ದೆಹಲಿ: ಕಲ್ಕತ್ತಾ ಹೈಕೋರ್ಟ್ ಗುರುವಾರ ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ (post-poll violence) ವೇಳೆ ನಡೆದ ಕೊಲೆ, ಅತ್ಯಾಚಾರ ಪ್ರಕರಣಗಳ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಿದೆ. ಇತರ ಅಪರಾಧಗಳ ತನಿಖೆಗಾಗಿ ಎಸ್ಐಟಿಯನ್ನು ಸ್ಥಾಪಿಸಲು ಹೈಕೋರ್ಟ್ ಆದೇಶಿಸಿದೆ. ಪಶ್ಚಿಮ ಬಂಗಾಳ ಕೇಡರ್‌ನ ಹಿರಿಯ ಅಧಿಕಾರಿಗಳು ವಿಶೇಷ ತನಿಖಾ ತಂಡದ ಭಾಗವಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ಎಲ್ಲಾ ದಾಖಲೆಗಳನ್ನು ಮತ್ತು ರೆಕಾರ್ಡ್ಗಳನ್ನುತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರವನ್ನು ಕೇಳಲಾಗಿದೆ. “ಒಂದು ವೇಳೆ, ರಾಜ್ಯವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು” ಎಂದು ಹೈಕೋರ್ಟ್ ಹೇಳಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿರುವ ಪಿಐಎಲ್‌ಗಳ ವಿಚಾರಣೆ ನಡೆಸಿ ನ್ಯಾಯಾಲಯ ಈ ಆದೇಶ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರದ ಹಿಂಸಾಚಾರದ ಪರಿಣಾಮವಾಗಿ ಜನರು ಹಲ್ಲೆಗೆ ಒಳಗಾಗಿದ್ದರು, ಮನೆಗಳಿಂದ ಪಲಾಯನಗೈದರು ಮತ್ತು ಅವರ ಆಸ್ತಿಗಳನ್ನು ನಾಶಪಡಿಸಲಾಗಿದೆ ಎಂದು ಪಿಐಎಲ್‌ಗಳಲ್ಲಿ ಹೇಳಲಾಗಿದ್ದು ಇವುಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಹೇಳಲಾಗಿದೆ.
“ಚುನಾವಣೋತ್ತರ ಹಿಂಸಾಚಾರ” ದಲ್ಲಿ ವಿವಿಧ ಆರೋಪಗಳನ್ನು ತನಿಖೆ ಮಾಡಲು ತನಿಖಾ ಸಮಿತಿಯನ್ನು ರಚಿಸುವಂತೆ ರಾಷ್ಟ್ರೀಯ ಮಾನವ ಸಂಪನ್ಮೂಲ ಆಯೋಗಕ್ಕೆ (NHRC)ಗೆ ಹೈಕೋರ್ಟ್ ಆದೇಶಿಸಿತ್ತು. ತನ್ನ ವರದಿಯಲ್ಲಿ NHRC ಸಮಿತಿ “ಕೊಲೆ ಮತ್ತು ಅತ್ಯಾಚಾರದಂತಹ ಘೋರ ಅಪರಾಧಗಳ” ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.
ಚುನಾವಣೆಯ ನಂತರದ ಹಿಂಸಾಚಾರದ ಸಮಯದಲ್ಲಿ ನಡೆದಿದೆ ಎಂದು ಹೇಳಿರುವ ಈ ಪ್ರಕರಣಗಳ ವಿಚಾರಣೆಯನ್ನು ರಾಜ್ಯದ ಹೊರಗೆ ನಡೆಸಬೇಕು ಎಂದು ಹೇಳಿದೆ. ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನ ನಂತರ ಭುಗಿಲೆದ್ದ ರಾಜಕೀಯ ಹಿಂಸಾಚಾರವನ್ನು ತಡೆಯುವಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವರದಿಯು ಬಲವಾಗಿ ಟೀಕಿಸಿದೆ.
ಇದನ್ನೂ ಓದಿ: ಮಂಗಗಳ ಮಾರಣಹೋಮ ಮಾಸುವ ಮುನ್ನವೇ ಹಾಸನದಲ್ಲಿ 20ಕ್ಕೂ ಹೆಚ್ಚು ಕರುಗಳು ಸಾವು
ಇದನ್ನೂ ಓದಿ: Ashraf Ghani: ಅಫ್ಘಾನಿಸ್ತಾನ ಬಿಟ್ಟ ಮೇಲೆ ಮೊದಲ ವಿಡಿಯೋ ಬಿಡುಗಡೆ ಮಾಡಿದ ಅಶ್ರಫ್ ಘನಿ; ಹೇಳಿದ್ದೇನು?
(West Bengal post-poll violence Calcutta high court ordered CBI probe into alleged into murder rape cases)
Published On - 12:26 pm, Thu, 19 August 21