ಕೋಲ್ಕತ್ತಾ, ಜನವರಿ 20: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾ ಮೂರ್ತಿಯ (Ram Lalla Idol) ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ರಾಮನಿಗೆ ಸಂಬಂಧಿಸಿದ ವಿಶೇಷಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ರಾಮನ ಜತೆಗಿನ ನಂಟು, ಆರಾಧನೆ, ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಒಂದೊಂದಾಗಿ ಪ್ರವರ್ಧಮಾನಕ್ಕೆ ಬರುತ್ತಿವೆ. ಇದೀಗ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಒಂದು ವಿಶಿಷ್ಟ ಗ್ರಾಮದ ‘ರಾಮ’ ಮಹಿಮೆ ಬೆಳಕಿಗೆ ಬಂದಿದೆ.
ಇದೀಗ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಆ ಒಂದು ಗ್ರಾಮದ ಹೆಸರೇ ರಾಮಪಾದ. ರಾಮಪಾದದ ಜನರ ಕುಲದೇವತೆಯೂ ಶ್ರೀರಾಮನೇ. ರಾಮಪಾದದಲ್ಲಿ ರಾಮನ ಮಂದಿರವಿದ್ದು, ಅಲ್ಲಿ ಜನರು ಆತನನ್ನು ವರ್ಷಗಳಿಂದ ಪೂಜಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಭಾಗದ ಜನರಿಗೆ ರಾಮನ ಮೇಲೆ ಎಷ್ಟು ಪ್ರೀತಿ ಎಂದರೆ, ಗ್ರಾಮದಲ್ಲಿ ಜನಿಸಿದ ಪ್ರತಿಯೊಂದು ನವಜಾತ ಗಂಡು ಶಿಶುವಿನ ಹೆಸರಿನ ಜತೆಗೆ ‘ರಾಮ’ ಪದ ಬರುವಂತೆ ನೋಡಿಕೊಳ್ಳುತ್ತಾರೆ! ಈ ಸಂಪ್ರದಾಯ ಸುಮಾರು ಇನ್ನೂರೈವತ್ತು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿದ್ದು, ಇಂದಿಗೂ ಮುಂದುವರೆದಿದೆ.
ರಾಮಪಾದವು ಬಂಕುರಾದ ಪಶ್ಚಿಮ ಸನಬಂಧ್ನಲ್ಲಿದೆ. ಈ ಗ್ರಾಮದ ಜನರ ದೈನಂದಿನ ಜೀವನ ಭಾಗವಾಗಿದ್ದಾನೆ ಭಗವಾನ್ ರಾಮ. ಗ್ರಾಮದ ಮುಖ್ಯಸ್ಥರ ಕುಟುಂಬದ ಪೂರ್ವಜರಿಗೆ ಕನಸಿನಲ್ಲಿ ಕಾಣಿಸಿದ್ದ ರಾಮನ್ನು ಅವರು ದೇವರೆಂದು ಭಾವಿಸಿದ್ದರು. ನಂತರ ಶುರುವಾದ ರಾಮನ ಆರಾಧನೆ ಹಾಗೆಯೇ ಮುಂದುವರಿದಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಆ ನಂತರ ಗ್ರಾಮದಲ್ಲಿ ರಾಮ ಮಂದಿರವೂ ತಲೆ ಎತ್ತಿತು.
ಕಳೆದ ಇನ್ನೂರೈವತ್ತು ವರ್ಷಗಳಿಂದ ಸ್ಥಳೀಯ ನಿವಾಸಿಗಳು ಆ ರಾಮಮಂದಿರದಲ್ಲಿ ರಾಮನ ಹೆಸರಿನಲ್ಲಿ ಶಾಲಿಗ್ರಾಮವನ್ನು ಪೂಜಿಸುತ್ತಿದ್ದಾರೆ.
ಕಳೆದ 250 ವರ್ಷಗಳಲ್ಲಿ, ರಾಮಪಾದದಲ್ಲಿ ಜನಿಸಿದ ಪ್ರತಿಯೊಬ್ಬ ಗಂಡು ಮಗುವಿನ ಹೆಸರಿನ ಜತೆಗೆ ‘ರಾಮ’ ಪದ ಇರುವಂತೆ ನೋಡಿಕೊಳ್ಳಲಾಗಿದೆ. ಹೀಗಾಗಿ ಗ್ರಾಮದಲ್ಲಿ ರಾಮನ ಹೆಸರಿಲ್ಲದ ವ್ಯಕ್ತಿಯೇ ಇಲ್ಲ.
ರಾಮಕಣೈ, ರಾಮಕಾಂತ್, ರಾಮದುಲಾಲ್, ರಾಮಕೃಷ್ಣ, ಹೀಗೆ ಎಲ್ಲರ ಹೆಸರೂ ರಾಮ ಪದದ ನಂತರವೇ ಇರುತ್ತದೆ ಎನ್ನುತ್ತಾರೆ ರಾಮಪಾದದ ಸ್ಥಳೀಯ ನಿವಾಸಿ ರಾಮಕಣೈ ಮುಖೋಪಾಧ್ಯಾಯ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ
ಈಗ ಅಯೋಧ್ಯೆಯಲ್ಲಿ ತಮ್ಮ ಕುಲದೈವದ ಇಷ್ಟು ದೊಡ್ಡ ಮಂದಿರ ನಿರ್ಮಾಣವಾಗುತ್ತಿದ್ದು, ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ರಾಮಪಾದದ ಜನತೆ ಸಂಭ್ರಮ ಪಡುತ್ತಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರತಿಷ್ಠಾಪನೆಯ ದಿನದಂದು ಗ್ರಾಮದ ಜನರು ವಿಶೇಷ ಪೂಜೆಯನ್ನು ಆಯೋಜಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ