‘ನಾಪತ್ತೆ’ ಪ್ರಕರಣ; ಮುಕುಲ್ ರಾಯ್ ವಿಚಾರಣೆಗೆ ದೆಹಲಿಗೆ ತೆರಳಿದ ಪಶ್ಚಿಮ ಬಂಗಾಳ ಪೊಲೀಸರು

|

Updated on: Apr 19, 2023 | 10:19 PM

ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ ನಾಪತ್ತೆಯಾಗಿದ್ದಾರೆ ಎಂಬ ವಿಚಾರವಾಗಿ ಅವರ ಮಗ ಸುಭ್ರಂಗ್ಶು ನೀಡಿದ ದೂರಿನ ಆಧಾರದಲ್ಲಿ ಪಶ್ಚಿಮ ಬಂಗಾಳ ಪೊಲೀಸರ ತಂಡ ತನಿಖೆಗಾಗಿ ಬುಧವಾರ ದೆಹಲಿಗೆ ತೆರಳಿದೆ.

‘ನಾಪತ್ತೆ’ ಪ್ರಕರಣ; ಮುಕುಲ್ ರಾಯ್ ವಿಚಾರಣೆಗೆ ದೆಹಲಿಗೆ ತೆರಳಿದ ಪಶ್ಚಿಮ ಬಂಗಾಳ ಪೊಲೀಸರು
ಮುಕುಲ್ ರಾಯ್
Follow us on

ಕೋಲ್ಕತ್ತ: ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ (Mukul Roy) ನಾಪತ್ತೆಯಾಗಿದ್ದಾರೆ ಎಂಬ ವಿಚಾರವಾಗಿ ಅವರ ಮಗ ಸುಭ್ರಂಗ್ಶು ನೀಡಿದ ದೂರಿನ ಆಧಾರದಲ್ಲಿ ಪಶ್ಚಿಮ ಬಂಗಾಳ (West Bengal) ಪೊಲೀಸರ ತಂಡ ತನಿಖೆಗಾಗಿ ಬುಧವಾರ ದೆಹಲಿಗೆ ತೆರಳಿದೆ. ತಂದೆಗೆ ಡೈಮೆನ್ಷಿಯಾ ಮತ್ತು ಪರ್ಕಿನ್ಸನ್ ಕಾಯಿಲೆ ಇದೆ. ಅವರನ್ನು ಬಲವಂತವಾಗಿ ದೆಹಲಿಗೆ ಕರೆದೊಯ್ಯಲಾಗಿದೆ. ಅವರೀಗ ನಾಪತ್ತೆಯಾಗಿದ್ದಾರೆ ಹಾಗೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮುಕುಲ್ ರಾಯ್ ಮಗ ಸುಭ್ರಂಗ್ಶು ಪೊಲೀಸರಿಗೆ ದೂರು ನೀಡಿದ್ದರು. ಅನಾರೋಗ್ಯಪೀಡಿತ ವ್ಯಕ್ತಿ ಜತೆ ರಾಜಕಾರಣ ಮಾಡಬೇಡಿ ಎಂದು ಯಾವುದೇ ಪಕ್ಷದ ಹೆಸರು ಉಲ್ಲೇಖಿಸದೇ ಅವರು ಹೇಳಿದ್ದರು. ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮುಕುಲ್ ರಾಯ್ 2021ರ ಬಂಗಾಳ ಚುನಾವಣೆಯ ಬಳಿಕ ಮತ್ತೆ ಟಿಎಂಸಿಗೆ ಮರಳಿದ್ದರು. ಆದರೆ, ‘ನಾಪತ್ತೆ’ಯಾಗಿದ್ದಾರೆ ಎನ್ನಲಾದ ಬಳಿಕ ದೆಹಲಿಯಲ್ಲಿ ಕಾಣಿಸಿಕೊಂಡ ಅವರು ಸುದ್ದಿಗಾರರ ಜತೆ ಮಾತನಾಡಿ, ಶಾಸಕ ಹಾಗೂ ಸಂಸದನಾಗಿದ್ದ ನಾನು ದೆಹಲಿಗೆ ಬರಬಾರದೇ? ನನಗೆ ದೆಹಲಿಯಲ್ಲಿ ಸ್ವಲ್ಪ ಕೆಲಸವಿತ್ತು ಹಾಗೆ ಬಂದಿದ್ದೇನೆ ಎಂದು ಹೇಳಿದ್ದರು.

ಯಾರಿಗೂ ಮಾಹಿತಿ ನೀಡದೇ ದೆಹಲಿಗೆ ಬಂದ ವಿಚಾರವಾಗಿ ಮಂಗಳವಾರ ಪ್ರತಿಕ್ರಿಯಿಸಿದ್ದ ಅವರು, ಎಲ್ಲವನ್ನೂ ಬಹಿರಂಗಪಡಿಸಲಾಗದು ಎಂದು ಹೇಳಿದ್ದರು.

ಅಸ್ವಸ್ಥನಾಗಿದ್ದುದು ನಿಜ. ಈಗ ಚೇತರಿಸಿಕೊಂಡಿರುವೆ. ಈಗ ಪೂರ್ಣ ಪ್ರಮಾಣದ ರಾಜಕೀಯ ಮಾಡಲು ಬಯಸಿದ್ದೇನೆ. ಆದರೆ ರಾಜಕೀಯ ಭವಿಷ್ಯದ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಅವರು ಹೇಳಿದ್ದರು. ತಮ್ಮನ್ನು ಬಿಜೆಪಿ ಶಾಸಕ ಎಂದು ಉಲ್ಲೇಖಿಸಿದ ಅವರು, ದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡುವುದಾಗಿಯೂ ಹೇಳಿದ್ದರು.

ಇದನ್ನೂ ಓದಿ: Narendra Modi: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಆ್ಯಪಲ್‌ ಸಿಇಒ ಟಿಮ್ ಕುಕ್

ಸುಭ್ರಂಗ್ಶು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪಶ್ಚಿಮ ಬಂಗಾಳ ಪೊಲೀಸರಿಗೆ ಹಲವು ಸುಳಿವುಗಳು ಲಭ್ಯವಾಗಿದ್ದವು. ಕೋಲ್ಕತ್ತ ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಬಿಜೆಪಿ ನಾಯಕ ಪೀಯೂಷ್ ಕನೊಡಿಯಾ, ಭಗೀರಥ್ ಮಹತೋ ಹಾಗೂ ಅವರ ಚಾಲಕ ರಾಜು ರಾಯ್ ಜತೆ ಮುಕುಲ್ ರಾಯ್ ತೆರಳಿದ್ದುದು ತಿಳಿದುಬಂದಿತ್ತು.

ನನ್ನ ತಂದೆಯವರ ಬಳಿ ಒಂದು ರೂಪಾಯಿಯೂ ಇರಲಿಲ್ಲ. ಅವರು ದೆಹಲಿಗೆ ವಿಮಾನ ಟಿಕೆಟ್ ಖರೀದಿಸಿದ್ದು ಹೇಗೆ ಎಂದು ಸುಭ್ರಂಗ್ಶು ಪ್ರಶ್ನಿಸಿದ್ದರು.

ಸುಭ್ರಂಗ್ಶು ಕೂಡ ಈ ಹಿಂದೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದು, ಅದಾಗಿ ಕೆಲವು ಸಮಯದ ನಂತರ ಮರಳಿ ಟಿಎಂಸಿ ಸೇರಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ