ಇಂದೋರ್: ವಿಶ್ವಾದ್ಯಂತ ಕೊರೊನಾ ಜೊತೆಗೆ ರೂಪಾಂತರಿ ಸೋಂಕು ಕೂಡ ಹೆಚ್ಚಾಗುತ್ತಿರುವುದರಿಂದ ಕೊವಿಡ್ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಲಸಿಕಾ ಅಭಿಯಾನ ಭರದಿಂದ ಸಾಗುತ್ತಿದೆ. ಭಾರತದಲ್ಲಿ ಬಹುಪಾಲು ಜನರಿಗೆ ಈಗಾಗಲೇ ಎರಡು ಡೋಸ್ ಕೊವಿಡ್ ಲಸಿಕೆ ವಿತರಿಸಲಾಗಿದೆ. ಈಗಾಗಲೇ ಲಸಿಕೆ ಹಾಕಿಸಿಕೊಂಡವರಿಗೂ ಮತ್ತೆ ಕೊರೊನಾ ಪಾಸಿಟಿವ್ ದೃಢಪಡುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಲಸಿಕೆ ಹಾಕಿಸಿಕೊಂಡವರಿಗೂ ಕೊರೊನಾ ಸೋಂಕು ತಗುಲುತ್ತಿರುವುದರಿಂದ ಈಗಾಗಲೇ ಕೆಲವು ರಾಜ್ಯಗಳಲ್ಲಿ ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಲಾಗುತ್ತಿದೆ. ಇದೀಗ ನಾಲ್ಕು ಬಾರಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ಮಹಿಳೆಯೊಬ್ಬರಿಗೆ ಇಂದೋರ್ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ದುಬೈಗೆ ತೆರಳುವ ವಿಮಾನ ಹತ್ತದಂತೆ ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
44 ವರ್ಷದ ದುಬೈ ನಿವಾಸಿ ಕೊವಿಡ್-19 ಎರಡು ಬೇರೆ ಬೇರೆ ಲಸಿಕೆಗಳ ನಾಲ್ಕು ಡೋಸ್ ತೆಗೆದುಕೊಂಡಿದ್ದರು. ಮಹಿಳೆ 12 ದಿನಗಳ ಹಿಂದೆ ಮಧ್ಯಪ್ರದೇಶದ ಇಂದೋರ್ ಬಳಿಯ ಮೊವ್ ಪಟ್ಟಣಕ್ಕೆ ಹತ್ತಿರದ ಸಂಬಂಧಿಯೊಬ್ಬರ ಮದುವೆಗೆ ದುಬೈನಿಂದ ಆಗಮಿಸಿದ್ದರು. ವಿವಿಧ ದೇಶಗಳಲ್ಲಿ ಈಗಾಗಲೇ ನಾಲ್ಕು ಬಾರಿ ಲಸಿಕೆಯನ್ನು ಪಡೆದ ಸುಮಾರು 44 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಇಂದೋರ್ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿದಾಗ ಅವರಿಗೆ COVID-19 ಸೋಂಕು ತಗುಲಿರುವುದು ದೃಢಪಟ್ಟಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಗೆ ಯಾವುದೇ ರೋಗ ಲಕ್ಷಣಗಳಿರಲಿಲ್ಲ. ವಿಚಿತ್ರವೆಂದರೆ ವಿಮಾನ ಹತ್ತುವ ಒಂದು ದಿನದ ಮೊದಲು ಆಕೆ ಕೊವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಳು. ಅದರ ವರದಿಯಲ್ಲಿ ಆಕೆಗೆ ಕೊರೊನಾ ನೆಗೆಟಿವ್ ಎಂದು ದಾಖಲಾಗಿತ್ತು.
Madhya Pradesh | A woman of around 30 years of age, who has already been vaccinated 4 times in different countries, tested #COVID19 positive at the airport & was admitted to a hospital. She was asymptomatic & tested negative a day before: Indore CMHO Dr Bhure Singh Setia (29.12) pic.twitter.com/xpfs9bLgbp
— ANI (@ANI) December 30, 2021
ಜನವರಿ ಮತ್ತು ಆಗಸ್ಟ್ ನಡುವೆ ಮಹಿಳೆ 4 ಡೋಸ್ ಸಿನೋಫಾರ್ಮ್ ಮತ್ತು ಫೈಜರ್ ಲಸಿಕೆಗಳನ್ನು ಪಡೆದಿದ್ದರು. ಸದ್ಯಕ್ಕೆ ಮಹಿಳೆ ಕೊವಿಡ್ ರೋಗದ ಲಕ್ಷಣರಹಿತಳಾಗಿದ್ದಾರೆ. ಆದರೆ, ನಾಲ್ಕು ದಿನಗಳ ಹಿಂದೆ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಬಗ್ಗೆ ವಿಮಾನ ನಿಲ್ದಾಣದ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಾಯಿತು. ಆ ವರದಿಯಲ್ಲಿ ಕೊವಿಡ್ ಪಾಸಿಟಿವ್ ಬಂದಿದ್ದರಿಂದ ಆಕೆಯನ್ನು ವಿಮಾನ ಹತ್ತದಂತೆ ತಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು.
ಇದನ್ನೂ ಓದಿ: ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್, ಸಮೀಪಿಸುತ್ತಿರುವ ಚುನಾವಣೆ; ಇಂದು ಮಂತ್ರಿಮಂಡಲದ ಸಭೆ ಕರೆದ ಪ್ರಧಾನಿ ಮೋದಿ
ಒಮಿಕ್ರಾನ್ ಸೋಂಕಿನ ಹೆಚ್ಚಳ; ಪ್ರಧಾನಿ ನರೇಂದ್ರ ಮೋದಿ ಯುಎಇ, ಕುವೈತ್ ಪ್ರವಾಸ ಮುಂದೂಡಿಕೆ