ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕದನಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹೂಗ್ಲಿ ಜಿಲ್ಲೆಯಲ್ಲಿ ಇಂದು (ಫೆ.24) ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಕೇಸರಿ ಪಕ್ಷದ ನಾಯಕರು ದಂಗಾಬಾಜ್ (Dangabaaz) ಮತ್ತು ದಂಧಾಬಾಜ್ (Dhandabaaz) ಎಂದು ವಾಗ್ದಾಳಿ ನಡೆಸಿದರು. ಟಿಎಂಸಿ ನಾಯಕ ಮತ್ತು ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿಯನ್ನು ‘ಟೋಲಾಬಾಜ್’ (ಸುಲಿಗೆ ಮಾಡುವವ) ಎಂದು ಟೀಕಿಸಿದ್ದ ಬಿಜೆಪಿ ನಾಯಕರ ವಿರುದ್ಧ ಚಾಟಿ ಬೀಸಿದಂತೆ ಇತ್ತು ದೀದಿ ಇಂದು ಹರಿಸಿದ ವಾಗ್ಝರಿ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಟೀಕಾಪ್ರಹಾರ ಮಾಡಿದ ಮಮತಾ ಬ್ಯಾನರ್ಜಿ, ಬಂಗಾಳವನ್ನು ಬಂಗಾಳವೇ ಆಳುತ್ತದೆ. ಬಂಗಾಳವನ್ನು ಗುಜರಾತ್ ಆಳುವುದಿಲ್ಲ ಎಂದು ಹೇಳಿದರು. ಮೋದಿ ಬಂಗಾಳದ ಆಡಳಿತ ವಹಿಸುವುದಿಲ್ಲ. ಗೂಂಡಾಗಳು ಬಂಗಾಳದ ಆಡಳಿತದ ಚುಕ್ಕಾಣಿ ಪಡೆಯುವುದಿಲ್ಲ ಎಂದು ತಿಳಿಸಿದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷವೇ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ನುಡಿದರು.
ಪ್ರಧಾನಿ ನರೇಂದ್ರ ಮೋದಿಗೆ ಡೊನಾಲ್ಡ್ ಟ್ರಂಪ್ಗಿಂತ ಕೆಟ್ಟ ದಿನಗಳು ಬರಲಿವೆ. ಮುಂಬರುವ ವಿಧಾನಸಭಾ ಚುನಾವಣೆಗೆ ನಾನು ಗೋಲ್ ಕೀಪರ್ ಆಗಿರುತ್ತೇನೆ. ಬಿಜೆಪಿಗೆ ಒಂದು ಅಂಕ ಗಳಿಸಲೂ ಬಿಡುವುದಿಲ್ಲ ಎಂದು ಕುಟುಕಿದರು.
ನಿನ್ನೆಯಷ್ಟೇ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮಡದಿ ರುಜಿರಾ ಬ್ಯಾನರ್ಜಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ರುಜಿರಾ ಸಹೋದರಿ ಕೂಡ ಈ ಮೊದಲು ಸಿಬಿಐ ವಿಚಾರಣೆಗೆ ಒಳಗಾಗಿದ್ದರು. ಕಲ್ಲಿದ್ದಲು ಹಗರಣದಲ್ಲಿ ಲಂಚ ಸ್ವೀಕರಿಸಿರುವ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಘಟನೆಗಳ ಬೆನ್ನಲ್ಲೇ ಇಂದು ಮಮತಾ ಬಿಜೆಪಿ ವಿರುದ್ಧ ಮಾತನಾಡಿದರು.
ಟಿಎಂಸಿ ಸೇರಿದ ಕ್ರಿಕೆಟಿಗ ಮನೋಜ್ ತಿವಾರಿ
ಭಾರತೀಯ ಕ್ರಿಕೆಟ್ ತಂಡದಲ್ಲಿದ್ದ ಆಟಗಾರ ಮನೋಜ್ ತಿವಾರಿ ಇಂದು (ಫೆ.24) ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತೃಣಮೂಲ ಪಕ್ಷಕ್ಕೆ ಸೇರ್ಪಡೆಗೊಂಡರು. ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆಗೊಂಡಿರುವ ಮನೋಜ್ ತಿವಾರಿ, ‘ಹೊಸ ಪ್ರಯಾಣ ಆರಂಭವಾಗಿದೆ, ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕು’ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇನ್ಸ್ಟಾಗ್ರಾಂನ ಬಯೋದಲ್ಲಿ (ವೈಯಕ್ತಿಕ ವಿವರ) ‘ಪೊಲಿಟಿಷಿಯನ್, AITMC’ ಎಂದು ಮಾಹಿತಿ ಅಪ್ಡೇಟ್ ಮಾಡಿಕೊಂಡಿದ್ದಾರೆ.
ಮನೋಜ್ ತಿವಾರಿ ಏಕದಿನ ಮತ್ತು ಟಿ-20 ಕ್ರಿಕೆಟ್ನಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ, ದೇಶಿ ಕ್ರಿಕೆಟ್ನಲ್ಲಿ ಬಂಗಾಳ ತಂಡದಲ್ಲಿದ್ದಾರೆ. ಐಪಿಎಲ್ ಕ್ರಿಕೆಟ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡದಲ್ಲಿ ಆಡಿದ್ದಾರೆ.
ಮನೋಜ್ ತಿವಾರಿ ಟಿಎಂಸಿ ಸೇರ್ಪಡೆ
A new journey begins from today. Need all your love & support. ?#DidiShowsTheWay #AssemblyElection #WestBengal #JoyBangla pic.twitter.com/TrrFX67USP
— MANOJ TIWARY (@tiwarymanoj) February 24, 2021
A new journey begins from today. Need all your love & support. From now onwards this will be my political profile on Instagram.https://t.co/uZ9idMW7lD
— MANOJ TIWARY (@tiwarymanoj) February 24, 2021
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ
ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?
Published On - 5:55 pm, Wed, 24 February 21