ಈ ಮಕ್ಕಳಿಗೆ ಈಗ ಮನಶ್ಶಾಂತಿ ಬೇಕಾಗಿದೆ ಎಂದಿದೆ.

ಯು ಎನ್ ಹೆಚ್ ಸಿ ಆರ್ ನ ಮೊದಲ ಅಂದಾಜಿನ ಪ್ರಕಾರ ಉಕ್ರೇನ್ ದೇಶವನ್ನು ತೊರೆಯುವ ನಿರಾಶ್ರಿತರ ಸಂಖ್ಯೆ 40 ಲಕ್ಷ ಮೀರಬೇಕಿತ್ತು. ಆದರೆ ಕಳೆದ ವಾರ ಹೇಳಿಕೆಯೊಂದನ್ನು ನೀಡಿ ಸದರಿ ಸಂಖ್ಯೆ ಪರಷ್ಕೃತಗೊಳ್ಳಲಿದೆ ಅಂತ ಹೇಳಿತ್ತು.

ಯುದ್ಧ ಶುರುವಾಗುವ ಮೊದಲು ರಷ್ಯಾದ ವಶದಲ್ಲಿರುವ ಕ್ರಿಮಿಯಾ ಮತ್ತು ಸ್ಯತಂತ್ರ ಪ್ರಾಂತ್ಯಗಳೆಂದು ಘೋಷಿಸಿಕೊಂಡಿರುವ ಪೂರ್ವ ಉಕ್ರೇನ್ ಪ್ರಾಂತ್ಯಗಳನ್ನು ಬಿಟ್ಟು ಉಕ್ರೇನ್ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲ ಪ್ರಾಂತ್ಯಗಳ ಒಟ್ಟಾರೆ ಜನಸಂಖ್ಯೆ 3 ಕೋಟಿ 70 ಲಕ್ಷ (37 ದಕ್ಷಲಕ್ಷ) ಆಗಿತ್ತು.

‘ಯುದ್ಧಗ್ರಸ್ಥ ಉಕ್ರೇನ್ ಅನ್ನು ಜನ ಪ್ರತಿ ನಿಮಿಷ ತೊರೆಯುತ್ತಿದ್ದಾರೆ,’ ಎಂದು ಯುಎನ್ ವಲಸೆ ಅಂತರರಾಷ್ಟ್ರೀಯ ಸಂಸ್ಥೆ (ಐಒಎಮ್) ಹೇಳಿದೆ.

ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರು ಸೇರಿದಂತೆ ತೃತೀಯ ರಾಷ್ಟ್ರಗಳ ಸುಮಾರು 1,27,000 ನಾಗರಿಕರು, ಉಕ್ರೇನ್‌ನಿಂದ ಪಲಾಯನ ಮಾಡಿರುವ 2.8 ಮಿಲಿಯನ್‌ಗಳಲ್ಲಿ ಸೇರಿದ್ದಾರೆ ಎಂದು ಐಒಎಮ್ ಹೇಳಿದೆ.

ಉಕ್ರೇನ್‌ನ ಏಳು ನೆರೆಯ ದೇಶಗಳಿಗೆ ಹೋಗಿರುವ ಅನೇಕ ನಿರಾಶ್ರಿತರು ಅಲ್ಲಿಂದ ಇತರ ರಾಷ್ಟ್ರಗಳಿಗೆ ಅದರಲ್ಲೂ ವಿಶೇಷವಾಗಿ ಪಶ್ಚಿಮ ಯುರೋಪ್‌ಗೆ ಪ್ರಯಾಣಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಉಕ್ರೇನ್‌ನಿಂದ ನಿರಾಶ್ರಿತರು ಎಲ್ಲೆಲ್ಲಿಗೆ ಹೋಗಿದ್ದಾರೆ ಎಂಬ ವಿವರವನ್ನು ಯು ಎನ್ ಹೆಚ್ ಸಿ ಅರ್ ನೀಡಿದೆ.

ಪೋಲೆಂಡ್

ಉಕ್ರೇನಿನ 10 ನಿರಾಶ್ರಿತರ ಪೈಕಿ 6 ಜನ ಪೋಲೆಂಡ್ ನಲ್ಲಿ ಆಶ್ರಯ ಪಡೆದಿದ್ದಾರೆ, ಯು ಎನ್ ಹೆಚ್ ಸಿ ಅರ್ ಒದಗಿಸಿರುವ ಅಂಕಿ-ಅಂಶಗಳ ಪ್ರಕಾರ 17,20,227 ನಿರಾಶ್ರಿತರು ಈಗ ಅಲ್ಲಿದ್ದಾರೆ. ಹಾಗೆಯೇ, ತಮ್ಮ ದೇಶದ ಪರ ಹೋರಾಡಲು ಮತ್ತು ಇನ್ನೂ ಉಕ್ರೇನಲ್ಲಿ ಉಳಿದಿರುವ ತಮ್ಮ ವಯಸ್ಕ ಸಂಬಂಧಿಕರನ್ನು ಪೋಲೆಂಡ್ ಗೆ ಕರೆದೊಯ್ಯಲು ಸಾವಿರಾರು ಉಕ್ರೇನಿಯನ್ನರು ಪ್ರತಿದಿನ ತಮ್ಮ ದೇಶಕ್ಕೆ ಹಿಂತಿರುಗುತ್ತಿದ್ದಾರೆ.

ಯುದ್ಧ ಶುರುವಾಗುವ ಮೊದಲು ಸುಮಾರು 15 ಲಕ್ಷ ಉಕ್ರೇನಿಯನ್ನರು ಪೋಲೆಂಡ್ನಲ್ಲಿ ವಾಸವಾಗಿದ್ದರು, ಅದರಲ್ಲಿ ಹೆಚ್ಚಿನ ಪಾಲು ಜನ ನೌಕರಿಗಳನ್ನು ಮಾಡಿಕೊಂಡಿರುವವರು.

ಯುರೋಪಿನ ಬೇರೆ ರಾಷ್ಟ್ರಗಳಲ್ಲಿ

ಯು ಎನ್ ಹೆಚ್ ಸಿ ಅರ್ ವರದಿಯ ಪ್ರಕಾರ ಶುಕ್ರವಾರದವರೆಗೆ, 3,04,156 ನಿರಾಶ್ರಿತರು ಉಕ್ರೇನ್ ನೆರೆಹೊರೆಯಲ್ಲಿರುವ ಐರೋಪ್ಯ ರಾಷ್ಟ್ರಗಳಿಗೆ ಹೋಗಿದ್ದಾರೆ.

ಹಂಗರಿ

ಸುಮಾರು 2,55,29 ನಿರಾಶ್ರಿತರು ಹಂಗರಿ ತಲುಪಿದ್ದಾರೆ. ಈ ದೇಶವು ಉಕ್ರೇನ್ನೊಂದಿಗೆ 5 ಗಡಿ ಪೋಸ್ಟ್ಗಳನ್ನು ಹೊಂದಿದೆ ಮತ್ತು ಜಹೋನಿ ಸೇರಿದಂತೆ ಯುದ್ಧ ನಡೆಯುತ್ತಿರುವ ಪ್ರದೇಶಗಳಿಗೆ ಹತ್ತಿರವಾಗುವ ಕೆಲ ಪ್ರದೇಶಗಳನ್ನು ಹೊಂದಿದೆ. ಜಹೋನಿಯ ಸ್ಥಳೀಯ ಆಡಳಿತವು ಹಲವಾರು ಸಾರ್ವಜನಿಕ ಕಟ್ಟಡಗಳನ್ನು ನಿರಾಶ್ರಿತರ ಕೇಂದ್ರಗಳಾಗಿ ಪರಿವರ್ತಿಸಿದೆ.

ಸುಮಾರು 2,04,862 ನಿರಾಶ್ರಿತರು ಸ್ಲೋವಾಕಿಯಾನಲ್ಲಿ ಆಶ್ರಯ ಪಡೆದಿದ್ದಾರೆ. ರವಿವಾರದಂದು ಇನ್ನೂ 8,882 ನಿರಾಶ್ರಿತರು ಉಕ್ರೇನ್ ಗೆ ಅತ್ಯಂತ ಹತ್ತಿರದ ಗಡಿ ಹೊಂದಿರುವ ಸ್ಲೋವಾಕಿಯಾವನ್ನು ಪ್ರವೇಶಿಸಿದ್ದಾರೆ.

ರಷ್ಯಾ 

ರಷ್ಯಾಗೆ 1,31,365 ನಿರಾಶ್ರಿತರು ಹೋಗಿ ಅಲ್ಲಿ ಆಶ್ರಯ ಪಡೆದಿದ್ದಾರೆ. ಅದಲ್ಲದೆ, ಫೆಬ್ರುವರಿ 18ರಿಂದ 23ರ ನಡುವೆ ರಷ್ಯನ್ ಪರ ಆಗಿರುವ ಉಕ್ರೇನಿನ ಡೊನೆಸ್ಕ್ ಮತ್ತು ಲುಗಾನ್ಸ್ಕ್ ಪ್ರಾಂತ್ಯಗಳಿಂದ ಸುಮಾರು 96,000 ಜನ ರಷ್ಯನ್ ಗಡಿ ಪ್ರವೇಶಿಸಿದ್ದಾರೆ.

ಮಾಲ್ಡೋವಾ

ಸುಮಾರು 26 ಲಕ್ಷ ಜನಸಂಖ್ಯೆಯುಳ್ಳ ಮತ್ತು ಅತ್ಯಂತ ಬಡ ಐರೋಪ್ಯ ರಾಷ್ಟ್ರಗಳಲ್ಲಿ ಒಂದಾಗಿರುವ ಮಾಲ್ಡೋವಾಗೂ ಅನೇಕ ನಿರಾಶ್ರಿತರು ಹೋಗಿದ್ದಾರೆ. ಯು ಎನ್ ಹೆಚ್ ಸಿ ಅರ್ ವರದಿಯ ಪ್ರಕಾರ 1,06,994 ಜನ ಮಾಲ್ಡೋವಾಗೆ ಹೋಗಿದ್ದಾರೆ. ಉಕ್ರೇನ್ ನಿಂದ 2,97,728 ಜನ ತನ್ನಲ್ಲಿಗೆ ಬಂದಿರುವರೆಂದು ಯುರೋಪಿಯನ್ ಯೂನಿಯನ್ ಗೆ ಸೇರದ ರಾಷ್ಟ್ರವಾಗಿರುವ ಮಾಲ್ಡೋವಾ ಹೇಳಿದೆ.

ರುಮೇನಿಯ

ಯು ಎನ್ ಹೆಚ್ ಸಿ ಅರ್ ಈ ದೇಶದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರ ಬಗ್ಗೆ ದಾಖಲೆ ಹೊಂದಿಲ್ಲವಾದರೂ, ಮಾರ್ಚ್ 8 ರಂದು ನೀಡಿದ ಹೇಳಿಕೆಯಲ್ಲಿ 86,671 ಜನ ಉಕ್ರೇನ್ ಗಡಿ ದಾಟಿ ರುಮೇನಿಯಾಗೆ ಬಂದಿರುವರೆಂದು ಹೇಳಿತ್ತು.

ಸೋಮವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಬುಕಾರೆಸ್ಟ್, 4,12,017 ಜನ ತನ್ನ ಬಾರ್ಡರ್ ದಾಟಿ ಬೇರೆ ಬೇರೆ ಯುರೋಪಿಯನ್ ರಾಷ್ಟ್ರಗಳಿಗೆ ಹೋಗಿರುವರೆಂದು ತಿಳಿಸಿದೆ. ರವಿವಾರದಂದು 14,475 ಉಕ್ರೇನಿಯನ್ನರು ರುಮೇನಿಯಾ ಪ್ರವೇಶಿಸಿದ್ದಾರೆ.

ಬೆಲಾರಸ್

ಸುಮಾರು 1,226 ನಿರಾಶ್ರಿತರು ಬೆಲಾರಸ್ನಲ್ಲಿ ಆಶ್ರಯ ಪಡೆದಿರುವರೆಂದು ಯು ಎನ್ ಎಚ್ ಸಿ ಆರ್ ಹೇಳಿದೆ.

ಇದನ್ನೂ ಓದಿ:  Russia Ukraine War Live: ಎರಡು ದೇಶದ ಮಧ್ಯೆ ಇಂದು ನಾಲ್ಕನೇ ಸುತ್ತಿನ‌ ಶಾಂತಿ ಮಾತುಕತೆ; ಉಕ್ರೇನ್ ಮುಂದೆ ಕೆಲ ಬೇಡಿಕೆಯಿಟ್ಟ ರಷ್ಯಾ