ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಸೋಮವಾರ (ಸೆಪ್ಟೆಂಬರ್ 18) ಆರಂಭವಾಗಿದ್ದು, ಮಹಿಳಾ ಮೀಸಲಾತಿ ಮಸೂದೆ( Women Reservation Bill) ಜಾರಿ ಕುರಿತ ಚರ್ಚೆಗಳು ವೇಗ ಪಡೆದುಕೊಂಡಿವೆ. ಈ ನಡುವೆ ಸೋಮವಾರ ಸಂಜೆ ನಡೆದ ಮೋದಿ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೂ ಅನುಮೋದನೆ ನೀಡಲಾಗಿದೆ. ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷ ಸಭೆಯಲ್ಲೂ 27 ವರ್ಷಗಳಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ವಿಧೇಯಕವನ್ನು ಅಂಗೀಕರಿಸುವಂತೆ ವಿರೋಧ ಪಕ್ಷಗಳ ಮುಖಂಡರು ಒತ್ತಾಯಿಸಿದ್ದಾರೆ.
ಈ ಮಸೂದೆ ಅಂಗೀಕಾರವಾದರೆ ಸಂಸತ್ತು ಮತ್ತು ಅಸೆಂಬ್ಲಿಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗ ಅಂದರೆ ಶೇಕಡ 33ರಷ್ಟು ಸ್ಥಾನಗಳು ಮೀಸಲಾಗಲಿವೆ. ಹಾಗಾದರೆ ಮಹಿಳಾ ಮೀಸಲಾತಿ ಮಸೂದೆ ಎಂದರೇನು ಎಂಬುದನ್ನು ತಿಳಿದುಕೊಳ್ಳಲೇಬೇಕಿದೆ.
ಮಹಿಳಾ ಮೀಸಲಾತಿ ಮಸೂದೆ ಎಂದರೇನು?
-ಮಹಿಳಾ ಮೀಸಲಾತಿ ವಿಧೇಯಕದ ಪ್ರಕಾರ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಸ್ಥಾನಗಳನ್ನು ಮೀಸಲಿಡಲಾಗುವುದು.
-ಈ ಮಸೂದೆಯ ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಎಸ್‌ಸಿ-ಎಸ್‌ಟಿ ಸಮುದಾಯದ ಮಹಿಳೆಯರಿಗೆ ಮೀಸಲಿಡಲಾಗುವುದು. ಈ ಮೀಸಲು ಸ್ಥಾನಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರದಿ ಪದ್ಧತಿಯ ಮೂಲಕ ವಿವಿಧ ಪ್ರದೇಶಗಳಿಗೆ ಹಂಚಬಹುದು.
-ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ದೀರ್ಘಕಾಲ ಬಾಕಿ ಉಳಿದಿದೆ. ಈ ಮಸೂದೆಯನ್ನು 2010 ರಲ್ಲಿಯೇ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು, ಆದರೆ ಇಲ್ಲಿಯವರೆಗೆ ಲೋಕಸಭೆಯಲ್ಲಿ ಮಂಡಿಸಲು ಸಾಧ್ಯವಾಗಲಿಲ್ಲ.
ಮಹಿಳಾ ಮೀಸಲಾತಿ ವಿಧೇಯಕದ ಪ್ರಕಾರ ಮಹಿಳೆಯರಿಗೆ ಮೀಸಲಾತಿ 15 ವರ್ಷಗಳವರೆಗೆ ಮಾತ್ರ ಇರುತ್ತದೆ.
ಸಂಸತ್ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷ ಸಭೆಯಲ್ಲಿ ಹಲವು ರಾಜಕೀಯ ಪಕ್ಷಗಳ ಮುಖಂಡರು ಮಹಿಳಾ ಮೀಸಲಾತಿಗೆ ಒತ್ತು ನೀಡಿದ್ದರು.
ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಸೋಮವಾರ (ಸೆಪ್ಟೆಂಬರ್ 18) ಮಸೂದೆಯ ಬಗ್ಗೆ ಕಾಂಗ್ರೆಸ್ ಅನ್ನು ಬಲವಾಗಿ ಸಮರ್ಥಿಸಿಕೊಂಡರು, ಮೊದಲ ಮಹಿಳಾ ಪ್ರಧಾನಿ ಮತ್ತು ರಾಷ್ಟ್ರಪತಿ ಕಾಂಗ್ರೆಸ್‌ನಿಂದ ಬಂದವರು ಮತ್ತು ಈ ಕಾನೂನನ್ನು ಸಹ ಕಾಂಗ್ರೆಸ್ ತಂದಿದೆ ಎಂದು ಹೇಳಿದರು.
ಮತ್ತಷ್ಟು ಓದಿ: ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಕೇಂದ್ರ ಸಂಪುಟ ಅಸ್ತು, ಐತಿಹಾಸಿಕ ನಿರ್ಣಯ ಕೂಗೊಂಡ ಮೋದಿ ಸರ್ಕಾರ
-ಸುಪ್ರಿಯಾ ಸುಳೆ ಮಾತನಾಡಿ, ಸಂಖ್ಯೆಯ ಕೊರತೆಯಿಂದಾಗಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ. ಎನ್‌ಸಿಪಿ ನಾಯಕ ಮತ್ತು ಬಿಜೆಪಿ ಮಿತ್ರ ಪ್ರಫುಲ್ ಪಟೇಲ್ ಕೂಡ ಈ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.
ಪ್ರಸ್ತುತ ಲೋಕಸಭೆಯಲ್ಲಿ, 78 ಮಹಿಳಾ ಸದಸ್ಯರು ಚುನಾಯಿತರಾಗಿದ್ದಾರೆ, ಇದು ಒಟ್ಟು 543 ರ ಒಟ್ಟು ಬಲದ ಶೇಕಡಾ 15 ಕ್ಕಿಂತ ಕಡಿಮೆಯಾಗಿದೆ. ರಾಜ್ಯಸಭೆಯಲ್ಲೂ ಮಹಿಳಾ ಪ್ರಾತಿನಿಧ್ಯವು ಶೇಕಡಾ 14 ರಷ್ಟಿದೆ.
ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ಸಿಕ್ಕಿಂ, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಅಸೆಂಬ್ಲಿಗಳು ಶೇಕಡಾ 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯವನ್ನು ಹೊಂದಿವೆ.
ಡಿಸೆಂಬರ್ 2022 ರ ಸರ್ಕಾರಿ ಅಂಕಿಅಂಶಗಳ ಪ್ರಕಾರ ಬಿಹಾರ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ದೆಹಲಿ ಶೇಕಡಾ 10-12 ರಷ್ಟು ಮಹಿಳಾ ಶಾಸಕರನ್ನು ಹೊಂದಿದ್ದವು.
ಮಹಿಳಾ ಮೀಸಲಾತಿ ಮಸೂದೆ ಇತಿಹಾಸ
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮೇ 1989 ರಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಒದಗಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪರಿಚಯಿಸುವ ಮೂಲಕ ಚುನಾಯಿತ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯ ಬೀಜವನ್ನು ನೆಟ್ಟಿದ್ದರು.
1992 ಮತ್ತು 1993 ರಲ್ಲಿ, ಆಗಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ಸಂವಿಧಾನ ತಿದ್ದುಪಡಿ ಮಸೂದೆಗಳು 72 ಮತ್ತು 73 ಅನ್ನು ಮರುಪರಿಚಯಿಸಿದರು, ಇದು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಲ್ಲಾ ಸ್ಥಾನಗಳು ಮತ್ತು ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು (33%) ಮೀಸಲಿಡಲಾಗಿತ್ತು. ಮಸೂದೆಗಳು ಉಭಯ ಸದನಗಳಿಂದ ಅಂಗೀಕರಿಸಲ್ಪಟ್ಟವು ಮತ್ತು ರಾಷ್ಟ್ರದ ಕಾನೂನಾಗಿ ಮಾರ್ಪಟ್ಟವು. ಈಗ ದೇಶಾದ್ಯಂತ ಪಂಚಾಯತ್ ಮತ್ತು ನಗರಪಾಲಿಕೆಗಳಲ್ಲಿ ಸುಮಾರು 15 ಲಕ್ಷ ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ.
ಸೆಪ್ಟೆಂಬರ್ 12, 1996 ರಂದು, ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರವು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಗಾಗಿ ಲೋಕಸಭೆಯಲ್ಲಿ 81 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಮಸೂದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆಯಲು ವಿಫಲವಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ