ದೆಹಲಿ: ನಾವೆಲ್ಲರೂ ಚಿಕ್ಕವರಿದ್ದಾಗ ಶಾಲೆಗಳಲ್ಲಿ ನಾನು ಪ್ರಧಾನಿಯಾದರೆ.. ನಾನು ಮುಖ್ಯಮಂತ್ರಿ ಆದರೆ ಎಂಬ ಪ್ರಬಂಧಗಳನ್ನು ಬರೆದಿರುತ್ತೇವೆ. ಇದೇ ಪ್ರಶ್ನೆ ಕಾಂಗ್ರೆಸ್ನ ಯುವನಾಯಕ, ಸಂಸದ ರಾಹುಲ್ ಗಾಂಧಿ ಅವರಿಗೂ ಎದುರಾಯಿತು. ‘ಒಂದುವೇಳೆ ನೀವು ಭಾರತದ ಪ್ರಧಾನಿಯಾದರೆ?’ ಎಂದು ವೆಬಿನಾರ್ ಒಂದರಲ್ಲಿ ರಾಹುಲ್ ಗಾಂಧಿ ಅವರನ್ನು ಅಮೆರಿಕದ ಮಾಜಿ ರಾಯಭಾರಿ, ಪ್ರಸ್ತುತ ಹಾರ್ವರ್ಡ್ ಕೆನಡಿ ಸ್ಕೂಲ್ನಲ್ಲಿ ಪ್ರಾಧ್ಯಾಪಕರಾಗಿರುವ ನಿಕೋಲಾಸ್ ಬರ್ನ್ಸ್ ಪ್ರಶ್ನಿಸಿದರು. ಈ ಕುತೂಹಲಕಾರಿ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ, ‘ನಾನು ಭಾರತದ ಪ್ರಧಾನಿ ಆದರೆ ಅಭಿವೃದ್ಧಿ ಕೇಂದ್ರಿತ ಯೋಜನೆಗಳಿಗಿಂತ ಉದ್ಯೋಗ ಕೇಂದ್ರಿತ ಯೋಜನೆಗಳತ್ತ ಹೆಚ್ಚು ಗಮನ ಹರಿಸುತ್ತೇನೆ’ ಎಂದು ಉತ್ತರಿಸಿದರು. ‘ನಾವು ಅಭಿವೃದ್ಧಿ ಹೊಂದಬೇಕು. ಆದರೆ ಎಲ್ಲ ವಲಯಗಳಲ್ಲೂ ಉದ್ಯೋಗ ಸೃಷ್ಟಿ ಉತ್ಪಾದನೆ ಮತ್ತು ಗುಣಮಟ್ಟದ ಹೆಚ್ಚಳಗಳತ್ತ ಗಮನಹರಿಸಬೇಕಿದೆ. ಹೀಗಾಗಿ ನಾನು ಭಾರತದ ಪ್ರಧಾನಿಯಾದರೆ ಮೊದಲು ಉದ್ಯೋಗ ಸೃಷ್ಟಿಯತ್ತ ಗಮನಹರಿಸುವೆ ಎಂದು ಅವರು ತಿಳಿಸಿದರು.
ರಷ್ಯಾ ಮತ್ತು ಚೀನಾಗಳು ಪ್ರಜಾಪ್ರಭುತ್ವ ಸಿದ್ಧಾಂತದ ಬಗ್ಗೆ ಕಠಿಣ ನಿಲುವು ತಳೆದಿರುವ ಬಗೆಗಿನ ವೆಬಿನಾರ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು. ವಿಶ್ವದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಭವಿಷ್ಯದ ಕಲ್ಪನೆಗಳನ್ನು ವಿವರಿಸುವ ವೇಳೆ ಭಾರತದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅಮೆರಿಕ ಮತ್ತು ಅಮೆರಿಕದಲ್ಲಿನ ಸಂಸ್ಥೆಗಳು ಮೌನ ತಾಳಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಅಮೆರಿಕದ ಸಂವಿಧಾನವು ಸ್ವಾತಂತ್ರ್ಯದ ಗಾಢ ಪರಿಕಲ್ಪನೆಯನ್ನು ಸಾರುತ್ತದೆ. ಆದರೆ ಎಷ್ಟೇ ಉದಾತ್ತ ಕಲ್ಪನೆಯನ್ನು ಹೇಳಿದರೂ ಸಹ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಮತ್ತು ಸಮರ್ಥಿಸಿಕೊಳ್ಳಬೇಕು. ಹೀಗೆ ತನ್ನ ಸಂವಿಧಾನದಲ್ಲಿ ಹೇಳಲಾದ ಕಲ್ಪನೆಗಳನ್ನು ಸಮರ್ಥಿಸಿಕೊಳ್ಳುವುದು ಅಮೆರಿಕದ ಎದುರಿನ ಬಹುದೊಡ್ಡ ಪ್ರಶ್ನೆ ಎಂದು ರಾಹುಲ್ ಗಾಂಧಿ ವೆಬಿನಾರ್ ಸಂವಾದದಲ್ಲಿ ವಿವರಿಸಿದರು.
ಚುನಾವಣೆಗಳಲ್ಲಿ ಸ್ಪರ್ಧಿಸಲು ಸಮಾಜದ ವಿವಿಧ ಸಂಸ್ಥೆಗಳ ಬೆಂಬಲ ಅಗತ್ಯವಿದೆ. ನನ್ನನ್ನು ಅಥವಾ ಯಾವುದೇ ಅಭ್ಯರ್ಥಿಯನ್ನು ರಕ್ಷಿಸುವ ಕಾನೂನು, ಆರ್ಥಿಕ ಬೆಂಬಲ, ಮುಕ್ತ ವ್ಯವಸ್ಥೆಯ ಮಾಧ್ಯಮಗಳ ಬೆಂಬಲ ಚುನಾವಣೆಗಳು ನಡೆಯಲು ಅಗತ್ಯವಿದೆ. ಆದರೆ 2014ರ ನಂತರ ಸಾರ್ವಜನಿಕ ಸಂಸ್ಥೆಗಳನ್ನು ಆಡಳಿತಾರೂಢ ಸರ್ಕಾರ ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದೆ. ದೇಶದಲ್ಲಿ ಆಡಳಿತಾರೂಢ ಬಿಜೆಪಿಯ ನಡೆಗಳು ಕುರಿತು ಸಾರ್ವಜನಿಕರಲ್ಲಿ ಅಸಮಧಾನ ಹುಟ್ಟುಹಾಕುತ್ತಿವೆ. ಇಂತಹ ಎಲ್ಲ ಜನರನ್ನೂ ಒಗ್ಗೂಡಿಸುವುದು ಮುಖ್ಯ ಎಂದು ರಾಹುಲ್ ಗಾಂಧಿ ವ್ಯಾಖ್ಯಾನಿಸಿದರು.
ಆರ್ಎಸ್ಎಸ್ನ್ನು ಸಂಘ ಪರಿವಾರ್ ಎಂದು ಹೇಳಬಾರದು, ಅವರಿಗೆ ಕುಟುಂಬದ ಮೌಲ್ಯಗಳು ಗೊತ್ತಿಲ್ಲ: ರಾಹುಲ್ ಗಾಂಧಿ
(What Congress leader Rahul Gandhi replies a question What would you do as Indian Prime Minister)
Published On - 1:12 pm, Sat, 3 April 21