ಜಮ್ಮು ಮತ್ತು ಕಾಶ್ಮೀರದ ಸಿಆರ್‌ಪಿಎಫ್ ಶಿಬಿರದೊಳಗೆ ಬಾಂಬ್ ಎಸೆದ ಬುರ್ಖಾಧಾರಿ ಮಹಿಳೆ; ಕೃತ್ಯ ಕ್ಯಾಮೆರಾದಲ್ಲಿ ಸೆರೆ

| Updated By: ರಶ್ಮಿ ಕಲ್ಲಕಟ್ಟ

Updated on: Mar 30, 2022 | 2:15 PM

ಭದ್ರತಾ ಶಿಬಿರದ ಹೊರಗೆ ಬಾಂಬ್ ಬಿದ್ದಿದ್ದು ಯಾವುದೇ ರೀತಿಯ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ದಾಳಿಯ ನಂತರ ಪ್ರದೇಶವನ್ನು ತಕ್ಷಣವೇ ಸುತ್ತುವರಿಯಲಾಯಿತು.

ಜಮ್ಮು ಮತ್ತು ಕಾಶ್ಮೀರದ ಸಿಆರ್‌ಪಿಎಫ್ ಶಿಬಿರದೊಳಗೆ ಬಾಂಬ್ ಎಸೆದ ಬುರ್ಖಾಧಾರಿ ಮಹಿಳೆ; ಕೃತ್ಯ ಕ್ಯಾಮೆರಾದಲ್ಲಿ ಸೆರೆ
ಬಾಂಬ್ ಬಿಸಾಡುತ್ತಿರುವ ಬುರ್ಖಾಧಾರಿ ಮಹಿಳೆ
Follow us on

ಸೋಪೋರ್: ಜಮ್ಮು ಮತ್ತು ಕಾಶ್ಮೀರದ  (Jammu Kashmir) ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪಟ್ಟಣದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF camp) ಶಿಬಿರದ ಮೇಲೆ ನಿನ್ನೆ ಸಂಜೆ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಬಾಂಬ್ (Bomb) ಎಸೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಂಬ್ ಎಸೆದು ಆಕೆ ಅಲ್ಲಿಂದ ಓಡಿ ಹೋಗುತ್ತಿರುವುದು ಕಾಣುತ್ತದೆ. ಭದ್ರತಾ ಶಿಬಿರದ ಹೊರಗೆ ಬಾಂಬ್ ಬಿದ್ದಿದ್ದು ಯಾವುದೇ ರೀತಿಯ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ದಾಳಿಯ ನಂತರ ಪ್ರದೇಶವನ್ನು ತಕ್ಷಣವೇ ಸುತ್ತುವರಿಯಲಾಯಿತು. ಮಹಿಳೆಯನ್ನು ಗುರುತಿಸಲಾಗಿದ್ದು, ಆಕೆಯ ಪತ್ತೆಗೆ ಭಾರೀ ಶೋಧ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಆಕೆಯನ್ನು ಬಂಧಿಸಲಾಗುವುದು ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಮಾಜಿ ಪತ್ರಕರ್ತ ಸೇರಿ ಇಬ್ಬರು ಉಗ್ರರ ಎನ್​ಕೌಂಟರ್
ಜಮ್ಮು ಕಾಶ್ಮೀರದ ಶ್ರೀನಗರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ (Encounter) ಮಾಜಿ ಪತ್ರಕರ್ತ ಸೇರಿದಂತೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಎನ್​ಕೌಂಟರ್​​ನಲ್ಲಿ ಹತ್ಯೆಗೀಡಾದ ಭಯೋತ್ಪಾದಕ ರಯೀಸ್ ಅಹ್ ಭಟ್ ಅನಂತನಾಗ್ ಜಿಲ್ಲೆಯಲ್ಲಿ ಆನ್‌ಲೈನ್ ನ್ಯೂಸ್ ಪೋರ್ಟಲ್ ‘ವ್ಯಾಲಿ ನ್ಯೂಸ್ ಸರ್ವೀಸ್’ ಅನ್ನು ನಡೆಸುತ್ತಿದ್ದ. ರಯೀಸ್ ಅಹ್ ಭಟ್ ಕಳೆದ ವರ್ಷ ಆಗಸ್ಟ್‌ನಲ್ಲಿ ಭಯೋತ್ಪಾದಕ ಶ್ರೇಣಿಗೆ ಸೇರಿದ್ದ. ಆತನನ್ನು ಜಮ್ಮು ಕಾಶ್ಮೀರದಪೊಲೀಸರ ಪಟ್ಟಿಯಲ್ಲಿ ‘ಸಿ’ ಎಂದು ವರ್ಗೀಕರಿಸಲಾಯಿತು. ಉಗ್ರವಾದಿ ಕೃತ್ಯಗಳಿಗೆ ಸಂಬಂಧಿಸಿದ ಅಪರಾಧಗಳಿಗಾಗಿ ಆತನ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೀಡಾದ ಎರಡನೇ ಭಯೋತ್ಪಾದಕನನ್ನು ಅನಂತನಾಗ್ ಜಿಲ್ಲೆಯ ಬಿಜ್ಬೆಹರಾ ನಿವಾಸಿ ಹಿಲಾಲ್ ಅಹ್ ರಾಹ್ ಎಂದು ಗುರುತಿಸಲಾಗಿದೆ. ಈತ ಸಿ ಕೆಟಗರಿ ಭಯೋತ್ಪಾದಕ ಎಂದು ಪೊಲೀಸರು ತಿಳಿಸಿದ್ದಾರೆ. ರಯೀಸ್ 2021ರ ಆಗಸ್ಟ್ 8ರಂದು ನಾಪತ್ತೆಯಾಗಿದ್ದ ಎಂದು ಹೇಳಲಾಗುತ್ತಿದ್ದರೆ, ಹಿಲಾಲ್ ಅಹ್ ರಾಹ್ ಅದಾಗಿ 2 ತಿಂಗಳ ನಂತರ ಅಂದರೆ ಅಕ್ಟೋಬರ್ 18ರಂದು ಕಾಣೆಯಾಗಿದ್ದರು.ಆ ಇಬ್ಬರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸೇರಿದಂತೆ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ವರ್ಷ ಪೊಲೀಸರು ನೀಡಿದ ಅಂಕಿ-ಅಂಶಗಳ ಪ್ರಕಾರ, ಭಾರತೀಯ ಭದ್ರತಾ ಪಡೆಗಳು ಇದುವರೆಗೆ 30 ವಿವಿಧ ಎನ್‌ಕೌಂಟರ್‌ಗಳಲ್ಲಿ 40ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿವೆ ಎಂಬುದು ಗಮನಾರ್ಹ. ಹಾಗೇ, 26 ಸಕ್ರಿಯ ಭಯೋತ್ಪಾದಕರು ಮತ್ತು 150 ಭಯೋತ್ಪಾದಕರ ಸಹಚರರನ್ನು ಸಹ ಬಂಧಿಸಲಾಗಿದೆ.

ಇದನ್ನೂ ಓದಿ: ಲಂಡನ್​ಗೆ ಹೊರಟಿದ್ದ ಪತ್ರಕರ್ತೆ ರಾಣಾ ಅಯೂಬ್​​​ಗೆ ಏರ್​ಪೋರ್ಟ್​​ನಲ್ಲಿ ತಡೆ; ಆ ಕ್ಷಣದಲ್ಲಿ ಬಂತು ಇ.ಡಿ.ಯಿಂದ ಸಮನ್ಸ್​

Published On - 2:15 pm, Wed, 30 March 22