2ಎ ಮೀಸಲಾತಿಗೆ ಆಗ್ರಹ: ಇಷ್ಟಲಿಂಗ ಪೂಜೆ ಮೂಲಕ ಇಂದಿನಿಂದ ಮತ್ತೆ ಪಂಚಮಸಾಲಿ ಸಮುದಾಯ ಹೋರಾಟ
ಉದ್ಯೋಗ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪಂಚಮಸಾಲಿ ಯುವಕ, ಯುವತಿಯರಿಗೆ ಅನ್ಯಾಯ ಆಗುತ್ತಿದೆ ಹಾಗೂ ಅವರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ.ಹೀಗಾಗಿ 3ಬಿ ಯಿಂದ 2ಎಗೆ ಸೇರಿಸಬೇಕು ಎಂದು ಹೋರಾಟಗಾರರ ವಾದವಾಗಿದೆ.
ಬೆಳಗಾವಿ: ಲಿಂಗಾಯತ ಪಂಚಮಸಾಲಿ (Lingayat Panchamasali) ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಮತ್ತು ಸಮಾಜದ ಎಲ್ಲ ಉಪ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಇಂದಿನಿಂದ (ಸೆ.10) ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಆರನೇ ಹಂತದ ಹೋರಾಟ ಆರಂಭವಾಗಲಿದೆ.
ನಿಪ್ಪಾಣಿಯಲ್ಲಿ ಬಹಿರಂಗ ಸಭೆ ನಡೆಸಿ ಬಳಿಕ ರಾಷ್ಟ್ರೀಯ ಹೆದ್ದಾರಿಗೆ ಪಾದಯಾತ್ರೆ ಮೂಲಕ ತೆರಳಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಸುವರು. ನಂತರ ಬೆಳಗ್ಗೆ 10ಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಸಂಸ್ಕೃತಿ ಭವನದಿಂದ ರ್ಯಾಲಿ ಆರಂಭವಾಗಲಿದೆ. ಹಂತ ಹಂತವಾಗಿ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಪಂಚಮಸಾಲಿ ಮೀಸಲಾತಿ ವಿಚಾರ ಕೋರ್ಟ್‌ನಲ್ಲಿರುವ ಹಿನ್ನೆಲೆಯಲ್ಲಿ ಕಾನೂನಿನ ತೊಡಕು ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಸಭೆ ಕರೆದು ಚರ್ಚಿಸಲು ಸ್ವಾಮೀಜಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ ದುಡಿದವರಿಗೆ ಸಚಿವ ಸ್ಥಾನ ನೀಡಬೇಕಿತ್ತು: ಬಸವ ಜಯಮೃತ್ಯುಂಜಯ ಸ್ವಾಮಿಜಿ
ಲಿಂಗಾಯತ ಪಂಚಮಸಾಲಿ ಸಮುದಾಯದ ಬೇಡಿಕೆ
ಲಿಂಗಾಯ ಪಂಚಮಸಾಲಿಗಳು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶದ ಕೆಲ ಭಾಗದಲ್ಲಿ ಸೇರಿ ಒಂದು ಕೋಟಿಗೂ ಹೆಚ್ಚು ಜನರು ಇದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 3 ಬಿಯಲ್ಲಿ ಸೇರಿಸಲಾಗಿದೆ. ಉದ್ಯೋಗ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪಂಚಮಸಾಲಿ ಯುವಕ, ಯುವತಿಯರಿಗೆ ಅನ್ಯಾಯ ಆಗುತ್ತಿದೆ ಹಾಗೂ ಅವರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ.
ಸುಮಾರು ಮೂವತ್ತನಾಲ್ಕು ವೀರಶೈವ ಲಿಂಗಾಯತ ಒಳಪಂಗಡಗಳು ಈಗಾಗಲೇ 2 ಎ ಮೀಸಲಾತಿ ಹಕ್ಕನ್ನು ಅನುಭವಿಸುತ್ತಿವೆ. ಆದರೆ ಕೃಷಿ ಮೂಲ ಕಸುಬು ಮಾಡುತ್ತಾ ಬಂದಿರುವ ಪಂಚಮಸಾಲಿಗಳಿಗೆ ಮೀಸಲಾತಿ ಸೌಲಭ್ಯ ಇಲ್ಲ. ಇದರಿಂದ ನಮ್ಮ ಮಕ್ಕಳ ಭವಿಷ್ಯಕ್ಕೆ ಅಡ್ಡಿ ಉಂಟಾಗುತ್ತಿದೆ. ಹೀಗಾಗಿ 3ಬಿ ಯಿಂದ 2ಎಗೆ ಸೇರಿಸಬೇಕು ಎಂದು ಹೋರಾಟಗಾರರ ವಾದವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 am, Sun, 10 September 23