ಮಮತಾ ಬ್ಯಾನರ್ಜಿ ಕಿರಿಯ ಸಹೋದರ ಕೊರೊನಾ ಸೋಂಕಿನಿಂದ ನಿಧನ

|

Updated on: May 15, 2021 | 12:32 PM

ಆಶಿಮ್ ಬ್ಯಾನರ್ಜಿ ಅವರಿಗೆ ಕೊರೊನಾ ಸೋಂಕು ತಗುಲಿ ಅನೇಕ ದಿನಗಳಾಗಿದ್ದು, ಸುಮಾರು ಒಂದು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ನಿರಂತರ ಚಿಕಿತ್ಸೆ ನೀಡಿದರೂ ಅವರ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಾ ಬಂದ ಕಾರಣ ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ.

ಮಮತಾ ಬ್ಯಾನರ್ಜಿ ಕಿರಿಯ ಸಹೋದರ ಕೊರೊನಾ ಸೋಂಕಿನಿಂದ ನಿಧನ
ಮಮತಾ ಬ್ಯಾನರ್ಜಿ
Follow us on

ಕೋಲ್ಕತ್ತಾ: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಆರಂಭವಾದ ನಂತರ ಹಿರಿಯರು, ಕಿರಿಯರು, ಬಡವ, ಶ್ರೀಮಂತ ಎಂಬ ಭೇದಭಾವ ಇಲ್ಲದೇ ಅನೇಕರು ಮರಣ ಹೊಂದುತ್ತಿದ್ದಾರೆ. ಜನಸಾಮಾನ್ಯರಿಂದ ಹಿಡಿದು ಗಣ್ಯಾತಿಗಣ್ಯರ ತನಕ ಎಲ್ಲರೂ ಕೊರೊನಾ ಮುಂದೆ ಸಮಾನಾಗಿದ್ದು, ಎಷ್ಟೇ ಪ್ರಭಾವವಿದ್ದರೂ ಜೀವ ಉಳಿಸಿಕೊಳ್ಳಲಾಗುತ್ತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರ ಆಶಿಮ್ ಬ್ಯಾನರ್ಜಿ ಕೊರೊನಾ ಸೋಂಕಿಗೆ ತುತ್ತಾಗಿ ನಿಧನರಾಗಿದ್ದಾರೆ. ಆಶಿಮ್ ಬ್ಯಾನರ್ಜಿ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕೋಲ್ಕತ್ತಾದ ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ಅಲೋಕ್ ರಾಯ್ ತಿಳಿಸಿದ್ದಾರೆ.

ಆಶಿಮ್ ಬ್ಯಾನರ್ಜಿ ಅವರಿಗೆ ಕೊರೊನಾ ಸೋಂಕು ತಗುಲಿ ಅನೇಕ ದಿನಗಳಾಗಿದ್ದು, ಸುಮಾರು ಒಂದು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ನಿರಂತರ ಚಿಕಿತ್ಸೆ ನೀಡಿದರೂ ಅವರ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಾ ಬಂದ ಕಾರಣ ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ. ಇದೀಗ ಮೃತರ ಅಂತ್ಯಸಂಸ್ಕಾರವನ್ನು ಕೊರೊನಾ ನಿಯಮಾವಳಿಗಳ ಪ್ರಕಾರವೇ ಮಾಡಲಾಗುತ್ತದೆ ಎಂದು ಮಾಹಿತಿ ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಸಂದರ್ಭದಿಂದಲೂ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ಸೋಂಕು ಹಬ್ಬುವಿಕೆಯಲ್ಲಿ ಚುನಾವಣೆ ಪ್ರಮುಖ ಪಾತ್ರ ವಹಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ಧಾರೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸುಮಾರು 20,478 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸದ್ಯ ಒಂದೂವರೆ ಲಕ್ಷಕ್ಕೂ ಅಧಿಕ ಜನ ಸೋಂಕಿತರು ರಾಜ್ಯದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 11 ದಿನಗಳಿಂದ ಪ್ರತಿನಿತ್ಯ 100ಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಮೃತರಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 138 ಜನ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:
Covid Vaccine: ವರ್ಷಾಂತ್ಯದೊಳಗೆ ಭಾರತದಲ್ಲಿ ಸಿಗಲಿರುವ 8 ಕೊರೊನಾ ಲಸಿಕೆಗಳು ಯಾವುವು?

Published On - 12:31 pm, Sat, 15 May 21