ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮುಂಬೈ ಕೋರ್ಟ್​ನಿಂದ ಸಮನ್ಸ್​; ಮಾ.2ರಂದು ವಿಚಾರಣೆಗೆ ಹಾಜರಾಗಲು ಸೂಚನೆ

| Updated By: Lakshmi Hegde

Updated on: Feb 02, 2022 | 6:06 PM

ಅಂದು ರಾಷ್ಟ್ರಗೀತೆ ಹಾಡುವಾಗ ಅವರು ಥಟ್ಟನೆ ನಿಲ್ಲಿಸಿ, ವೇದಿಕೆಯಿಂದ ನಿರ್ಗಮಿಸಿದ್ದು ಯೂಟ್ಯೂಬ್​, ಡಿವಿಡಿಯಲ್ಲಿರುವ ವಿಡಿಯೋ ಕ್ಲಿಪ್​ನಿಂದ ಸ್ಪಷ್ಟವಾಗಿದೆ. ಈ ವಿಡಿಯೋಗಳನ್ನು ದೂರುದಾರರು ನಮಗೆ ನೀಡಿದ್ದಾರೆ ಎಂದು ಕೋರ್ಟ್ ಹೇಳಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮುಂಬೈ ಕೋರ್ಟ್​ನಿಂದ ಸಮನ್ಸ್​; ಮಾ.2ರಂದು ವಿಚಾರಣೆಗೆ ಹಾಜರಾಗಲು ಸೂಚನೆ
ಮಮತಾ ಬ್ಯಾನರ್ಜಿ
Follow us on

ಮುಂಬೈ:  ಮುಂಬೈ ನ್ಯಾಯಾಲಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(West Bengal Chief Minister Mamata Banerjee)ಯವರಿಗೆ ಸಮನ್ಸ್​ ನೀಡಿದ್ದು, ಮಾರ್ಚ್​ 2ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. 2021ರ ಡಿಸೆಂಬರ್​ನಲ್ಲಿ ಮಮತಾ ಬ್ಯಾನರ್ಜಿ ಮುಂಬೈಗೆ ಭೇಟಿ ನೀಡಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಆ ಸಮಾರಂಭದಲ್ಲಿ ರಾಷ್ಟ್ರಗೀತೆ ಹಾಡುವಾಗ ಅವರು ಎದ್ದುನಿಂತು ಗೌರವ ತೋರಿಸಲಿಲ್ಲ. ಈ ಮೂಲಕ ರಾಷ್ಟ್ರಗೀತೆಗೆ ಅವಮಾನಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟು ಈ ಸಮನ್ಸ್​ ಜಾರಿ ಮಾಡಿರುವ ನ್ಯಾಯಾಲಯ (Mumbai Court),  ಮಮತಾ ಬ್ಯಾನರ್ಜಿಯವರು ಒಬ್ಬರು ಮುಖ್ಯಮಂತ್ರಿ. ಅನುಮೋದನೆಯ ಅಗತ್ಯವಿಲ್ಲ ಮತ್ತು ಆರೋಪಿ ವಿರುದ್ಧ ಮುಂದಿನ ಪ್ರಕ್ರಿಯೆ ನಡೆಸಲು ಯಾವುದೇ ಅಡ್ಡಿಯೂ ಇಲ್ಲ ಎಂದು ಹೇಳಿದೆ.  ಅಂದಹಾಗೇ, ಮಮತಾ ಬ್ಯಾನರ್ಜಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಂಬೈ ಘಟಕದ ಕಾರ್ಯಕಾರಿ ವಿವೇಕಾನಂದ ಗುಪ್ತಾ ಅವರು ಡಿಸೆಂಬರ್​​ನಲ್ಲಿ ಮುಂಬೈ ಮೆಟ್ರೋಪೊಲಿಟನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮೆಟ್ಟಿಲೇರಿದ್ದರು. ದೀದಿ ವಿರುದ್ಧ ಎಫ್​ಐಆರ್ ದಾಖಲಿಸುವಂತೆಯೂ ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. 

ಅಂದು ರಾಷ್ಟ್ರಗೀತೆ ಹಾಡುವಾಗ ಅವರು ಥಟ್ಟನೆ ನಿಲ್ಲಿಸಿ, ವೇದಿಕೆಯಿಂದ ನಿರ್ಗಮಿಸಿದ್ದು ಯೂಟ್ಯೂಬ್​, ಡಿವಿಡಿಯಲ್ಲಿರುವ ವಿಡಿಯೋ ಕ್ಲಿಪ್​ನಿಂದ ಸ್ಪಷ್ಟವಾಗಿದೆ. ಈ ವಿಡಿಯೋಗಳನ್ನು ದೂರುದಾರರು ನಮಗೆ ನೀಡಿದ್ದಾರೆ. ರಾಷ್ಟ್ರಗೀತೆಗೆ ಅವಮಾನ ಮಾಡುವುದು ರಾಷ್ಟ್ರೀಯ ಗೌರವ ಕಾಯ್ದೆ, 1971ರ ಸೆಕ್ಷನ್​ 3ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ಅದನ್ನು ಮಮತಾ ಬ್ಯಾನರ್ಜಿ ಮಾಡಿರುವುದು ವಿಡಿಯೋದಲ್ಲಿ ಕಾಣುತ್ತದೆ ಎಂದು ಕೋರ್ಟ್ ಹೇಳಿದೆ.  ಇನ್ನು ಯಾವುದೇ ಸಂದರ್ಭದಲ್ಲಿ ಯಾರಾದರೂ ರಾಷ್ಟ್ರಗೀತೆ ಹಾಡುತ್ತಿರಲಿ ಅಥವಾ ಇನ್ಯಾವುದೇ ಮೂಲದಿಂದ ಅದು ಪ್ರಸಾರವಾಗುತ್ತಿರಲಿ, ಆ ಸಮಯದಲ್ಲಿ ಅದನ್ನು ಕೇಳುತ್ತಿರುವವರು ಎದ್ದುನಿಲ್ಲಬೇಕು ಎಂದು 2015ರಲ್ಲಿ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಅದನ್ನು ಮಮತಾ ಬ್ಯಾನರ್ಜಿ ಉಲ್ಲಂಘಿಸಿದ್ದಾರೆ ಎಂದು ವಿವೇಕಾನಂದ ಗುಪ್ತಾ ಆರೋಪಿಸಿದ್ದಾರೆ.

ಡಿಸೆಂಬರ್ ಪ್ರಾರಂಭದಲ್ಲಿಯೇ ಮಮತಾ ಬ್ಯಾನರ್ಜಿ ಮುಂಬೈ ಪ್ರವಾಸ ಮಾಡಿದ್ದರು. ಅಲ್ಲಿ ಮೊದಲು ಶಿವಸೇನೆ ನಾಯಕರಾದ ಆದಿತ್ಯ ಠಾಕ್ರೆ (ಸಿಎಂ ಉದ್ಧವ್ ಠಾಕ್ರೆ ಪುತ್ರ) ಮತ್ತು ಸಂಜಯ್ ರಾವತ್​ರನ್ನು ಭೇಟಿಯಾಗಿದ್ದರು. ಅದಾದ ಬಳಿಕ ಎನ್​ಸಿಪಿ ನಾಯಕ ಶರದ್​ ಪವಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಕಾಂಗ್ರೆಸ್​ ನಾಯಕರನ್ನು ಭೇಟಿಯಾಗಿರಲಿಲ್ಲ.

ಇದನ್ನೂ ಓದಿ: ಚೀನಾದಲ್ಲಿ ನ್ಯೂ ಇಯರ್​ ಸಂಭ್ರಮ: ಚಾಕೋಲೇಟ್​ ಹುಲಿ ತಯಾರಿಸಿ ಶುಭ ಕೋರಿದ ಪೇಸ್ಟ್ರಿ ವಿನ್ಯಾಸಕಾರ