ಹೋಂಗಾರ್ಡ್ ನೇಮಕಾತಿಗೂ ಅಂಟಿಕೊಂಡ ಅಕ್ರಮ: IPS ಅಧಿಕಾರಿ ಆರೋಪಿ
ನೆರೆಯ ಆಂಧ್ರಪ್ರದೇಶದಲ್ಲಿ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಹೋಂಗಾರ್ಡ್ ನೇಮಕಾತಿ ಅಕ್ರಮವೊಂದು ಬಯಲಾಗಿದೆ. ದೌರ್ಭಾಗ್ಯವೆಂದರೆ ಭ್ರಷ್ಟ ಐಪಿಎಸ್ ಅಧಿಕಾರಿ ಹೋಂಗಾರ್ಡ್ಗಳನ್ನು ನೇಮಿಸಿಕೊಳ್ಳುವಲ್ಲಿಯೂ ಲಂಚಕ್ಕೆ ನಾಲಿಗೆ ಚಾಚಿದ್ದಾರೆ! ವಿವರಗಳನ್ನು ನೋಡುವುದಾದರೆ...
ಕಳೆದ ವರ್ಷ ಪೊಲೀಸ್ ಇಲಾಖೆಗೆ ಕರಾಳ ವರ್ಷವಾಗಿತ್ತು. ಪಿಎಸ್ಐ ನೇಮಕಾತಿ ವೇಳೆ ಮನೆಯ ಯಜಮಾನನಂತಿದ್ದ ಐಪಿಎಸ್ ಅಧಿಕಾರಿಯ ಸಾರಥ್ಯದಲ್ಲಿ ನಡೆದ ಅಕ್ರಮವೊಂದು ಇಡೀ ವ್ಯವಸ್ಥೆಯನ್ನೇ ಆಪೋಷನ ತೆಗೆದುಕೊಂಡಿತು. ಅದಾದ ಮೇಲಾದರೂ ವ್ಯವಸ್ಥೆ ಸರಿಹೋದೀತು ಎಂದುಕೊಂಡವರಿಗೆ ನಿರಾಶೆ ಮೂಡಿಸುವಂತೆ ಮತ್ತೆ ಅದೇ ಪಿಎಸ್ಐ ನೇಮಕಾತಿಗಾಗಿ ಇನ್ನು 3 ದಿನಕ್ಕೆ ನಡೆಯುವ ಪರೀಕ್ಷೆಯಲ್ಲಿ ಮತ್ತೆ ಅಕ್ರಮ ನಡೆದಿದೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದೆ. ಆದರೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರಕರಣದ ಬಗ್ಗೆ ತನಿಖೆ ನಡೆದಿದ್ದು, ಅಭ್ಯರ್ಥಿಗಳು ನಾಳಿದ್ದು ಪರೀಕ್ಷೆಗೆ ಹಾಜರಾಗಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ಈ ಮಧ್ಯೆ ನೆರೆಯ ಆಂಧ್ರಪ್ರದೇಶದಲ್ಲಿ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಹೋಂಗಾರ್ಡ್ ನೇಮಕಾತಿ ಅಕ್ರಮವೊಂದು ಬಯಲಾಗಿದೆ. ದೌರ್ಭಾಗ್ಯವೆಂದರೆ ಭ್ರಷ್ಟ ಐಪಿಎಸ್ ಅಧಿಕಾರಿ ಹೋಂಗಾರ್ಡ್ಗಳನ್ನು ನೇಮಿಸಿಕೊಳ್ಳುವಲ್ಲಿಯೂ ಲಂಚಕ್ಕೆ ನಾಲಿಗೆ ಚಾಚಿದ್ದಾರೆ! ವಿವರಗಳನ್ನು ನೋಡುವುದಾದರೆ…
ನಿರುದ್ಯೋಗಿಗಳಿಗೆ ಗೃಹರಕ್ಷಕ ದಳದಲ್ಲಿ ಹೋಂಗಾರ್ಡ್ ಉದ್ಯೋಗ ಕೊಡಿಸುವೆ ಎಂದು ಅಭ್ಯರ್ಥಿಗಳಿಂದ ತಲಾ ಲಕ್ಷಗಟ್ಟಲೆ ಹಣ ಲಪಟಾಯಿದ್ದ ಐಪಿಎಸ್ ಅಧಿಕಾರಿಯ ಅಕ್ರಮಗಳ ಬಗ್ಗೆ ದಿನದಿಂದ ದಿನಕ್ಕೆ ಅನೇಕ ಆತಂಕಕಾರಿ ವಿಷಯಗಳು ಬಯಲಾಗುತ್ತಿವೆ. ಈ ಪ್ರಕರಣದಲ್ಲಿ ಸದರಿ ಐಪಿಎಸ್ ಅಧಿಕಾರಿಯ ಹೆಸರನ್ನು ಆರೋಪಿ ಎ-8 ಎಂದು ಪೊಲೀಸರು ಸೇರಿಸಿದ್ದಾರೆ. ಪ್ರಸ್ತುತ ಬೇರೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆ ಐಪಿಎಸ್ ಅಧಿಕಾರಿ ಈ ಹಿಂದೆ ರಾಜ್ಯದಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಹೋಂಗಾರ್ಡ್ ನಲ್ಲಿ ಉದ್ಯೋಗ ಕೊಡಿಸುವೆ ಎಂದು ನಿರುದ್ಯೋಗಿಗಳಿಗೆ ಉಂಡೆನಾಮ ತಿಕ್ಕಿರುವ ಪ್ರಕರಣದಲ್ಲಿ ಇನ್ನೂ ಅನೇಕ ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿ 3 (ಎ 3) ವಿಜಯಲಕ್ಷ್ಮಿ ಪಂಡಿತ್, ಎ 4 ಗೊಲ್ಲಪೂಡಿ ವೆಂಕಟ್ ಲಕ್ಷ್ಮಿ ನರಸಿಂಹ ಫಣಿಕುಮಾರನನ್ನು ಮಂಗಳಗಿರಿ ಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇವರೆಲ್ಲರನ್ನೂ ಹೈದರಾಬಾದ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಬಳಿಕ ಮಂಗಳಗಿರಿ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಅವರಿಗೆಲ್ಲ ನ್ಯಾಯಾಧೀಶರು 14 ದಿನಗಳ ಕಾಲ ರಿಮಾಂಡ್ ವಿಧಿಸಿದ್ದಾರೆ. ಈ ಮಧ್ಯೆ ನಿಂದಿತ ಹಿರಿಯ ಐಪಿಎಸ್ ಅಧಿಕಾರಿ ತನ್ನನ್ನು ಬಂಧಿಸದಂತೆ ಪೊಲೀಸರಿಗೆ ಆದೇಶಿಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Also Read: ಕೋಚಿಮುಲ್ ನೇಮಕಾತಿ ಹಗರಣಕ್ಕೆ ಮಂಗಳೂರು ವಿವಿ ಲಿಂಕ್! ಪರೀಕ್ಷಾಂಗ ಕುಲಸಚಿವರ ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು 15 ದಿನಗಳಲ್ಲಿ ನೀಡುವಂತೆ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಹೋಂಗಾರ್ಡ್ ಶಾಖೆಯ ಮುಖ್ಯಸ್ಥರಾಗಿ (ಐಜಿಪಿ) ಸೇವೆ ಸಲ್ಲಿಸುತ್ತಿದ್ದಾಗ ಹೋಂಗಾರ್ಡ್ ಉದ್ಯೋಗ ಕಲ್ಪಿಸುವುದಾಗಿ ಅನೇಕ ನಿರುದ್ಯೋಗಿಗಳಿಗೆ ವಂಚಿಸಿರುವುದು ಪತ್ತೆಯಾಗಿದೆ. 200ಕ್ಕೂ ಹೆಚ್ಚು ನಿರುದ್ಯೋಗಿಗಳಿಂದ ತಲಾ 6 ರಿಂದ 7 ಲಕ್ಷ ರೂ.ವರೆಗೆ ವಸೂಲಿ ಮಾಡಲಾಗಿದೆ ಎನ್ನಲಾಗಿದೆ. ಐಜಿಪಿಯಾಗಿದ್ದ ಅವಧಿಯಲ್ಲಿ ಆ ಐಪಿಎಸ್ ಅಧಿಕಾರಿ ಕೆಲವರಿಗೆ ಹೋಂಗಾರ್ಡ್ ಕೆಲಸ ನೀಡಿದ್ದರು.
ಆದರೆ ಉಳಿದವರಿಗೆ ನೌಕರಿ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಆಗ ಹಣ ನೀಡಿದ್ದ ನಿರುದ್ಯೋಗಿಗಳು ಹೆಚ್ಚಿನ ಒತ್ತಡ ಹಾಕಿದ್ದಾರೆ. ಅದರಿಂದ ಪಾರಾಗಲು ತಾನು 2022ರಲ್ಲಿ ಐಜಿಪಿ ಗೃಹರಕ್ಷಕ ದಳದ ಮುಖ್ಯಸ್ಥರಾಗಿದ್ದನ್ನು ದುರುಪಯೋಗಪಡಿಸಿಕೊಂಡು, ಹುದ್ದೆಯಿಂದ ಕೆಳಗಿಳಿದಿದ್ದರೂ ಗೃಹ ರಕ್ಷಕ ದಳದ ಐಜಿಪಿ ಎಂದದು ಸಹಿ ಹಾಕಿ, ನಕಲಿ ನೇಮಕಾತಿ ಪತ್ರಗಳನ್ನು ನೀಡಿದ್ದಾರೆ. ಆ ನೇಮಕಾತಿ ಪತ್ರಗಳನ್ನು ಕೈಯಲ್ಲಿ ಹಿಡಿದ ನೂರಾರು ನಿರುದ್ಯೋಗಿಗಳು ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಹಗರಣ ಬೆಳಕಿಗೆ ಬಂದಿದೆ. ಇದು ನಕಲಿ ನೇಮಕಾತಿ ಎಂದು ಗೊತ್ತಾದ ನಂತರ ನಿರುದ್ಯೋಗಿಗಳು, ಸದರಿ ಐಪಿಎಸ್ ಅಧಿಕಾರಿ ತಮ್ಮನ್ನು ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:44 pm, Sat, 20 January 24