ದೆಹಲಿ: ಎಡಗೈಯಲ್ಲಿ ದಾನ ಮಾಡಿದ್ದು ಬಲಗೈಗೆ ಗೊತ್ತಾಗಬಾರದು ಎಂಬ ಮಾತಿದೆ. ಆದರೆ, ಕೈಯಲ್ಲಿ ತುಂಬಿ ತುಳುಕುವಷ್ಟು ಸಂಪತ್ತಿದ್ದರೂ ಸಹ ಇನ್ನೊಬ್ಬರಿಗೆ ಹತ್ತು ರೂಪಾಯಿ ಕೊಡಲೂ ಹಿಂದೆಮುಂದೆ ನೋಡುವವರೇ ಹೆಚ್ಚು. ಇಂತಹ ಕಾಲದಲ್ಲಿ ಇಲ್ಲೊಬ್ಬರು ದಿನಕ್ಕೆ 22 ಕೋಟಿ ರೂಗಳಂತೆ ವರ್ಷದಲ್ಲಿ ಬರೋಬ್ಬರಿ 7,904 ಕೋಟಿ ರುಪಾಯಿಗಳನ್ನು ದಾನ ಮಾಡಿದ್ದಾರೆ. ಅಂದಹಾಗೆ ಈ ಮಹಾದಾನಿ ಇರುವುದು ದುಬೈಯಲ್ಲೋ, ಸಿಂಗಾಪುರದಲ್ಲೋ ಅಲ್ಲ. ಬದಲಾಗಿ ಇವರು ನಮ್ಮ ದೇಶದಲ್ಲೇ ಇರುವ ಹೆಮ್ಮೆಯ ಭಾರತೀಯ ಎಂದರೆ ನೀವು ನಂಬಲೇಬೇಕು!
ವಿಪ್ರೋ ಸಂಸ್ಥೆಯ ಸ್ಥಾಪಕ ನಿರ್ದೇಶಕ ಅಜೀಂ ಪ್ರೇಮ್ಜೀ ಏಪ್ರಿಲ್ 2019 ರಿಂದ ಮಾರ್ಚ್ 31 2020ರ ಅವಧಿಯಲ್ಲಿ 7,904 ಕೋಟಿ ಹಣವನ್ನು ದಾನ ಮಾಡಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 22 ಕೋಟಿ ರೂಗಳನ್ನು ದಾನ ಮಾಡುವ ಮೂಲಕ 2020ನೇ ಹಣಕಾಸು ವರ್ಷದಲ್ಲಿ ದೇಶದ ಮಹಾದಾನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇದರಲ್ಲಿ ಬಹುತೇಕ ಹಣವನ್ನು ಭಾರತದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಿದ್ದು ಇವರ ಈ ಸಾಮಾಜಿಕ ಸೇವೆಯನ್ನು ಗುರುತಿಸಿ 2020ರ ಎಡಲ್ಗಿವ್ ಹುರನ್ ಇಂಡಿಯಾ ಫಿಲಾಂತ್ರಫಿ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ನೀಡಲಾಗಿದೆ.
ಅತ್ಯಧಿಕ ಆಸ್ತಿಯುಳ್ಳವರು ಅದನ್ನು ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸಬೇಕೆಂಬ ಸದುದ್ದೇಶದಿಂದ ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಆರಂಭಿಸಿದ ಅಭಿಯಾನಕ್ಕೆ ಕೈ ಜೋಡಿಸಿದ ಮೊದಲ ಭಾರತೀಯ ಅಜೀಂ ಪ್ರೇಮ್ಜೀ ಆಗಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ದಾನ ಮಾಡಿದ ಅಮೇರಿಕ ದೇಶದ ಹೊರತಾದ ಉದ್ಯಮಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಉದಾತ್ತ ಮನಸು; ಉದಾತ್ತ ಧ್ಯೇಯ..
ತಂದೆಯ ದಾನದ ಕುರಿತು ಅತ್ಯಂತ ಸಹಜವಾಗಿ ಪ್ರತಿಕ್ರಿಯಿಸಿರುವ ಪುತ್ರ ರಿಶದ್ ಪ್ರೇಮ್ಜೀ ನನ್ನ ತಂದೆ ಯಾವಾಗಲೂ ಹೇಳುವಂತೆ ನಾವು ಎಷ್ಟೇ ಗಳಿಸಿದರೂ ಆ ಸಂಪತ್ತಿನ ಒಡೆಯರಾಗುವುದಿಲ್ಲ. ಬದಲಾಗಿ ಅದನ್ನು ಸಮಾಜ ಸೇವೆಗಾಗಿ, ನಮ್ಮ ಸುತ್ತಮತ್ತಲಿನವರ ಏಳ್ಗೆಗಾಗಿ ಬಳಸುವ ಜವಾಬ್ದಾರಿಯನ್ನು ಹೊಂದಿರುವವರಾಗಿರುತ್ತೇವೆ. ಆದ್ದರಿಂದ ನಾವು ನೀಡಿದ ಹಣ ನಮಗೆ ಸೇರಿದ್ದಲ್ಲ, ನಮ್ಮ ವಿಪ್ರೋ ಸಂಸ್ಥೆಯ ಧ್ಯೇಯವೂ ಇದೇ ಆಗಿದೆ ಎಂದಿದ್ದಾರೆ.
ಅಜೀಂ ಪ್ರೇಮ್ಜೀ ನಂತರ ಎರಡು ಮತ್ತು ಮೂರನೇ ಸ್ಥಾನದಲ್ಲಿ ಕ್ರಮವಾಗಿ ಎಚ್ಸಿಎಲ್ ಸಮೂಹದ ಶಿವ ನಾಡಾರ್ (795 ಕೋಟಿ), ರಿಲಯನ್ಸ್ ಸಮೂಹದ ಮುಖೇಶ್ ಅಂಬಾನಿ (458 ಕೋಟಿ) ಇದ್ದಾರೆ.
My father has always believed that he was a trustee of his wealth and never it’s owner. Being part of the communities in which we live and work is also a core part of Wipro. pic.twitter.com/TiDL58S23M
— Rishad Premji (@RishadPremji) November 11, 2020