ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಸಂಭ್ಯಾವ್ಯ ಅಭ್ಯರ್ಥಿಗಳಿವರು

|

Updated on: Sep 16, 2024 | 11:48 AM

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎರಡು ದಿನಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮತ್ತು ದೆಹಲಿಯಲ್ಲಿ ಅವಧಿಪೂರ್ವ ಚುನಾವಣೆಗೆ ಒತ್ತಾಯಿಸುವುದಾಗಿ ಭಾನುವಾರ ಹೇಳಿದ್ದಾರೆ. ಜನರು ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡುವವರೆಗೂ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು. ಹಾಗಾದರೆ ಮುಂದಿನ ಚುನಾವಣೆ ವರೆಗೆ ದೆಹಲಿ ಮುಖ್ಯಮಂತ್ರಿಯಾಗಿ ಯಾರಿರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಸಂಭ್ಯಾವ್ಯ ಅಭ್ಯರ್ಥಿಗಳಿವರು
ಅತಿಶಿ
Image Credit source: Tribune.com
Follow us on

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal)​ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಎರಡು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಆದರೆ ವಿಧಾನಸಭೆ ವಿಸರ್ಜಿಸುವುದಿಲ್ಲ ಮತ್ತು ಶಾಸಕರು ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಸಾರ್ವಜನಿಕರು ಪ್ರಾಮಾಣಿಕತೆ ಪ್ರಮಾಣ ಪತ್ರ ನೀಡಿದಾಗ ಮಾತ್ರ ಸಿಎಂ ಕುರ್ಚಿ ಮೇಲೆ ಮತ್ತೆ ಕುಳಿತುಕೊಳ್ಳುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ವಿಧಾನಸಭೆ ವಿಸರ್ಜನೆ ಮಾಡುವುದಿಲ್ಲವೆಂದರೆ ದೆಹಲಿಯ ವಿಧಾನಸಭಾ ಚುನಾವಣೆವರೆಗೆ ಯಾರು ಮುಖ್ಯಮಂತ್ರಿಯಾಗಿರಲಿದ್ದಾರೆ ಎನ್ನುವ ಪ್ರಶ್ನೆ ಕಾಡುವುದು. ಮನೀಶ್​ ಸಿಸೋಡಿಯಾ ಕೂಡ ಮುಖ್ಯಮಂತ್ರಿಯಾಗುವುದಿಲ್ಲ, ದೆಹಲಿ ಮದ್ಯ ಹಗರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಮೊದಲು ಮನೀಶ್ ಸಿಸೋಡಿಯಾ ಮತ್ತು ನಂತರ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದವು.

ಲೋಕಸಭೆ ಚುನಾವಣೆಗೂ ಮುನ್ನ ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು. ನಂತರ ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ನ್ಯಾಯಾಲಯದಿಂದ ಜಾಮೀನು ಪಡೆದರು. ಈ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸೆಪ್ಟೆಂಬರ್ 13 ರಂದು ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.

ದೆಹಲಿಯ ಮುಖ್ಯಮಂತ್ರಿಯಾಗಬಹುದಾದ ಐದು ಅಭ್ಯರ್ಥಿಗಳಿವರು

ಅತಿಶಿ
ನೀತಿ ಸುಧಾರಣೆಗಳು ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಸದಾ ದನಿಯೆತ್ತುವ ಅತಿಶಿ ಮರ್ಲೆನಾ, ಕೇಜ್ರಿವಾಲ್ ಜೈಲು ಸೇರಿದ ಬಳಿಕ ಸರ್ಕಾರ ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಶಿಕ್ಷಣ, ಹಣಕಾಸು, ಯೋಜನೆ, ಪಿಡಬ್ಲ್ಯೂಡಿ, ವಿದ್ಯುತ್, ನೀರು ಮತ್ತು ಸಾರ್ವಜನಿಕ ಸಂಪರ್ಕಗಳಂತಹ ಸರ್ಕಾರದ 14 ಇಲಾಖೆಗಳ ಜವಾಬ್ದಾರಿಯನ್ನು ಹೊಂದಿದ್ದಾರೆ.

ಮತ್ತಷ್ಟು ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದೇಕೆ?

ಗೋಪಾಲ ರೈ
ಆಮ್ ಆದ್ಮಿ ಪಕ್ಷದ ಅತ್ಯಂತ ಅನುಭವಿ ನಾಯಕರಲ್ಲಿ ಒಬ್ಬರು, ಗೋಪಾಲ್ ರೈ ದೆಹಲಿ ಸರ್ಕಾರದಲ್ಲಿ ಪರಿಸರ, ಅರಣ್ಯ ಮತ್ತು ವನ್ಯಜೀವಿ ಇಲಾಖೆಯನ್ನು ಹೊಂದಿದ್ದಾರೆ. ಪ್ರಚಾರದ ಸಮಯದಲ್ಲಿ ಗೋಪಾಲ್ ರೈಗೆ ಒಮ್ಮೆ ಗುಂಡು ಹಾರಿಸಲಾಯಿತು, ಇದರಿಂದಾಗಿ ಅವರು ಭಾಗಶಃ ಪಾರ್ಶ್ವವಾಯುವಿಗೆ ಒಳಗಾದರು. ಗೋಪಾಲ್ ರೈ ಅವರಿಗೆ ಕಾರ್ಮಿಕ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ಸಾಕಷ್ಟು ಅನುಭವವಿದೆ.

ಕೈಲಾಶ್ ಗೆಹ್ಲೋಟ್
ದೆಹಲಿ ರಾಜಕೀಯದ ಪ್ರಮುಖ ಮುಖ. ಸಾರಿಗೆ ಸಚಿವರಾಗಿ ಕೆಲಸ ಮಾಡಿರುವುದು ದೆಹಲಿಯ ಸಂಚಾರದ ಸ್ವರೂಪವನ್ನೇ ಬದಲಿಸಿದೆ. ಗೆಹ್ಲೋಟ್ ಅವರು ಬಸ್ ಸೇವೆಗಳ ವಿಸ್ತರಣೆ, ಎಲೆಕ್ಟ್ರಿಕ್ ಬಸ್‌ಗಳ ಪರಿಚಯ ಮತ್ತು ರಸ್ತೆ ಸುರಕ್ಷತೆಯ ವಿಷಯಗಳ ಬಗ್ಗೆ ಅತ್ಯುತ್ತಮ ಕೆಲಸ ಮಾಡಿದ್ದಾರೆ. 50 ವರ್ಷದ ಕೈಲಾಶ್ ಗೆಹ್ಲೋಟ್ ಕ್ಯಾಬಿನೆಟ್ ಸಚಿವರಾಗಿ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ. ನಿಸ್ಸಂಶಯವಾಗಿ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರು.

ಸೌರಭ್ ಭಾರದ್ವಾಜ್
ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಜೈಲಿಗೆ ಹೋದ ನಂತರ, ಸೌರಭ್ ಭಾರದ್ವಾಜ್ ಮುಂದೆ ಬಂದು ಸರ್ಕಾರ ಮತ್ತು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸೌರಭ್ ಭಾರದ್ವಾಜ್ ಅತಿಶಿ ಜೊತೆಗೆ ದೆಹಲಿ ಸರ್ಕಾರದ ಪ್ರಮುಖ ಮುಖವಾಗಿದ್ದಾರೆ.
ಕೇಜ್ರಿವಾಲ್ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ಅವರು ಆರೋಗ್ಯ ಸಚಿವರಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸತ್ಯೇಂದ್ರ ಜೈನ್ ಜೈಲಿಗೆ ಹೋದ ನಂತರ ಸೌರಭ್ ಭಾರದ್ವಾಜ್ ಅವರು ಆರೋಗ್ಯ ಸಚಿವರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಸೌರಭ್ ಭಾರದ್ವಾಜ್ ಸಂಸ್ಥೆ ಮತ್ತು ಸರ್ಕಾರವನ್ನು ನಡೆಸುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದ ರೀತಿ, ಇದು ಅವರನ್ನು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇರಿಸಿದೆ.

ಸುನಿತಾ ಕೇಜ್ರಿವಾಲ್
ಕೇಜ್ರಿವಾಲ್ ಪತ್ನಿ ಸುನಿತಾ, ಕೇಜ್ರಿವಾಲ್ ಜೈಲಿಗೆ ಹೋದ ನಂತರ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡರು. ಸುನೀತಾ ಕೇಜ್ರಿವಾಲ್ ಹರಿಯಾಣ ಮತ್ತು ಗುಜರಾತ್‌ನಲ್ಲೂ ಸಕ್ರಿಯರಾಗಿದ್ದಾರೆ. ಅವರು ಪತ್ರಿಕಾಗೋಷ್ಠಿಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಾರೆ. ಕೇಜ್ರಿವಾಲ್ ಅವರ ಸಂದೇಶಗಳನ್ನು ಸಾರ್ವಜನಿಕರ ಮುಂದೆ ಇಡುತ್ತಾರೆ.ಮಾಜಿ ಕಂದಾಯ ಅಧಿಕಾರಿಯಾಗಿರುವ ಸುನೀತಾ ಕೇಜ್ರಿವಾಲ್ ಅವರು ಆಡಳಿತಾತ್ಮಕ ವಿಷಯಗಳನ್ನು ನಿರ್ವಹಿಸುವಲ್ಲಿ ಅನುಭವ ಹೊಂದಿದ್ದಾರೆ. ಆದರೆ ಅವರಿಗೆ ರಾಜಕೀಯದಲ್ಲಿ ಅನುಭವ ಕಡಿಮೆ.
ಫೆಬ್ರವರಿ 2025 ರಲ್ಲಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆಮ್ ಆದ್ಮಿ ಪಕ್ಷ ವಿಧಾನಸಭೆ ವಿಸರ್ಜಿಸದಿದ್ದರೂ, ನವೆಂಬರ್‌ನಲ್ಲಿ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಸುಲಭವಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Published On - 11:46 am, Mon, 16 September 24