ನವದೆಹಲಿ: ಉತ್ತರ ಪ್ರದೇಶದಲ್ಲಿ ಮುಂದಿನ ಮಾರ್ಚ್ ತಿಂಗಳಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ, ಎಲ್ಲ ಪಕ್ಷಗಳ ಕಣ್ಣು ಮಹಿಳಾ ಮತದಾರರ ಮೇಲೆ ಬಿದ್ದಿದೆ. ಉತ್ತರ ಪ್ರದೇಶದಲ್ಲಿ ಈಗ ಮಹಿಳಾ ಕೇಂದ್ರಿತ ರಾಜಕಾರಣ ನಡೆಯುತ್ತಿದೆ. ಹಾಗಾದರೆ, ಉತ್ತರ ಪ್ರದೇಶದ ಮಹಿಳೆಯರ ಆಯ್ಕೆಯ ಪಕ್ಷ ಯಾವುದು? ಮಹಿಳೆಯರು ಸ್ವತಂತ್ರವಾಗಿ ತೀರ್ಮಾನ ಕೈಗೊಂಡು ಮತ ಚಲಾಯಿಸುತ್ತಾರಾ? ಮಹಿಳಾ ಮತದಾರರ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು? ಎಂಬುದರ ವಿಶೇಷ ವರದಿ ಇಲ್ಲಿದೆ.
ಉತ್ತರ ಪ್ರದೇಶದ ಮಹಿಳೆಯರು 2022ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಚಲಾಯಿಸುತ್ತಾರೆ? ಇದು ಈಗ ಮಿಲಿಯನ್ ಡಾಲರ್ ಪ್ರಶ್ನೆ. ಏಕೆಂದರೆ ಉತ್ತರ ಪ್ರದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಈಗ ಮಹಿಳೆಯರನ್ನು ತಮ್ಮ ಪಕ್ಷದತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ಮಹಿಳಾ ಕೇಂದ್ರೀತ ರಾಜಕಾರಣವೇ ಈಗ ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲೂ ಶೇ.50ರಷ್ಟು ಮಹಿಳಾ ಮತದಾರರಿದ್ದಾರೆ. ಹೀಗಾಗಿ, ಮಹಿಳಾ ಮತದಾರರತ್ತ ಎಲ್ಲ ಪಕ್ಷಗಳು ವಿಶೇಷ ಗಮನ ನೀಡಿವೆ.
ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ, ಮಹಿಳಾ ಮತದಾರರತ್ತ ಹೆಚ್ಚಿನ ಒತ್ತು ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಶೇ.40ರಷ್ಟು ಸೀಟುಗಳನ್ನು ಮಹಿಳೆಯರಿಗೆ ನೀಡಲಿದೆ. ವಿದ್ಯಾರ್ಥಿನಿಯರಿಗೆ ಲ್ಯಾಪ್ಟಾಪ್, ಸ್ಕೂಟಿ, ಗ್ಯಾಸ್ ಸಿಲಿಂಡರ್ ನೀಡುವ ಭರವಸೆ ನೀಡಿದ್ದಾರೆ. ಮೇ ಲಡಕಿ ಹೂ, ಲಡಾ ಸಕ್ತಿ ಹೂ ಎಂಬ ಘೋಷಣೆ ಮೊಳಗಿಸಿದ್ದಾರೆ. ಅಂದರೆ, ನಾನು ಹುಡುಗಿ, ನಾನು ಹೋರಾಡಬಲ್ಲೆ ಎಂಬ ಘೋಷಣೆಯನ್ನು ಪ್ರಿಯಾಂಕಾ ಗಾಂಧಿ ಮೊಳಗಿಸಿದ್ದು, ಮಹಿಳೆಯರು, ಯುವತಿಯರನ್ನು ಪಕ್ಷದತ್ತ ಸೆಳೆಯುತ್ತಿದ್ದಾರೆ.
ಮಹಿಳೆಯಾಗಿ ಮಹಿಳಾ ಮತದಾರರನ್ನು ಸೆಳೆಯುವುದು ಸಹಜ. ಪ್ರಿಯಾಂಕಾ ಗಾಂಧಿ ಘೋಷಣೆಯ ಮೂಲಕ ಜಾತಿ, ಧರ್ಮವನ್ನು ಮೀರಿ ಮಹಿಳೆಯರನ್ನು ಕಾಂಗ್ರೆಸ್ ನತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಬುಂದೇಲಖಂಡ್ ಪ್ರಾಂತ್ಯದ ಜಾನ್ಸಿಯಲ್ಲಿ ಯುವತಿಯರ ಱಲಿ, ಮ್ಯಾರಥಾನ್ ಆಯೋಜಿಸಿತ್ತು. ಇವೆಲ್ಲವೂ ಯುವತಿಯರು, ಮಹಿಳೆಯರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಕಾರ್ಯತಂತ್ರದ ಭಾಗ.
ಆಡಳಿತರೂಢ ಬಿಜೆಪಿ ಪಕ್ಷವು ಕೂಡ ಮಹಿಳಾ ಮತದಾರರನ್ನ ಬಿಜೆಪಿಯತ್ತ ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ತನ್ನ ಕಾರ್ಯತಂತ್ರವನ್ನು ಚುರುಕುಗೊಳಿಸಿದೆ. ಪ್ರಧಾನಿ ಮೋದಿ ಇತ್ತೀಚೆಗೆ ಮಹಿಳಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳ ಬ್ಯಾಂಕ್ ಖಾತೆಗೆ ಒಂದು ಸಾವಿರ ಕೋಟಿ ರೂ. ಹಣ ವರ್ಗಾಯಿಸಿದ್ದಾರೆ. ಬಿಜೆಪಿ ಹಾಗೂ ಮೋದಿ ಕಾರ್ಯಕ್ರಮವು ತಮ್ಮ ಮಹಿಳಾ ಮತದಾರರನ್ನು ಸೆಳೆಯುವ ಕಾರ್ಯಕ್ರಮದ ಬಳಿಕ ಮಾಡುತ್ತಿರುವುದು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಬಿಜೆಪಿ ಪಕ್ಷವು ಉತ್ತರ ಪ್ರದೇಶದಲ್ಲಿ ಮೇಲ್ವರ್ಗದವರು, ಕೆಲ ಓಬಿಸಿ ಸಮುದಾಯಗಳ ಬೆಂಬಲ ಹೊಂದಿದೆ. ಉಜ್ವಲ ಯೋಜನೆ, ಉಚಿತ ಪಡಿತರ, ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ, ಪಿಎಂ ಅವಾಸ್ ಯೋಜನೆ, ಪ್ರಧಾನಮಂತ್ರಿ ಶ್ರಮ ಯೋಗಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಮಹಿಳೆಯರಿಗೆ ಬಿಜೆಪಿ ಆದ್ಯತೆ ನೀಡಿದೆ. ಈ ಯೋಜನೆಗಳ ಫಲಾನುಭವಿಗಳು ಮಹಿಳೆಯರು. ಹೀಗಾಗಿ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ.
ಸಮಾಜವಾದಿ ಪಕ್ಷ ಹಾಗೂ ಮಹಿಳಾ ವಿಭಾಗವು ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ. ಎಸ್ಪಿ ಪಕ್ಷವು ಅಭಿವೃದ್ದಿ ರಾಜಕಾರಣದ ಬಗ್ಗೆ ಮಾತನಾಡುತ್ತಿದೆ. ಎಸ್ಪಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಮಹಿಳೆಯರನ್ನು ಎಸ್ಪಿ ಪಕ್ಷದತ್ತ ಸೆಳೆಯುವ ಮುಂಚೂಣಿಯಲ್ಲಿದ್ದಾರೆ.
ಆದರೆ, ಬೇರೆ ಪಕ್ಷಗಳಂತೆ ಬಿಎಸ್ಪಿ ಪಕ್ಷವು ಮಹಿಳೆಯರನ್ನು ಸೆಳೆಯಲು ಯಾವುದೇ ಕಾರ್ಯಕ್ರಮ ಮಾಡಿಲ್ಲ. ಬಿಎಸ್ಪಿ ಪಕ್ಷವು ಮಹಿಳೆಯರಿಗಾಗಿ ಪ್ರತೇಕ ಕ್ಯಾಂಪೇನ್ ಮಾಡಿಲ್ಲ. ಉತ್ತರ ಪ್ರದೇಶದ ದಲಿತರು ತಮ್ಮನ್ನು ಕುಟುಂಬ ಎಂದು ಭಾವಿಸಿ ಮತ ಚಲಾಯಿಸುತ್ತಾರೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ನಂಬಿದ್ದಾರೆ.
2017ರಲ್ಲಿ ಉತ್ತರ ಪ್ರದೇಶದ ಮಹಿಳಾ ಮತದಾರರು, ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದರು. ಆದರೆ, ಮಹಿಳೆಯರು ಯಾವ ಪಕ್ಷಕ್ಕೆ ಹೆಚ್ಚು ಮತ ಚಲಾಯಿಸಿದ್ದರು? ಮಹಿಳಾ ನಾಯಕಿಯರನ್ನು ನೋಡಿ, ಅಂಥ ಪಕ್ಷಗಳಿಗೆ ಮಹಿಳೆಯರು ಮತ ನೀಡ್ತಾರಾ, ಇಲ್ಲವೇ ಮನೆಯ ಪುರುಷರು ಹೇಳಿದ ಪಕ್ಷಕ್ಕೆ ಮತ ನೀಡ್ತಾರಾ, ಬೇರೆ ಯಾವ ಅಂಶಗಳು ಮಹಿಳೆಯರು ಮತ ಚಲಾಯಿಸುವಾಗ ಪ್ರಭಾವ ಬೀರುತ್ತಾವೆ ಎಂಬುದು ಬಹಳ ಮುಖ್ಯವಾದ ಪ್ರಶ್ನೆ ಎಂದು ಪ್ರಯಾಗರಾಜ್ ನ ಜಿ.ಬಿ. ಪಂಥ್ ಸೋಷಿಯಲ್ ಸೈನ್ಸ್ ಇನ್ಸ್ ಟಿಟ್ಯೂಟ್ ಡೈರೆಕ್ಟರ್ ಬದರಿ ನಾರಾಯಣ್ ಹೇಳುತ್ತಾರೆ. ಜೊತೆಗೆ ಮಹಿಳೆಯರು, ಪುರುಷರಿಗಿಂತ ಭಿನ್ನವಾದ ಅಭಿಪ್ರಾಯ ಹೊಂದಿರಬಹುದು. ಆದರೆ, ಮತ ಚಲಾಯಿಸುವ ವಿಷಯ ಬಂದಾಗ, ಕುಟುಂಬದ ತೀರ್ಮಾನದಂತೆ ಮಹಿಳೆಯರು ಮತ ಚಲಾಯಿಸುತ್ತಾರೆ ಎಂದು ಫೀಲ್ಡ್ ಅಧ್ಯಯನದ ಬಳಿಕ ಬದರಿ ನಾರಾಯಣ್ ಹೇಳಿದ್ದಾರೆ. ಹೀಗಾಗಿ, ಸಾಂಪ್ರದಾಯಿಕ ಸಮಾಜದಲ್ಲಿ ಜಾತಿ, ಧರ್ಮ ಹಾಗೂ ಇತರ ಅಂಶಗಳು ಕೂಡ ಮತ ಚಲಾಯಿಸುವಾಗ ಪ್ರಾಮುಖ್ಯತೆ ಪಡೆಯುತ್ತಾವೆ ಎಂದು ಪ್ರೊಫೆಸರ್ ಬದರಿ ನಾರಾಯಣ್ ಹೇಳಿದ್ದಾರೆ.
ಇಂಥ ಸಾಮಾಜಿಕ-ಆರ್ಥಿಕ ಸ್ಥಿತಿಯಲ್ಲಿ ಮಹಿಳೆಯರು ಚುನಾವಣೆಗಳಲ್ಲಿ ಮತ ಚಲಾಯಿಸುವಾಗ ಸ್ವತಂತ್ರ ಅಭಿಪ್ರಾಯ ಹೊಂದಿ, ಅದರಂತೆ ಮತ ಚಲಾಯಿಸುವುದು ಕಷ್ಟ ಎಂದು ಬದರಿ ನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ, ಉತ್ತರ ಪ್ರದೇಶದಲ್ಲಿ ಮಹಿಳೆಯ ವೋಟ್ ಪಡೆಯಲು ಯತ್ನಿಸುವ ರಾಜಕೀಯ ಪಕ್ಷಗಳು ಆಯಾ ಕುಟುಂಬದ ನಂಬಿಕೆಯನ್ನು ಗಳಿಸಿಕೊಳ್ಳುವುದು ಮುಖ್ಯ. ಮಹಿಳೆಯರನ್ನು ಸ್ವತಂತ್ರ ವೋಟ್ ಬ್ಯಾಂಕ್ ಎಂದು ಭಾವಿಸಿಕೊಳ್ಳುವುದು ತಪ್ಪು . ಮಹಿಳೆಯರಿಗೆ ಏಕಕಾಲದಲ್ಲೇ ಅನೇಕ ಐಡೆಂಟಿಟಿಗಳು ಇರುತ್ತವೆ. ಕುಟುಂಬ, ಜಾತಿ, ಧರ್ಮದ ಐಡೆಂಟಿಟಿ ಇವೆ. ಈ ಎಲ್ಲ ಐಡೆಂಟಿಟಿಗಳು ಚುನಾವಣೆಗಳಲ್ಲಿ ಮತ ಚಲಾಯಿಸುವಾಗ ಪ್ರಭಾವ ಬೀರುತ್ತವೆ.
ಬುಂದೇಲ್ ಖಂಡ ಪ್ರಾಂತ್ಯದ ದಲಿತ ಮಹಿಳೆಯು ಲಕ್ನೋದ ಮೇಲ್ವರ್ಗದ ಮಹಿಳೆಗಿಂತ ಭಿನ್ನವಾದ ಅಭಿಪ್ರಾಯ ಹೊಂದಿದ್ದು, ಲಕ್ನೋ ಮಹಿಳೆಯಂತೆ ಮತ ಚಲಾಯಿಸಲ್ಲ. ಅದೇ ರೀತಿ ಉತ್ತರ ಪ್ರದೇಶದ ಪೂರ್ವಾಂಚಲದ ಮಹಿಳೆಯು ಪಶ್ಚಿಮ ಉತ್ತರ ಪ್ರದೇಶದ ಮಹಿಳೆಗಿಂತ ಭಿನ್ನವಾದ ಆಲೋಚನೆ ಹೊಂದಿ ಮತ ಚಲಾಯಿಸುತ್ತಾರೆ.
ಶಿಕ್ಷಣ ಸೌಲಭ್ಯ ಹೆಚ್ಚಾದಂತೆ, ರಾಜಕೀಯ ಜಾಗೃತಿ ಬೆಳೆದಂತೆ ಮಹಿಳೆಯರು ರಾಜಕೀಯ ರಂಗದಲ್ಲಿ ಧ್ವನಿ ಎತ್ತಲಾರಂಭಿಸಿದ್ದಾರೆ. ಹೀಗಾಗಿ ರಾಜಕೀಯ ಪಕ್ಷಗಳು ಹಾಗೂ ನಾಯಕರು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡುತ್ತಿವೆ. ಬಿಹಾರದಲ್ಲಿ ನಿತೀಶ್ ಕುಮಾರ್ ಶೇ.35ರಷ್ಟು ಸರ್ಕಾರಿ ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಟ್ಟಿದ್ದಾರೆ, ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮಹಿಳಾ ಕೇಂದ್ರೀತ ಕನ್ಯಾಶ್ರೀ ಯೋಜನೆ ಜಾರಿಗೆ ತಂದಿದ್ದಾರೆ. ಇದೇ ಹಾದಿಯಲ್ಲಿ ಈಗ ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ಕೂಡ ಹೆಜ್ಜೆ ಹಾಕಿದ್ದು, ಪಿಂಕ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಪಕ್ಷವು ತನ್ನ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಬಿಎಸ್ಪಿ ಪಕ್ಷ ದಲಿತ ರಾಜಕಾರಣದ ಮೂಲಕವೇ ಮಹಿಳೆಯರನ್ನು ಸೆಳೆದಿವೆ.
ಹೀಗಾಗಿ, ಮುಂದಿನ ವರ್ಷದ ಮಾರ್ಚ್, ಏಪ್ರಿಲ್ ವೇಳೆಗೆ ಉತ್ತರ ಪ್ರದೇಶದಲ್ಲಿ ಮಹಿಳಾ ಕೇಂದ್ರಿತ ರಾಜಕಾರಣದಲ್ಲಿ ಯಾವ ಪಕ್ಷಕ್ಕೆ ಯಶಸ್ಸು ಸಿಕ್ಕಿದೆ ಎಂದು ಗೊತ್ತಾಗುತ್ತದೆ ಎಂದು ಪ್ರೊಫೆಸರ್ ಬದರಿ ನಾರಾಯಣ್ ಹೇಳಿದ್ದಾರೆ.
ಇದನ್ನೂ ಓದಿ: Uttar Pradesh Election 2022: ಪ್ರಿಯಾಂಕಾ ಗಾಂಧಿಯವರ ಆಹ್ವಾನ ಮೇರೆಗೆ ಉತ್ತರ ಪ್ರದೇಶದಲ್ಲಿ ಮಹಿಳಾ ಮ್ಯಾರಥಾನ್