
ಡಾರ್ಜಲಿಂಗ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮಂಗಳವಾರ ಡಾರ್ಜಲಿಂಗ್ನ (Darjeeling) ರಸ್ತೆ ಬದಿಯಲ್ಲಿರುವ ಪಾನಿಪೂರಿ ಸ್ಟಾಲ್ಲ್ನಲ್ಲಿ ಪಾನಿಪೂರಿ (Panipuri) ತಯಾರಿಸಿ ಜನರಿಗೆ ನೀಡುತ್ತಿರುವ ವಿಡಿಯೊ ವೈರಲ್ ಆಗಿದೆ. ಡಾರ್ಜಲಿಂಗ್ಗೆ ಭೇಟಿ ನೀಡಿದ ಪ್ರವಾಸಿಗರು ಮತ್ತು ಮಕ್ಕಳೊಂದಿಗೆ ಸಂವಾದ ಮಾಡುತ್ತಾ ಅವರಿಗೆ ಪಾನಿಪೂರಿ ನೀಡುತ್ತಿರುವ ಮಮತಾ ದೀದಿಯನ್ನು ವಿಡಿಯೊದಲ್ಲಿ ಕಾಣಬಹುದು. ಗರಿಗರಿಯಾದ ಪೂರಿಯೊಳಗೆ ಬೇಯಿಸಿದ ಆಲೂಗಡ್ಡೆ ತುಂಬಿಸಿ ನಂತರ ಅದನ್ನು ಹುಣಸೆಹುಳಿ ನೀರಿನಲ್ಲಿ ಮುಳುಗಿಸಿದ ಪಾನಿಪೂರಿಯನ್ನು ಮಮತಾ ಜನರಿಗೆ ನೀಡುತ್ತಿರುವುದು ವಿಡಿಯೊದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಪಾನಿಪೂರಿಯನ್ನು ಪುಚ್ಕಾ ಎಂದು ಕರೆಯಲಾಗುತ್ತದೆ. ಮಹಿಳೆಯರ ಸ್ವಸಹಾಯ ಗುಂಪು ಕ್ವೀನ್ ಆಫ್ ಹಿಲ್ಸ್ ಗೆ ಭೇಟಿ ನೀಡಿದ ಮಮತಾ ಅಲ್ಲಿ ಪಾನಿಪೂರಿ ಮಾಡಿ ಜನರಿಗೆ ನೀಡಿದ್ದಾರೆ .
ಟಿಎಂಸಿ ಕೂಡಾ ಈ ವಿಡಿಯೊವನ್ನು ಟ್ವೀಟ್ ಮಾಡಿದ್ದು, ನಮ್ಮ ಗೌರವಾನ್ವಿತ ಅಧ್ಯಕ್ಷೆ ಮಮತಾ ಬ್ಯಾನರ್ಜಿಯವರು ಡಾರ್ಜಲಿಂಗ್ ನಲ್ಲಿರುವ ಮಹಿಳಾ ಸ್ವಸಹಾಯ ಸಂಘದ ಸ್ಟಾಲ್ ಗೆ ಭೇಟಿನೀಡಿ ಅಲ್ಲಿ ಪುಚ್ಕಾ ತಯಾರಿಸಿ ಮಕ್ಕಳಿಗೆ ನೀಡಿದ್ದಾರೆ ಎಂದು ಹೇಳಿದೆ.
ಗೋರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದಲ್ಲಿ ಹೊಸದಾಗಿ ಆಯ್ಕೆ ಆದ ಮಂಡಳಿ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಮಮತಾ ಡಾರ್ಜಲಿಂಗ್ ಗೆ ಭೇಟಿ ನೀಡಿದ್ದರು. ಈ ಹಿಂದೆ ಡಾರ್ಜಲಿಂಗ್ ಗೆ ಭೇಟಿ ನೀಡಿದ್ದಾಗ ಮಮತಾ ಅವರು ಜನಪ್ರಿಯ ಟಿಬೆಟಿಯನ್ ತಿಂಡಿ ಮೊಮೊ ತಯಾರಿಸಿದ್ದರು. 2019ರಲ್ಲಿ ದಿಘಾದಿಂದ ಕೊಲ್ಕತ್ತಾಕ್ಕೆ ಮರಳುವಾಗ ಅವರು ಚಹಾ ತಯಾರಿಸಿ ಎಲ್ಲರಿಗೂ ನೀಡಿದ್ದರು.