ಸೆಪ್ಟೆಂಬರ್ 30ರಂದು ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆ (West Bengal By Election)ಯ ಮತ ಎಣಿಕೆ ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿದ್ದು, ಸದ್ಯದ ಲೆಕ್ಕಾಚಾರದ ಪ್ರಕಾರ ಸಂಸರ್ಗಂಜ್, ಭವಾನಿಪುರ ಮತ್ತು ಜಂಗೀಪುರ ಮೂರು ಕ್ಷೇತ್ರಗಳಲ್ಲಿ ಟಿಎಂಸಿ ಮುಂದಿದೆ. ಈಗ ಪೋಸ್ಟಲ್ ಬ್ಯಾಲೆಟ್ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು, ಮಮತಾ ಬ್ಯಾನರ್ಜಿ ಭವಾನಿಪುರದಲ್ಲಿ 2800 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಇನ್ನು ಜಂಗೀಪುರದಲ್ಲಿ ಟಿಎಂಸಿ ಅಭ್ಯರ್ಥಿ ಜಾಕಿರ್ ಹೊಸೇನ್ 1,717 ಮತಗಳ ಅಂತರದಿಂದ ಮುಂದಿದ್ದಾರೆ. ಹಾಗೇ, ಸಂಸರ್ಗಂಜ್ ಅಭ್ಯರ್ಥಿ ಅಮಿರುಲ್ ಇಸ್ಲಾಮ್ ಕೂಡ ಮುನ್ನಡೆಯಲ್ಲಿದ್ದಾರೆ. ಪಶ್ಚಿಮ ಬಂಗಾಳದ ಈ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಭವಾನಿಪುರ ಕುತೂಹಲ ಹೆಚ್ಚಿಸಿದೆ. ಇಲ್ಲಿ ಸೆ.30ರಂದು ಶೇ.57.09ರಷ್ಟು ಮತದಾನವಾಗಿತ್ತು. ಇಲ್ಲಿ ಬಿಜೆಪಿ ಪ್ರಿಯಾಂಕಾ ಟಿಬರೆವಾಲ್ ಸ್ಪರ್ಧಿಸಿದ್ದರು. ಭವಾನಿಪುರದಲ್ಲಿ ಈ ಬಾರಿ ಮಮತಾ ಬ್ಯಾನರ್ಜಿ ಗೆಲ್ಲದೆ ಇದ್ದರೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಬೇಕಾಗುತ್ತದೆ. ಇಂದು ಭವಾನಿಪುರದಲ್ಲಿ 21 ಸುತ್ತಿನ, ಸಂಸರ್ಗಂಜ್ನಲ್ಲಿ 26 ಮತ್ತು ಜಂಗೀಪುರದಲ್ಲಿ 24 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಬಿಜೆಪಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಆದರೆ ತನ್ನ ಸ್ವಕ್ಷೇತ್ರ ಬಿಟ್ಟು ಸುವೇಂದು ಅಧಿಕಾರಿ ವಿರುದ್ಧ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದ ಮಮತಾ ಬ್ಯಾನರ್ಜಿ ಸೋತಿದ್ದಾರೆ. 294 ಕ್ಷೇತ್ರಗಳಲ್ಲಿ 213 ಕ್ಷೇತ್ರಗಳನ್ನು ಟಿಎಂಸಿ ತನ್ನದಾಗಿಸಿಕೊಂಡಿದ್ದರೆ, ಬಿಜೆಪಿ 77 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದರೆ ಸೋತಿದ್ದೂ ಮುಖ್ಯಮಂತ್ರಿ ಸ್ಥಾನಕ್ಕೆ ಏರಿರುವ ಮಮತಾ ಬ್ಯಾನರ್ಜಿಯನ್ನು ಮತ್ತೆ ಗೆಲ್ಲಿಸಲೆಂದೇ ಭವಾನಿಪುರದಲ್ಲಿ ಉಪಚುನಾವಣೆ ನಡೆಯುವಂತಾಯ್ತು.
ಇದನ್ನೂ ಓದಿ: ಮನೆ ಗೇಟಿಗೆ ಸಿಲುಕಿಕೊಂಡ ನಾಯಿ ಮರಿ; ಯುವಕರು ರಕ್ಷಿಸಿದ ವಿಡಿಯೋ ಇಲ್ಲಿದೆ
ವಿಶ್ವವಿಖ್ಯಾತ ದಸರಾ ಮಹೋತ್ಸವ; ಮೈಸೂರಿನ ಕೆಲ ಪ್ರದೇಶಗಳಲ್ಲಿ ವಾಹನ ನಿಲುಗಡೆ ನಿಷೇಧ
Published On - 9:39 am, Sun, 3 October 21