ಜಿ7 ಶೃಂಗಸಭೆಯಲ್ಲಿ ಜಾಗತಿಕ ದಕ್ಷಿಣ ರಾಷ್ಟ್ರಗಳ ಕಾಳಜಿ ಬಗ್ಗೆ ಮಾತನಾಡುವೆ: ನರೇಂದ್ರ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: May 19, 2023 | 6:38 PM

ಭಾರತವು ಮಧ್ಯವರ್ತಿ ಪಾತ್ರವನ್ನು ವಹಿಸಬಹುದೇ ಎಂಬ ಪ್ರಶ್ನೆಗೆ, ಉಕ್ರೇನ್ ಸಂಘರ್ಷದ ಬಗ್ಗೆ ತಮ್ಮ ದೇಶದ ನಿಲುವು ಸ್ಪಷ್ಟ ಮತ್ತು ಅಚಲವಾಗಿದೆ ಎಂದು ಮೋದಿ ಹೇಳಿದ್ದಾರೆ.

ಜಿ7 ಶೃಂಗಸಭೆಯಲ್ಲಿ ಜಾಗತಿಕ ದಕ್ಷಿಣ ರಾಷ್ಟ್ರಗಳ ಕಾಳಜಿ ಬಗ್ಗೆ ಮಾತನಾಡುವೆ: ನರೇಂದ್ರ ಮೋದಿ
ಜಪಾನ್​​ನಲ್ಲಿ ನರೇಂದ್ರ ಮೋದಿ
Follow us on

ಹಿರೋಷಿಮಾ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಿರೋಷಿಮಾದಲ್ಲಿ (Hiroshima) ನಡೆಯುವ ಜಿ7 ಶೃಂಗಸಭೆಯಲ್ಲಿ (G-7 Summit) ಜಾಗತಿಕ ದಕ್ಷಿಣದ ರಾಷ್ಟ್ರಗಳ ಧ್ವನಿ ಮತ್ತು ಕಾಳಜಿ ಬಗ್ಗೆ ಮಾತನಾಡುವುದಾಗಿ ಹೇಳಿದ್ದಾರೆ. ಶುಕ್ರವಾರ ಸಂಜೆ ಜಪಾನ್‌ಗೆ ಹೊರಡುವ ಮುನ್ನ ನವದೆಹಲಿಯ ಪ್ರಧಾನ ಮಂತ್ರಿ ಕಚೇರಿಯಲ್ಲಿ ನಿಕ್ಕಿ ಏಷ್ಯಾ ಜತೆ ಮಾತನಾಡಿದ ಮೋದಿ ಇಂಧನ, ಡಿಜಿಟಲ್ ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿಯಂತಹ ಕ್ಷೇತ್ರಗಳಲ್ಲಿನ ಜಾಗತಿಕ ಬದಲಾವಣೆಗಳು ಮತ್ತು ಸವಾಲುಗಳನ್ನು ಚರ್ಚಿಸಲು ಎದುರು ನೋಡುತ್ತಿರುವುದಾಗಿ ಹೇಳಿದರು. ಈ ಸವಾಲುಗಳನ್ನು ಎದುರಿಸುವಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಪಾತ್ರವನ್ನು ನಾನು ಒತ್ತಿಹೇಳುತ್ತೇನೆ. ಭಾರತದ ಅನುಭವವು ಸಭೆಯಲ್ಲಿ ಬಲವಾಗಿ ಪ್ರತಿಧ್ವನಿಸುತ್ತದೆ ಎಂದು ಹೇಳಿದರು.

G-7 ಸದಸ್ಯರಲ್ಲದ ಭಾರತವನ್ನು ಆತಿಥೇಯ ಮತ್ತು ಜಪಾನಿನ ಪ್ರಧಾನ ಮಂತ್ರಿ ಫುಮಿಯೊ ಕಿಶಿದಾ ಅವರು ಆಹ್ವಾನಿಸಿದ್ದಾರೆ. ಜಪಾನ್ ಮತ್ತು ಭಾರತದ ಹಂಚಿಕೆಯ ಮೌಲ್ಯಗಳಾದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ನಿಯಮಗಳು ಸ್ವಾಭಾವಿಕವಾಗಿ ಅವರನ್ನು ಹತ್ತಿರಕ್ಕೆ ತಂದಿವೆ ಎಂದು ಮೋದಿ ಹೇಳಿದರು.

ಈ ಆಸಕ್ತಿಗಳ ಹೊರತಾಗಿಯೂ, ಹಿರೋಷಿಮಾದಲ್ಲಿ ಘರ್ಷಣೆಯ ಸಂಭಾವ್ಯ ಅಂಶಗಳೂ ಇವೆ. ಉಕ್ರೇನ್‌ನ ಮೇಲಿನ ಆಕ್ರಮಣಕ್ಕಾಗಿ ದೀರ್ಘಕಾಲದ ಮಿಲಿಟರಿ ಪಾಲುದಾರ ರಷ್ಯಾವನ್ನು ಭಾರತ ಸ್ಪಷ್ಟವಾಗಿ ಖಂಡಿಸಿಲ್ಲ. ಮೋದಿ ಪದೇ ಪದೇ ಶಾಂತಿಗಾಗಿ ಕರೆ ನೀಡುತ್ತಿರುವಾಗ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಂದೆಯೇ ಇಂದಿನ ಯುಗ ಯುದ್ಧದ ಯುಗವಲ್ಲ ಎಂದು ಹೇಳಿದ್ದರೂ ಭಾರತವು ರಷ್ಯಾದೊಂದಿಗೆ ಚುರುಕಾದ ವ್ಯವಹಾರವನ್ನು ಮುಂದುವರೆಸಿದೆ.

ಭಾರತವು ಮಧ್ಯವರ್ತಿ ಪಾತ್ರವನ್ನು ವಹಿಸಬಹುದೇ ಎಂಬ ಪ್ರಶ್ನೆಗೆ, ಉಕ್ರೇನ್ ಸಂಘರ್ಷದ ಬಗ್ಗೆ ತಮ್ಮ ದೇಶದ ನಿಲುವು ಸ್ಪಷ್ಟ ಮತ್ತು ಅಚಲವಾಗಿದೆ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: PM Modi Japan Visit: G7 ಶೃಂಗಸಭೆಯಲ್ಲಿ ಭಾಗವಹಿಸಲು ಹಿರೋಷಿಮಾ ತಲುಪಿದ ಪ್ರಧಾನಿ ಮೋದಿ

ಭಾರತವು ಶಾಂತಿಯನ್ನೇ ಬಯಸುತ್ತದೆ ಮತ್ತು ಇದೇ ನಿಲುವು ಮುಂದುವರಿಸುತ್ತದೆ. ವಿಶೇಷವಾಗಿ ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬೆಲೆ ಏರಿಕೆಯ ಸಂದರ್ಭದಲ್ಲಿ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಸವಾಲುಗಳನ್ನು ಎದುರಿಸುವವರಿಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ನಾವು ರಷ್ಯಾ ಮತ್ತು ಉಕ್ರೇನ್ ಎರಡರೊಂದಿಗೂ ಸಂವಹನವನ್ನು ನಿರ್ವಹಿಸುತ್ತೇವೆ. ಸಹಕಾರ ಮತ್ತು ಸಹಯೋಗವು ನಮ್ಮ ಕಾಲವನ್ನು ವ್ಯಾಖ್ಯಾನಿಸಬೇಕು, ಸಂಘರ್ಷವಲ್ಲ ಎಂದಿದ್ದಾರೆ ಮೋದಿ.

ಮುಂದಿನ ತಿಂಗಳು, ಮೋದಿ ಅವರು ಪ್ರಮುಖ ಕಾರ್ಯತಂತ್ರದ ಪಾಲುದಾರ ಎಂದು ಕರೆದ ಯುಎಸ್‌ಗೆ ಪ್ರಯಾಣಿಸಲಿದ್ದಾರೆ.

ಭಾರತವು ಚೀನಾ ಮತ್ತು ರಷ್ಯಾ ನೇತೃತ್ವದ ಶಾಂಘೈ ಸಹಕಾರ ಸಂಘಟನೆಯ (SCO) ಸದಸ್ಯತ್ವವನ್ನು ಹೊಂದಿದೆ. ಭಾರತ ಎಂದಿಗೂ ಭದ್ರತಾ ಮೈತ್ರಿಗಳೊಂದಿಗೆ ಜತೆಯಾಗಿಲ್ಲ.ಬದಲಿಗೆ, ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ ಪ್ರಪಂಚದಾದ್ಯಂತ ವ್ಯಾಪಕ ಶ್ರೇಣಿಯ ಸ್ನೇಹಿತರು ಮತ್ತು ಸಮಾನ ಮನಸ್ಕ ಪಾಲುದಾರರೊಂದಿಗೆ ತೊಡಗಿಸಿಕೊಳ್ಳುತ್ತೇವೆ ಎಂದಿದ್ದಾರೆ ಮೋದಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Fri, 19 May 23