Russia Ukraine War: ಉಕ್ರೇನ್-ರಷ್ಯಾ ಯುದ್ಧ ಎಂದು ಮತ್ತು ಹೇಗೆ ಮುಗಿಯಬಹುದು: ಇಲ್ಲಿದೆ 6 ಸಾಧ್ಯತೆಗಳು

ರಷ್ಯಾ-ಉಕ್ರೇನ್ ಸಂಘರ್ಷವು ಹೇಗೆ ಮುಗಿಯಲಿದೆ ಎನ್ನುವುದು ಇಂದಿಗೂ ಅಸ್ಪಷ್ಟವಾಗಿಯೇ ಇದೆ. ಈ ಕುರಿತು ವಿಶ್ವದ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ 6 ಪ್ರಮುಖ ಅಂಶಗಳ ಪರಿಚಯ ಇಲ್ಲಿದೆ.

Russia Ukraine War: ಉಕ್ರೇನ್-ರಷ್ಯಾ ಯುದ್ಧ ಎಂದು ಮತ್ತು ಹೇಗೆ ಮುಗಿಯಬಹುದು: ಇಲ್ಲಿದೆ 6 ಸಾಧ್ಯತೆಗಳು
ರಷ್ಯಾ ಅಧ್ಯಕ್ಷ ವ್ಲಾದಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Mar 16, 2022 | 6:00 AM

ಜಗತ್ತಿನಲ್ಲಿ ಎಲ್ಲಿಯೇ ಯುದ್ಧ ನಡೆದರೂ ಅದು ಸಂಬಂಧಿಸಿದ ದೇಶಗಳ ಗಡಿ ಮೀರಿ ಇಡೀ ಜಗತ್ತನ್ನು ಕಾಡುವುದು ಸದ್ಯದ ಪರಿಸ್ಥಿತಿ. ಅರ್ಮೇನಿಯಾ-ಅಜರ್​ಬೈಜಾನ್ ನಡುವಣ ಸಮರ, ಯೆಮೆನ್ ಬಿಕ್ಕಟ್ಟು, ಲಿಬಿಯಾ ಆಂತರ್ಯುದ್ಧ ಸೇರಿದಂತೆ ಹಲವು ಸಂದರ್ಭಗಳಲ್ಲಿ ಈ ಅಂಶ ಸಾಬೀತಾಗಿತ್ತು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಉಕ್ರೇನ್-ರಷ್ಯಾ ಯುದ್ಧ (Ukraine Russia Conflict). ರಷ್ಯಾ ಸೇನೆ ಉಕ್ರೇನ್ ಗಡಿ ದಾಟಿ ಇಂದಿಗೆ (ಮಾರ್ಚ್ 16) 21 ದಿನಗಳಾಗಿವೆ. ರಾಜಧಾನಿ ಕೀವ್ ನಗರದ ಹತ್ತಿರಹತ್ತಿರಕ್ಕೆ ಬಂದಿದ್ದರೂ ಉಕ್ರೇನ್​ ಅನ್ನು ಸಂಪೂರ್ಣ ವಶಪಡಿಸಿಕೊಳ್ಳಲು ರಷ್ಯಾಕ್ಕೆ ಸಾಧ್ಯವಾಗಿಲ್ಲ. ಉಕ್ರೇನ್​ನ ಆಗಸದಲ್ಲಿ ರಷ್ಯಾ ಪಾರಮ್ಯ ಮೆರೆದಿದ್ದರೂ, ನೆಲದ ಮೇಲಿನ ಯುದ್ಧದಲ್ಲಿ ಉಕ್ರೇನ್ ಸೇನೆಯ ಬಲ ಇನ್ನೂ ಸಂಪೂರ್ಣವಾಗಿ ಕುಗ್ಗಿಲ್ಲ. ಹರಿದು ಬರುತ್ತಿರುವ ನೆರವು ಮತ್ತು ಯುದ್ಧೋಪಕರಣಗಳು ಉಕ್ರೇನ್ ಸೇನೆಯ ಬಲ ಹೆಚ್ಚಿಸುತ್ತಿದೆ. ಆದರೆ ಎಲ್ಲ ಮಿಲಿಟರಿ ಸಂಘರ್ಷಗಳಿಗೂ ಒಂದು ಕೊನೆ ಇರುವಂತೆ ಉಕ್ರೇನ್-ರಷ್ಯಾ ಯುದ್ಧವೂ ಇಂದಲ್ಲ ನಾಳೆ ಮುಗಿಯಲೇ ಬೇಕು.

ಈ ಸಂಘರ್ಷವು ಹೇಗೆ ಮುಗಿಯಲಿದೆ ಎನ್ನುವುದು ಮಾತ್ರ ಅಸ್ಪಷ್ಟ. ಈ ಕುರಿತು ವಿಶ್ವದ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಪ್ರಮುಖ ಅಂಶಗಳ ಪರಿಚಯ ಇಲ್ಲಿದೆ. ಈ ಪೈಕಿಯ 6ನೇ ಸಾಧ್ಯತೆಯೇ ನಿಜವಾಗಲಿ ಮತ್ತು ಬೇಗನೇ ಜಾರಿಯಾಗಲಿ ಎಂಬುದು ಭಾರತ ಸೇರಿದಂತೆ ಹಲವು ದೇಶಗಳ ಆಶಯವಾಗಿದೆ.

  1. ಕೀವ್ ಪತನ, ರಷ್ಯಾ ಕೈಗೊಂಬೆ ಸರ್ಕಾರದ ಪ್ರತಿಷ್ಠಾಪನೆ: ಉಕ್ರೇನ್ ರಾಜಧಾನಿ ಕೀವ್​ನಿಂದ ಕೆಲವೇ ಕಿಲೋಮೀಟರ್​ಗಳಷ್ಟು ದೂರದಲಲ್ಲಿರುವ ರಷ್ಯಾ ಸೇನೆ ಶೆಲಿಂಗ್ ತೀವ್ರಗೊಳಿಸಿದೆ. ಕಂದಕ ತೋಡುವುದು, ನೆಲಬಾಂಬ್ ಅಳವಡಿಸುವುದೂ ಸೇರಿದಂತೆ ಹಲವು ರಕ್ಷಣಾ ಕ್ರಮಗಳನ್ನು ಉಕ್ರೇನ್ ಸೇನೆ ತೆಗೆದುಕೊಂಡಿದೆ. ನಾಗರಿಕ ಸಾವುನೋವು ಕಡಿಮೆಯಾಗಬೇಕು ಎನ್ನುವ ಉದ್ದೇಶದಿಂದ ರಷ್ಯಾ ಸೇನೆ ದಾಳಿಯ ಗತಿಯನ್ನು ನಿಧಾನಿಸಿದೆ. ಆದರೆ ಯುದ್ಧವು ಇದೇ ಗತಿಯಲ್ಲಿ ಮುಂದುವರಿದರೆ ರಷ್ಯಾದ ಕಮಾಂಡರ್​ಗಳು ತಾಳ್ಮೆ ಕಳೆದುಕೊಂಡು ಕೀವ್ ನಗರಕ್ಕೆ ನುಗ್ಗಲು ಸೇನೆಗೆ ಆದೇಶ ನೀಡಬಹುದು. ಆಗ ಅಕ್ಷರಶಃ ಬೀದಿ ಕಾಳಗಗಳೇ ನಡೆಯುತ್ತವೆ. ಕೊನೆಗೂ ರಷ್ಯಾದ ದೈತ್ಯ ಶಕ್ತಿಯ ಎದುರು ಉಕ್ರೇನ್ ಮಣಿಯಲಿದೆ. ನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಮಗೆ ಸೂಕ್ತ ಎನಿಸುವ ವ್ಯಕ್ತಿಯನ್ನು ಉಕ್ರೇನ್ ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಿ, ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬಹುದು. ಉಕ್ರೇನ್​ನಲ್ಲಿ ಸ್ಥಾಪನೆಯಾಗುವ ಕೈಗೊಂಬೆ ಸರ್ಕಾರದ ಮೂಲಕ ರಷ್ಯಾವನ್ನು ನಿಯಂತ್ರಿಸುವ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಪ್ರಯತ್ನಗಳಿಗೆ ಕಡಿವಾಣ ಹಾಕಬಹುದು.
  2. ಆರ್ಥಿಕ ಬಿಕ್ಕಟ್ಟಿನ ಎದುರು ಮಂಡಿಯೂರುವ ರಷ್ಯಾ: ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದ ಬಲಾಢ್ಯ ದೇಶಗಳು ಹೇರಿರುವ ದಿಗ್ಬಂಧನದಿಂದ ರಷ್ಯಾದ ಆರ್ಥಿಕತೆ ಕುಸಿಯಲಿದೆ. ಹಣದುಬ್ಬರ ಹೆಚ್ಚಾಗಿ ಸೇನೆಯ ದೈನಂದಿನ ಕಾರ್ಯನಿರ್ವಹಣೆಗೆ ಸಂಪನ್ಮೂಲ ಹೊಂದಿಸಲು ಕಷ್ಟ ಎನಿಸುವ ಪರಿಸ್ಥಿತಿ ನಿರ್ಮಾಣವಾದರೆ ಯುದ್ಧ ಮುಂದುವರಿಸಲು ಸಾಧ್ಯವೇ ಆಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಉಕ್ರೇನ್​ನಲ್ಲಿರುವ ಸೇನಾ ಸಿಬ್ಬಂದಿಗೆ ಆಹಾರ, ಇಂಧನ ಮತ್ತು ಅಗತ್ಯ ಉಪಕರಣ ಕಳುಹಿಸಿಕೊಡಲು ಸಾಧ್ಯವಾಗದ ಅಸಹಾಯಕ ಸ್ಥಿತಿಗೆ ರಷ್ಯಾ ತಲುಪಲಿದೆ. ಆಗ ಅನಿವಾರ್ಯವಾಗಿ ಉಕ್ರೇನ್​ನಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಗುತ್ತದೆ. ಬಹುಶಃ ಮೇ ತಿಂಗಳಲ್ಲಿ ಇಂಥ ಪರಿಸ್ಥಿತಿ ತಲೆದೋರಬಹುದು ಎಂದು ಉಕ್ರೇನ್ ಸರ್ಕಾರದ ರಕ್ಷಣಾ ಇಲಾಖೆ ಲೆಕ್ಕಹಾಕಿದೆ.
  3. ವಿದೇಶದಲ್ಲಿ ಹಂಗಾಮಿ ಸರ್ಕಾರ ರಚನೆ: ಉಕ್ರೇನ್ ರಾಜಧಾನಿ ಕೀವ್​ ನಗರ ರಷ್ಯಾದ ಪಾಲಾದ ತಕ್ಷಣಕ್ಕೆ ಯುದ್ಧ ನಿಲ್ಲುತ್ತದೆ ಎನ್ನಲು ಆಗುವುದಿಲ್ಲ. ಸೋಲು ಖಚಿತವಾಗುತ್ತಿದ್ದಂತೆಯೇ ನೆರೆಯ ಪೊಲೆಂಡ್ ಅಥವಾ ರೊಮೆನಿಯಾಕ್ಕೆ ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಪಲಾಯನ ಮಾಡಬಹುದು. ಅಲ್ಲಿಯೇ ಹಂಗಾಮಿ ಸರ್ಕಾರ ರಚಿಸಿಕೊಂಡು, ವಿಶ್ವ ಸಮುದಾಯದ ನೆರವು ಯಾಚಿಸಬಹುದು. ನ್ಯಾಟೊ ಸದಸ್ಯತ್ವ ಹೊಂದಿರುವ ಈ ದೇಶಗಳ ಮೇಲೆ ನೇರವಾಗಿ ದಾಳಿ ನಡೆಸಲು ರಷ್ಯಾ ಹಿಂಜರಿಯುತ್ತದೆ. ಒಳಸುಳುವಿಕೆ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ಉಕ್ರೇನ್​ನಲ್ಲಿ ಸ್ಥಾಪನೆಯಾಗುವ ರಷ್ಯಾಪರ ಆಡಳಿತದ ಬಲ ಕುಗ್ಗಿಸಲು ಝೆಲೆನ್​ಸ್ಕಿ ಮತ್ತು ಅವರ ಬೆಂಬಲಿಗರು ಪ್ರಯತ್ನಿಸಬಹುದು. ಒಂದು ವೇಳೆ ಈ ಭವಿಷ್ಯ ನಿಜವಾದರೆ ಹಲವು ವರ್ಷಗಳವರೆಗೆ ಯುದ್ಧ ಮುಂದುವರಿಯಬಹುದು.
  4. ದೇಶ ವಿಭಜನೆ: ಹೋರಾಟ ಸುದೀರ್ಘ ಅವಧಿಗೆ ಮುನ್ನಡೆದರೆ ಪೂರ್ವಭಾಗದಲ್ಲಿ ತಾವು ಗೆಲುವು ಸಾಧಿಸಿರುವಷ್ಟು ಪ್ರದೇಶಗಳಿಗೆ ಸ್ವಾತಂತ್ರ್ಯ ಘೋಷಿಸಿ, ಪ್ರತ್ಯೇಕ ದೇಶವೊಂದನ್ನು ರಚಿಸಿ ರಷ್ಯಾ ಸೇನೆ ಹಿಂದಕ್ಕೆ ತೆರಳಬಹುದು. ಆಗ ರಷ್ಯಾ ಪರವಾಗಿರುವ ಪೂರ್ವ ಉಕ್ರೇನ್ ಮತ್ತು ನ್ಯಾಟೊ ಪರವಾಗಿರುವ ಪಶ್ಚಿಮ ಉಕ್ರೇನ್ ಎನ್ನುವ ಎರಡು ಪ್ರತ್ಯೇಕ ದೇಶಗಳು ರಚನೆಯಾಗಬಹುದು ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳ ಬೆಂಬಲ ಪಡೆಯುವ ಪಶ್ಚಿಮ ಉಕ್ರೇನ್ ಸಹಜವಾಗಿಯೇ ಕೆಲವರ್ಷಗಳಲ್ಲಿಯೇ ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು. ಆದರೆ ಈಗಾಗಲೇ ದಿಗ್ಬಂಧನಗಳ ಭಾರತಕ್ಕೆ ನಲುಗಿರುವ ರಷ್ಯಾದ ಅಧೀನದಲ್ಲಿ ಉಳಿಯುವ ಪೂರ್ವ ಉಕ್ರೇನ್ ಬಡತನದೊಂದಿಗೆ ರಷ್ಯಾದ ಕಟು ಆಡಳಿತವನ್ನೂ ಅನುಭವಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಎಷ್ಟೋ ಕುಟುಂಬಗಳು ಮತ್ತು ಸಂಬಂಧಗಳು ಎರಡು ದೇಶಗಳಲ್ಲಿ ಹಂಚಿಹೋಗುತ್ತವೆ.
  5. ಅಮೆರಿಕ (ನ್ಯಾಟೊ) ಪ್ರವೇಶ: ಈಗಾಗಲೇ ಉಕ್ರೇನ್​ಗೆ ಅಮೆರಿಕ ಮತ್ತು ನ್ಯಾಟೊ ಸಂಘಟನೆಗಳು ಪರೋಕ್ಷವಾಗಿ ಸಹಾಯ ಮಾಡುತ್ತಿವೆ. ಉಕ್ರೇನ್ ಪರವಾಗಿ ನ್ಯಾಟೊ ಸದಸ್ಯ ದೇಶ ಪೊಲೆಂಡ್ ಗಟ್ಟಿಯಾಗಿ ನಿಂತಿದೆ. ಉಕ್ರೇನ್​ಗೆ ನೆರವು ಸಹ ಇದೇ ಮಾರ್ಗದಲ್ಲಿ ಹರಿದು ಬರುತ್ತಿದ್ದು, ರಷ್ಯಾದ ಕೆಂಗಣ್ಣಿಗೂ ಗುರಿಯಾಗಿದೆ. ಇದು ಮತ್ತಷ್ಟು ಬಿಗಡಾಯಿಸಿ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೆ ಪೊಲೆಂಡ್ ಮೇಲೆ ರಷ್ಯಾದ ದಾಳಿಯಾದರೆ ನ್ಯಾಟೊ ಮಧ್ಯಪ್ರವೇಶ ಅನಿವಾರ್ಯವಾಗುತ್ತದೆ. ಈ ಸಾಧ್ಯತೆ ನಿಜವಾದರೂ ಯುದ್ಧ ತಕ್ಷಣಕ್ಕೆ ನಿಲ್ಲುವುದಿಲ್ಲ.
  6. ರಷ್ಯಾ-ಉಕ್ರೇನ್ ಒಪ್ಪಂದ: ಉಕ್ರೇನ್ ದೇಶವನ್ನು ಗೆಲ್ಲುವುದು ಸುಲಭವಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಈಗಾಗಲೇ ಅರ್ಥವಾಗಿದೆ. ತಮ್ಮನ್ನು ಯುದ್ಧಕ್ಕೆ ಪ್ರೇರೇಪಿಸಿದ ನ್ಯಾಟೊ ಅಥವಾ ಐರೋಪ್ಯ ಒಕ್ಕೂಟಗಳು ನೇರವಾಗಿ ನೆರವು ಕೊಡುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಅವರಿಗೂ ಮನವರಿಕೆಯಾಗಿದೆ. ಭಾರತ, ಇಸ್ರೇಲ್ ಅಥವಾ ಬೇರೆ ಯಾವುದೇ ತಟಸ್ಥ ದೇಶದಲ್ಲಿ ಇವರಿಬ್ಬರೂ ಮಾತುಕತೆ ನಡೆಸಿ ಒಂದು ಒಪ್ಪಂದಕ್ಕೆ ಬಂದರೆ ಯುದ್ಧವು ಯಾರೊಬ್ಬರ ಸೋಲು ಅಥವಾ ಗೆಲುವು ಇಲ್ಲದೆ ಅಂತ್ಯಕಾಣಬಹುದು. ಇದು ಸಾಧ್ಯವಾಗಬೇಕಾದರೆ ರಷ್ಯಾ ಬಯಸುತ್ತಿರುವಂತೆ ಉಕ್ರೇನ್ ದೇಶವು ನ್ಯಾಟೊ ಮತ್ತು ಐರೋಪ್ಯ ಸದಸ್ಯತ್ವ ಪ್ರಸ್ತಾವದಿಂದ ಹೊರಗೆ ಬರಬೇಕು. ಉಕ್ರೇನ್​ ಒತ್ತಾಯಿಸುತ್ತಿರುವಂತೆ ರಷ್ಯಾ ಸೇನೆ ಉಕ್ರೇನ್​ನಿಂದ ಹೊರಗೆ ಹೋಗಬೇಕು, ಉಕ್ರೇನ್​ನ ಸಾರ್ವಭೌಮತೆಗೆ ಗೌರವ ಕೊಡಬೇಕು.