ಧಾರವಾಡದ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಜಿಲ್ಲೆಯಲ್ಲಿಯೇ ಆರಂಭ

ವರ್ಷಕ್ಕೆ 100 ರಿಂದ 200 ಮಿಲಿಯನ್ ಡೋಸ್ ಇಲ್ಲಿ ಸ್ಪುಟ್ನಿಕ್ ತಯಾರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಸ್ಪುಟ್ನಿಕ್ ಮೊದಲ ಡೋಸ್ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ಶಿಲ್ಪಾ ಮೆಡಿಕೇರ್​ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ್ ಭುತಾಡಾ ಹೇಳಿದ್ದಾರೆ.

ಧಾರವಾಡದ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಜಿಲ್ಲೆಯಲ್ಲಿಯೇ ಆರಂಭ
ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿ
Follow us
preethi shettigar
|

Updated on:May 18, 2021 | 3:13 PM

ಧಾರವಾಡ: ಇಡೀ ವಿಶ್ವವೇ ಇದೀಗ ಕೊರೊನಾ ವಿರುದ್ಧ ಹೋರಾಡುತ್ತಿದ್ದು, ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ. ಹೀಗಾಗಿ ಈಗ  ಲಸಿಕೆಗೆ ಭಾರೀ ಬೇಡಿಕೆ ಇದ್ದು, ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಉತ್ಪಾದಿಸಿ ನೀಡಲಾಗುತ್ತಿದೆ. ಆದರೆ ದೇಶದಲ್ಲಿ ಈಗ ಲಸಿಕೆ ಪ್ರಮಾಣ ಕಡಿಮೆಯಾಗಿದೆ. ಇದನ್ನು ಗಮನಿಸಿರುವ ಕೇಂದ್ರ ಸರಕಾರ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ದೇಶದಲ್ಲಿ ಉತ್ಪಾದಿಸಲು ಒಪ್ಪಿಗೆ ನೀಡಿದೆ.

ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಕಂಪನಿ ಆಮದು ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಇದೇ ಕಂಪನಿಗೆ ದೇಶದಲ್ಲಿಯೆ ಲಸಿಕೆಯನ್ನು ಉತ್ಪಾದಿಸುವ ಅನುಮತಿಯೂ ಸಿಕ್ಕಿದ್ದು, ಆ ಬಗ್ಗೆ ಒಪ್ಪಂದವು ಆಗಿದೆ. ಈ ಹಿನ್ನೆಲೆಯಲ್ಲಿ ದೇಶದ ಕೆಲವು ಕಾರ್ಖಾನೆಗಳಲ್ಲಿ ಸ್ಪುಟ್ನಿಕ್ ಲಸಿಕೆ ಉತ್ಪಾದನೆಗೆ ಡಾ. ರೆಡ್ಡೀಸ್ ಕಂಪನಿ ಸಿದ್ಧತೆ ನಡೆಸಿದೆ. ಅದರಲ್ಲಿ ಒಂದು ಕಂಪನಿ ಧಾರವಾಡದಲ್ಲಿ ಇದ್ದು, ಇಲ್ಲಿಯೂ ಕೂಡ ಇದೀಗ ಲಸಿಕಾ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನೆ: ರಷ್ಯಾದಲ್ಲಿ ಅಭಿವೃದ್ಧಿಪಡಿಸಲಾಗಿರುವ ಸ್ಪುಟ್ನಿಕ್-ವಿ ಲಸಿಕೆಗಳನ್ನು ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿಯು ಧಾರವಾಡದಲ್ಲಿ ಉತ್ಪಾದಿಸಲಿದೆ. ಈ ಅಂಗವಾಗಿ ಕಂಪನಿಯು ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಜೊತೆ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ರಾಯಚೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಕಂಪನಿಯು, ಧಾರವಾಡದಲ್ಲಿ ಈ ಲಸಿಕೆಯನ್ನು ಉತ್ಪಾದಿಸಲಿದೆ.

ಶಿಲ್ಪಾ ಮೆಡಿಕೇರ್ ಲಿಮಿಟೆಡ್​ನ ಅಂಗಸಂಸ್ಥೆಯಾಗಿರುವ ಶಿಲ್ಪಾ ಬಯೋಲಾಜಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯು, ಈ ಲಸಿಕೆಯನ್ನು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದಿಸಲಿದೆ. ಡಾ. ರೆಡ್ಡೀಸ್ ಕಂಪನಿಯು ಸ್ಪುಟ್ನಿಕ್ ಲಸಿಕೆ ತಯಾರಿಕೆಗೆ ಬೇಕಾಗಿರುವ ತಂತ್ರಜ್ಞಾನವನ್ನು ಶಿಲ್ಪಾ ಬಯೋಲಾಜಿಕಲ್ ಕಂಪನಿಗೆ ವರ್ಗಾವಣೆ ಮಾಡಲಿದೆ. ಕಂಪನಿಗಳ ನಡುವೆ ಈ ಬಗ್ಗೆ ಒಪ್ಪಂದವಾಗಿದ್ದು, ಲಸಿಕೆಯನ್ನು ಉತ್ಪಾದಿಸಿ ಕೊಡುವ ಹೊಣೆ ಶಿಲ್ಪಾ ಬಯೋಲಾಜಿಕಲ್ ಕಂಪನಿಯದ್ದು. ಆದರೆ ಲಸಿಕೆಯ ವಿತರಣೆ ಹಾಗೂ ಮಾರಾಟದ ಹೊಣೆ ಮಾತ್ರ ಡಾ. ರೆಡ್ಡೀಸ್ ಕಂಪನಿಯದ್ದಾಗಿರುತ್ತದೆ.

ಯಂತ್ರೋಪಕರಣಗಳ ಅಳವಡಿಕೆ ಕಾರ್ಯ ಶುರು: ಈ ಸ್ಪುಟ್ನಿಕ್ ಲಸಿಕೆ ತಯಾರಿಕೆಗೆ ಬೇಕಾಗಿರುವ ಯಂತ್ರೋಪಕರಣಗಳ ಅಳವಡಿಕೆ ಕಾರ್ಯ ಅದಾಗಲೇ ಶುರುವಾಗಿದೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದ ಈ ಕಂಪನಿಯಲ್ಲಿ ಲಸಿಕೆ ಉತ್ಪಾದನೆ ಆಗಲಿದೆ. ಈ ಬಗ್ಗೆ ಕಂಪನಿಯ ಮೂಲಗಳು ಮಾಹಿತಿ ನೀಡಿವೆ. ಅದಾಗಲೇ ಶಿಲ್ಪಾ ಮೆಡಿಕೇರ್​ನಲ್ಲಿ ಸುಸಜ್ಜಿತ ಯಂತ್ರೋಪಕರಣಗಳಿವೆ. ಅದರೊಂದಿಗೆ ಈ ಲಸಿಕೆಯ ಉತ್ಪಾದನೆಗೆ ಬೇಕಾಗಿರುವ ಮತ್ತಷ್ಟು ಯಂತ್ರೋಪಕರಣಗಳನ್ನು ಕೂಡ ಅಳವಡಿಸಬೇಕಾಗಿದೆ. ಹೀಗಾಗಿ ಆ ಕಾರ್ಯವು ಕೂಡ ಆರಂಭವಾಗಿದೆ. ಕಂಪನಿಗಳ ನಡುವೆ ಎಲ್ಲ ಒಪ್ಪಂದ ಪ್ರಕೃಯೆ ಮುಕ್ತಾಯವಾದ ಕೂಡಲೇ ಲಸಿಕೆಯ ಉತ್ಪಾದನೆ ಆರಂಭವಾಗಿದೆ.

ಸ್ಪುಟ್ನಿಕ್ ಲೈಟ್ ಲಸಿಕೆ ಕೂಡ ಇಲ್ಲಿಯೇ ಉತ್ಪಾದನೆ? ಸ್ಪುಟ್ನಿಕ್ ವಿ ಲಸಿಕೆಯ ಉತ್ಪಾದನೆಯ ಬಳಿಕ ಇದೇ ಹೆಸರಿನ ಮತ್ತೊಂದು ಲಸಿಕೆಯಾದ ಸ್ಪುಟ್ನಿಕ್ ಲೈಟ್ ಎನ್ನುವ ಕೂಡ ಇಲ್ಲಿಯೇ ಉತ್ಪಾದನೆಯಾಗುವ ಸಾಧ್ಯತೆ ಇದೆ. ಈ ಬಗ್ಗೆಯೂ ಪರಿಶೀಲನೆ ನಡೆದಿದೆ ಎನ್ನುವ ಬಗ್ಗೆ ಶಿಲ್ಪಾ ಮೆಡಿಕೇರ್ ಕಂಪನಿಯು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಈ ಸ್ಪುಟ್ನಿಕ್ ಲೈಟ್ ಕೊವಿಡ್-19 ವಿರುದ್ಧ ಹೋರಾಡಬಲ್ಲ ಒಂದೇ ಡೋಸ್ ಲಸಿಕೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಲಸಿಕೆಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇರುವುದರಿಂದ ಈ ಲಸಿಕೆ ಉತ್ಪಾದನೆ ಬಗ್ಗೆಯೂ ಕಂಪನಿಗಳು ಒಲವು ತೋರಿಸಿವೆ ಎನ್ನಲಾಗಿದೆ.

ಆರು ಕಡೆಗಳಲ್ಲಿ ಲಸಿಕೆಗಳ ಉತ್ಪಾದನೆ ಯಾವುದೇ ರೋಗಕ್ಕೆ ಮೊದಲಿಗೆ ಲಸಿಕೆ ಕಂಡು ಹಿಡಿದರೆ ಅದು ದೇಶದ ಗೌರವವನ್ನು ಹೆಚ್ಚಿಸುತ್ತದೆ. ಭಾರತದಲ್ಲಿ ಇದೀಗ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದೆ. ಇವೆರಡಕ್ಕಿಂತಲೂ ರಷ್ಯಾದ ಸ್ಪುಟ್ನಿಕ್ ಲಸಿಕೆ ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ. ಅದರೊಂದಿಗೆ ಈ ಲಸಿಕೆಯ ಅಡ್ಡ ಪಡಿಣಾಮಗಳು ಕೂಡ ಕಡಿಮೆ ಎನ್ನಲಾಗಿದೆ. ಹೀಗಾಗಿ ಈ ಲಸಿಕೆಯನ್ನು ಭಾರತದಲ್ಲಿ ವಿತರಿಸಲು ನಿರ್ಧರಿಲಾಗಿದೆ. ಇನ್ನು ಹೀಗೆ ಬೇರೆ ದೇಶದ ಲಸಿಕೆಯನ್ನು ಉತ್ಪಾದಿಸುವಾಗ ಸಾಕಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಲಸಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಬೇರೆಯವರಿಗೆ ಬಿಟ್ಟುಕೊಡುವಂತಿಲ್ಲ.

ಈಗಾಗಲೇ ಡಾ. ರೆಡ್ಡೀಸ್ ಕಂಪನಿ ಈ ಲಸಿಕೆಯ ಆಮದು ಒಪ್ಪಂದವನ್ನು ಮಾಡಿಕೊಂಡಿತ್ತು. ಇದೀಗ ಅದೇ ಕಂಪನಿ ಉತ್ಪಾದನೆಯ ಹಕ್ಕನ್ನು ಪಡೆದಿದೆ. ಈ ಕಂಪನಿ ದೇಶದ ಆರು ಕಡೆಗಳಲ್ಲಿ ವ್ಯಾಕ್ಸಿನ್ ಉತ್ಪಾದಿಸಲು ನಿರ್ಧರಿಸಿದೆ. ಮೇ 1 ರಂದು 1.5 ಲಕ್ಷ ಡೋಸ್ ಹಾಗೂ ಮೇ 14 ರಂದು 60 ಸಾವಿರ ಡೋಸ್​ಗಳು ಭಾರತಕ್ಕೆ ಬಂದಿವೆ. ಇದೀಗ ಧಾರವಾಡದಲ್ಲಿ ಸುಸಜ್ಜಿತವಾದ ಲಸಿಕೆ ಘಟಕವನ್ನು ಹೊಂದಿರುವ ಶಿಲ್ಪಾ ಮೆಡಿಕೇರ್ ಸಂಸ್ಥೆಗೆ ಈ ಸ್ಪುಟ್ನಿಕ್ ಲಸಿಕೆ ತಯಾರಿಸುವ ಅವಕಾಶ ಸಿಕ್ಕಿದೆ.

ವರ್ಷಕ್ಕೆ 100 ರಿಂದ 200 ಮಿಲಿಯನ್ ಡೋಸ್ ಇಲ್ಲಿ ತಯಾರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಸ್ಪುಟ್ನಿಕ್ ಮೊದಲ ಡೋಸ್ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ಶಿಲ್ಪಾ ಮೆಡಿಕೇರ್​ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ್ ಭುತಾಡಾ ಹೇಳಿದ್ದಾರೆ.

ಇನ್ನು ಹೀಗೆ ಬೇರೆ ದೇಶದ ಲಸಿಕೆಯನ್ನು ಉತ್ಪಾದಿಸುವುದು ಅಷ್ಟು ಸುಲಭವಾದ ಕೆಲಸವಲ್ಲ. ಇಲ್ಲಿ ಕಂಪನಿಗಳು ಅನೇಕ ವಿಚಾರಗಳ ಬಗ್ಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಇಲ್ಲಿ ಅನೇಕ ವಿಚಾರಗಳ ಬಗ್ಗೆ ರಹಸ್ಯವನ್ನು ಕಾಯ್ದುಕೊಳ್ಳುವೇ ದೊಡ್ಡ ವಿಚಾರ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸ್ಪುಟ್ನಿಕ್ ಉತ್ಪಾದನೆಯ ಹಕ್ಕು ಪಡೆದಿರುವ ಡಾ. ರೆಡ್ಡೀಸ್ ಕಂಪನಿ, ಇದೀಗ ಲಸಿಕೆ ಉತ್ಪಾದನೆಗೊಳ್ಳಲಿರುವ ಶಿಲ್ಪಾ ಮೆಡಿಕೇರ್​ನಲ್ಲಿನ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿ ಕೆಲಸ ಮಾಡುತ್ತಿರುವ ಸುಮಾರು 500 ಸಿಬ್ಬಂದಿಯ ಮಾಹಿತಿಯನ್ನು ಡಾ. ರೆಡ್ಡೀಸ್ ಕಂಪನಿ ಪಡೆದಿದೆ . ಇವರೆಲ್ಲಾ ಎಷ್ಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ? ಅವರ ಆರೋಗ್ಯದ ಸ್ಥಿತಿ ಏನು? ಎನ್ನುವ ಮಾಹಿತಿಯನ್ನು ಶಿಲ್ಪಾ ಮೆಡಿಕೇರ್ ಕಂಪನಿ ಡಾ. ರೆಡ್ಡೀಸ್ ಕಂಪನಿಗೆ ನೀಡಬೇಕಾಗುತ್ತದೆ. ಅಲ್ಲದೇ ಈ ವಿಚಾರವಾಗಿ ಕಂಪನಿಗಳು ಸಾಕಷ್ಟು ರಹಸ್ಯಕರ ಸಂಗತಿಯನ್ನು ಕಾಪಾಡಿಕೊಳ್ಳಬೇಕಾಗಿರುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆ ಅಂತಿಮವಾಗಿ ಮಾಹಿತಿ ಸಿಕ್ಕಬಳಿಕವಷ್ಟೇ ಲಸಿಕೆಯ ಉತ್ಪಾದನೆ ಆರಂಭವಾಗುತ್ತದೆ.

ಇದನ್ನೂ ಓದಿ:

ಲಸಿಕೆ ಪಡೆದವರಲ್ಲೂ ಕೊರೊನಾ ಸೋಂಕು ಹರಡಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Published On - 3:13 pm, Tue, 18 May 21