ಕೇಂದ್ರ ಸಚಿವರು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ: ಮಮತಾ ಬ್ಯಾನರ್ಜಿ

|

Updated on: May 06, 2021 | 6:04 PM

Post Poll Violence in West Bengal: ಚುನಾವಣೋತ್ತರ ಹಿಂಸಾಚಾರದಲ್ಲಿ ಸಾವಿಗೀಡಾದ ಜನರ ಕುಟುಂಬಗಳಿಗೆ ಮಮತಾ ಬ್ಯಾನರ್ಜಿ₹2 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ. ಕೂಚ್ ಬೆಹಾರ್ ಗುಂಡಿನ ದಾಳಿಗೆ ಬಲಿಯಾದ ನಾಲ್ವರು ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಹೋಮ್ ಗಾರ್ಡ್ ಕೆಲಸ ನೀಡುವುದಾಗಿ ಮಮತಾ ಭರವಸೆ ನೀಡಿದ್ದಾರೆ.

ಕೇಂದ್ರ ಸಚಿವರು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಕೇಂದ್ರ ಸಚಿವರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಮೇ 2ರಂದು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಟಿಎಂಸಿ ಮತ್ತೊಮ್ಮೆ ಅಧಿಕಾರಕ್ಕೇರಿದ ಬೆನ್ನಲ್ಲೇ ಇಲ್ಲಿ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರದಲ್ಲಿ ಈವರೆಗೆ 16 ಮಂದಿ ಮೃತಪಟ್ಟಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಚುನಾವಣೋತ್ತರ ಹಿಂಸಾಚಾರದಲ್ಲಿ ಸಾವಿಗೀಡಾದ ಜನರ ಕುಟುಂಬಗಳಿಗೆ ಮಮತಾ ₹2 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ. ಕೂಚ್ ಬೆಹಾರ್ ಗುಂಡಿನ ದಾಳಿಗೆ ಬಲಿಯಾದ ನಾಲ್ವರು ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಹೋಮ್ ಗಾರ್ಡ್ ಕೆಲಸ ನೀಡುವುದಾಗಿ ಮಮತಾ ಭರವಸೆ ನೀಡಿದ್ದಾರೆ.

ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ವಿ ಮುರಳೀಧರನ್ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ಕೆಲವೇ ಗಂಟೆಗಳ ನಂತರ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ. ಮುರಳೀಧರನ್ ಕಾರಿನ ಮೇಲೆ ಟಿಎಂಸಿ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮೇ 2 ರಂದು ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಭುಗಿಲೆದ್ದ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಪರಿಶೀಲಿಸಲು ಮುರಳೀಧರನ್ ಬಂಗಾಳಕ್ಕೆ ಹೋಗಿದ್ದರು.

ಏತನ್ಮಧ್ಯೆ, ಟಿಎಂಸಿ ರಾಜ್ಯದ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆರೋಪಿಸಿದ್ದಾರೆ. ಪಶ್ಚಿಮ ಮಿಡ್ನಾಪೋರ್​ನಲ್ಲಿ ಕೇಂದ್ರ ಸಚಿವ ವಿ ಮುರಳೀಧರ್ ಜೀ ಅವರ ಬೆಂಗಾವಲು ಮೇಲೆ ಟಿಎಂಸಿ ಕಾರ್ಯಕರ್ತರು ನಡೆಸಿದ ದಾಳಿ ಬಹಳ ಖಂಡನೀಯ. ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ನಾನು ನಿನ್ನೆಯೇ ಹೇಳಿದ್ದೇನೆ. ಭಾರತ ಸರ್ಕಾರದ ಸಚಿವರ ಮೇಲೆ ಹಲ್ಲೆ ನಡೆಸುವ ಸ್ಥಳದಲ್ಲಿ ಸಾರ್ವಜನಿಕರ ಪರಿಸ್ಥಿತಿ ಹೇಗಿರುತ್ತದೆ? ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಫಲಿತಾಂಶ ಬಂದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪ್ರಾಯೋಜಿತ ಹಿಂಸಾಚಾರ ಭರದಿಂದ ಸಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಜೀವ ಉಳಿಸಲು ಸಾವಿರಾರು ಜನರು ಪಲಾಯನ ಮಾಡುತ್ತಿರುವಾಗ, ಅತ್ಯಾಚಾರದ ಘಟನೆಗಳು ನಡೆಯುತ್ತಿರುವಾಗ, ವಾಕ್ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ವಕೀಲರು ಕಾಣೆಯಾಗಿದ್ದಾರೆ ಎಂದಿದ್ದಾರೆ ನಡ್ಡಾ.


ಗುರುವಾರ ಬೆಳಗ್ಗೆ ಗೃಹ ಸಚಿವಾಲಯದ (ಎಂಎಚ್‌ಎ) ನಾಲ್ಕು ಸದಸ್ಯರ ತಂಡವು ರಾಜ್ಯದ ಹಿರಿಯ ಸರ್ಕಾರದ ಹಿರಿಯರನ್ನು ಭೇಟಿಯಾಗಿ ಹಿಂಸಾಚಾರವನ್ನು ತಡೆಗಟ್ಟಲು ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ.
ಮೇ 2 ರಂದು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಮತಗಳನ್ನು ಗೆದ್ದ ಕೆಲವೇ ಗಂಟೆಗಳ ನಂತರ, ರಾಜ್ಯದಲ್ಲಿ ಹಲವಾರು ಹಿಂಸಾಚಾರ ಘಟನೆಗಳು ವರದಿಯಾಗಿವೆ. ಟಿಎಂಸಿ ಮತ್ತು ಬಿಜೆಪಿ ಇಬ್ಬರೂ ತಮ್ಮ ಕಾರ್ಯಕರ್ತರು ಮತ್ತು ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಪರಸ್ಪರ ಆರೋಪಿಸಿದ್ದಾರೆ.

ಇದನ್ನೂ ಓದಿ:  ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ. ಮುರಳೀಧರನ್ ಬೆಂಗಾವಲು ವಾಹನದ ಮೇಲೆ ದಾಳಿ, ಇದು ಟಿಎಂಸಿ ಕೃತ್ಯ: ಬಿಜೆಪಿ ಆರೋಪ

(West Bengal CM Mamata Banerjee accused central ministers inciting the post poll violence in state)

Published On - 5:58 pm, Thu, 6 May 21