ದೆಹಲಿ: ಭಾರತದಲ್ಲಿ ಈಗ ಕೊರೊನಾದ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಪ್ರಕರಣಗಳ ಸಂಖ್ಯೆ ಯಾವಾಗ ಕುಸಿತವಾಗುತ್ತದೆ ಎನ್ನುವ ಬಗ್ಗೆ ಅಂಕಿಅಂಶಗಳ ತಜ್ಞರು, ವಿಜ್ಞಾನಿಗಳು ಅಧ್ಯಯನ ನಡೆಸಿ ಮಾಹಿತಿ ನೀಡಿದ್ದಾರೆ. ತಜ್ಞರ ಪ್ರಕಾರ, ಜುಲೈ ಪ್ರಾರಂಭದ ವೇಳೆಗೆ ದೇಶಕ್ಕೆ ಕೊರೊನಾದಿಂದ ಮುಕ್ತಿ ಸಿಗುವ ನಿರೀಕ್ಷೆ ಇದೆ. ಭಾರತದಲ್ಲಿ ಈ ವರ್ಷದ (2021) ಜನವರಿ, ಫೆಬ್ರವರಿ ವೇಳೆಗೆ ಕೊರೊನಾದ ಮೊದಲ ಅಲೆ ಅಂತ್ಯವಾಗಿತ್ತು. ಆದಾದ ಬಳಿಕ ಇದ್ದಕ್ಕಿದ್ದಂತೆ ಕೊರೊನಾದ ಎರಡನೇ ಅಲೆ ಆರಂಭವಾಗಿದೆ.
ಮೇ, 7ರಂದು ಕೊರೊನಾದ ಎರಡನೇ ಅಲೆಯಲ್ಲಿ ಕೊವಿಡ್ ಪ್ರಕರಣಗಳು ನಾಲ್ಕು ಲಕ್ಷದ ಗಡಿ ದಾಟಿವೆ. ಆದರೇ, ಈಗ ಕೊರೊನಾದ ಎರಡನೇ ಅಲೆ ಯಾವಾಗ ಅಂತ್ಯವಾಗುತ್ತೆ ಎನ್ನುವ ಬಗ್ಗೆ ದೇಶದ ಅಂಕಿಅಂಶಗಳ ತಜ್ಞರು, ವಿಜ್ಞಾನಿಗಳು ತಮ್ಮದೇ ಆದ ಅಧ್ಯಯನ ನಡೆಸಿದ್ದಾರೆ. ಈ ಹಿಂದೆ ಅಂಕಿಅಂಶಗಳ ತಜ್ಞರು ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೊನಾದ ಎರಡನೇ ಅಲೆ ಉತ್ತುಂಗಕ್ಕೆ ಮುಟ್ಟಲಿವೆ ಎಂದು ಹೇಳಿದ್ದರು. ಅದು ನಿಜವಾಗಿದೆ. ಹೀಗಾಗಿ ಈಗ ಅಂಕಿಅಂಶಗಳ ತಜ್ಞರು ನುಡಿದಿರುವ ಭವಿಷ್ಯ ಕೂಡ ಕುತೂಹಲ ಕೆರಳಿಸಿದೆ.
ಈಗ ದೇಶದ ಅಂಕಿಅಂಶಗಳ ತಜ್ಞರು ಹಾಗೂ ವಿಜ್ಞಾನಿಗಳು ಹೇಳುವ ಪ್ರಕಾರ, ಜುಲೈ ಪ್ರಾರಂಭದ ವೇಳೆಗೆ ಭಾರತಕ್ಕೆ ಕೊರೊನಾದ ಎರಡನೇ ಅಲೆಯಿಂದ ಮುಕ್ತಿ ಸಿಗಲಿದೆ. ಅಂಕಿಅಂಶಗಳ ತಜ್ಞರು ಮ್ಯಾಥಮ್ಯಾಟಿಕಲ್ ಮಾಡೆಲ್ ಆಧಾರದಲ್ಲಿ ಜುಲೈ ಪ್ರಾರಂಭದ ವೇಳೆಗೆ ಭಾರತಕ್ಕೆ ಕೊರೊನಾದಿಂದ ಮುಕ್ತಿ ಸಿಗಲಿದೆ ಎಂದು ಅಂದಾಜಿಸಿದ್ದಾರೆ. ದೇಶದೆಲ್ಲೆಡೆ ಈಗ ಲಾಕ್ಡೌನ್ ಜಾರಿಯಲ್ಲಿದೆ. ಜಮ್ಮು ಕಾಶ್ಮೀರದಿಂದ ಹಿಡಿದು, ತಮಿಳುನಾಡಿನ ಕನ್ಯಾಕುಮಾರಿಯವರೆಗೂ ಲಾಕ್ಡೌನ್ ಚಾಲ್ತಿಯಲ್ಲಿದೆ. ಇದರಿಂದಾಗಿಯೂ ಕೂಡ ಈಗ ದೇಶದಲ್ಲಿ ಕೊರೊನಾ ಪ್ರಕರಣಗಳು ಕುಸಿತವಾಗುತ್ತಿವೆ.
ಜೂನ್ 2ರ ವೇಳೆಗೆ ನಿತ್ಯ ಪತ್ತೆಯಾಗುವ ಕೊರೊನಾ ಪ್ರಕರಣಗಳು ಒಂದು ಲಕ್ಷಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಅಂಕಿಅಂಶಗಳ ತಜ್ಞರು ಅಂದಾಜಿಸಿದ್ದಾರೆ . ಜುಲೈ 7ರ ವೇಳೆಗೆ ಹತ್ತು ಸಾವಿರಕ್ಕಿಂತ ಕಡಿಮೆ ಪ್ರಕರಣ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಐಐಟಿ ಕಾನ್ಪರ್ ಹಾಗೂ ಐಐಟಿ ಹೈದರಾಬಾದ್ನ ಅಂಕಿಅಂಶಗಳ ತಜ್ಞರು ಹೇಳಿದ್ದಾರೆ.
ಇನ್ನೂ ಬೆಂಗಳೂರಿನ ಐಐಎಸ್ಸಿ ತಜ್ಞರ ಪ್ರಕಾರ, ಮೇ, 26ರ ವೇಳೆಗೆ ದೇಶದಲ್ಲಿ ನಿತ್ಯ ಒಂದು ಲಕ್ಷಕ್ಕಿಂತ ಕಡಿಮೆ ಪ್ರಕರಣ ಪತ್ತೆಯಾಗುವ ಸಾಧ್ಯತೆ ಇದೆ. ಜೂನ್ ಪ್ರಾರಂಭದ ವೇಳೆಗೆ ಒಂದು ಸಾವಿರಕ್ಕಿಂತ ಕಡಿಮೆ ಸಾವು ಸಂಭವಿಸುವ ಸಾಧ್ಯತೆ ಇದೆ.ಬಹುತೇಕ ಎಲ್ಲ ಅಂಕಿಅಂಶಗಳ ತಜ್ಞರ ಪ್ರಕಾರ, ದೇಶದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಹಾಗೂ ಮಾಸ್ಕ್ ಬಳಕೆಯಿಂದ ಕೊರೊನಾ ಪ್ರಕರಣ ಕುಸಿತವಾಗಿವೆ ಎಂದು ಹೇಳಿದ್ದಾರೆ.
ಮಿಚಿಗನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಬರ್ಮರ್ ಮುಖರ್ಜಿ ಹೇಳುವ ಪ್ರಕಾರ, ಭಾರತದಲ್ಲಿ ಕಠಿಣ ನಿಯಮ ಇಲ್ಲದಿದ್ದರೇ, ನಿತ್ಯ ಐದು ಲಕ್ಷ ಹೊಸ ಕೊರೊನಾ ಪ್ರಕರಣ ಪತ್ತೆಯಾಗುತ್ತಿದ್ದವು. ಆದರೇ, ಲಾಕ್ಡೌನ್, ಮಾಸ್ಕ್ ಬಳಕೆ ಕಡ್ಡಾಯ ಸೇರಿದಂತೆ ಬೇರೆ ಬೇರೆ ನಿಯಮಗಳು ಜಾರಿಯಲ್ಲಿರುವುದರಿಂದ ಕೊರೊನಾ ಕೇಸ್ ಕುಸಿತವಾಗಿದೆ ಎಂದು ಪ್ರಾಧ್ಯಾಪಕಿ ತಿಳಿಸಿದ್ದಾರೆ.
ಇದನ್ನೂ ಓದಿ:
ಧಾರವಾಡದ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಜಿಲ್ಲೆಯಲ್ಲಿಯೇ ಆರಂಭ
Published On - 5:39 pm, Tue, 18 May 21