Flood Alert: ಮಹಾರಾಷ್ಟ್ರದ ರಾಧಾನಗರಿ ಜಲಾಶಯದಲ್ಲಿ ಅವಘಡ: ಕರ್ನಾಟಕಕ್ಕೆ ಪ್ರವಾಹದ ಅಪಾಯ
ಈ ಗೇಟ್ಗಳು ಚಾಲನೆಯಾಗಲು ಯಾವುದೇ ಎಲೆಕ್ಟ್ರಿಕ್ ಅಥವಾ ಮೆಕ್ಯಾನಿಕಲ್ ಶಕ್ತಿ ಬೇಕಿಲ್ಲ. ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಸಹ ಈ ಜಲಾಶಯ ನಿರ್ಮಾಣಕ್ಕಾಗಿ ಶ್ರಮಿಸಿದ್ದರು.
ಕೊಲ್ಹಾಪುರ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಭೋಗವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಹತ್ವದ ರಾಧಾನಗರಿ ಜಲಾಶಯದ ಗೇಟ್ ರಿಪೇರಿ ವೇಳೆ ಅವಘಡ ಸಂಬಂಧಿಸಿದ್ದು, ಜಲಾಶಯದಲ್ಲಿದ್ದ ಅಪಾರ ಪ್ರಮಾಣದ ನೀರು ತಾಂತ್ರಿಕ ದೋಷದಿಂದಾಗಿ ನದಿಗೆ ಹರಿದುಬರುತ್ತಿದೆ. ಜಲಾಶಯದ ಗೇಟ್ಗಳನ್ನು 18 ಅಡಿಗಳಷ್ಟು ಎತ್ತರಿಸಲು ಅಧಿಕಾರಿಗಳು ಮುಂದಾಗಿದ್ದಾಗ ಈ ಅವಘಡ ಸಂಬಂಧಿಸಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಬೆಳಿಗ್ಗೆ 9.30ಕ್ಕೆ ಗೇಟು ಏಕಾಏಕಿ ತೆರೆದುಕೊಂಡಿತು. ಅಪಾರ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿರುವುದರಿಂದ ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳ ದೂದಗಂಗಾ, ವೇದಗಂಗಾ ಹಾಗೂ ಕೃಷ್ಣಾ ನದಿ ತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ರಾಧಾನಗರಿ ಜಲಾಶಯದ ಸಾಮರ್ಥ್ಯ 8 ಟಿಎಂಸಿ ಅಡಿ. ಜಲಾಶಯದ ಆರು ಗೇಟ್ಗಳ ಪೈಕಿ ಒಂದು ಗೇಟ್ ಏಕಾಏಕಿ ತೆರೆದುಕೊಂಡಿದ್ದು, ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ತಂದೊಂಡ್ಡಿದೆ.
18ನೇ ಫೆಬ್ರುವರಿ 1907ರಂದು ನಿರ್ಮಿಸಿದ ಈ ಜಲಾಶಯವು ಸ್ವಯಂಚಾಲಿತ ಗೇಟ್ಗಳಿಂದ ವಿಶ್ವಪ್ರಸಿದ್ಧಿಯಾಗಿದೆ. ಈ ಗೇಟ್ಗಳು ಚಾಲನೆಯಾಗಲು ಯಾವುದೇ ಎಲೆಕ್ಟ್ರಿಕ್ ಅಥವಾ ಮೆಕ್ಯಾನಿಕಲ್ ಶಕ್ತಿ ಬೇಕಿಲ್ಲ. ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಸಹ ಈ ಜಲಾಶಯ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಕೊಲ್ಹಾಪುರ ಜಿಲ್ಲೆಯು ಕಬ್ಬು ಬೆಳೆಗೆ ಪ್ರಸಿದ್ಧವಾಗಲು ಈ ಜಲಾಶಯದ ಕೊಡುಗೆ ಬಹುದೊಡ್ಡದು. ಕೊಲ್ಹಾಪುರ ನಗರದ ಕುಡಿಯುವ ನೀರಿನ ಬೇಡಿಕೆಯನ್ನೂ ಈ ಜಲಾಶಯ ತಣಿಸುತ್ತದೆ.
ಜಲಾಶಯದ ಗೇಟ್ ಏಕಾಏಕಿ ತೆರೆದುಕೊಂಡ ಹಿನ್ನೆಲೆಯಲ್ಲಿ ಪಂಚಗಂಗಾ ನದಿಯಲ್ಲಿ ನೀರಿನ ಪ್ರಮಾಣ ನಿರಂತರ ಏರಿಕೆಯಾಗುತ್ತಿದೆ. ನದಿಯಲ್ಲಿ ಸುಮಾರು 5 ಅಡಿಗಳಷ್ಟು ನೀರು ಹೆಚ್ಚಾಗುವ ಸಾಧ್ಯತೆಯಿದೆ. ಜನರು ನದಿದಂಡೆಯಿಂದ ದೂರ ಇರಬೇಕು ಎಂದು ಕೊಲ್ಹಾಪುರ ಜಿಲ್ಲಾಡಳಿತ ಮನವಿ ಮಾಡಿದೆ. ಜಲಾಶಯದ ಗೇಟ್ ಅವಘಡದ ಕಾರಣಗಳ ಬಗ್ಗೆ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ.. ಪ್ರಾಥಮಿಕ ವರದಿಗಳ ಪ್ರಕಾರ ಶಾರ್ಟ್ ಸರ್ಕೀಟ್ನಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಜಲಾಶಯದಿಂದ 4,000 ಕ್ಯೂಸೆಕ್ಸ್ನಷ್ಟು ನೀರು ಹೊರಬರುತ್ತಿದೆ.
ಇದನ್ನೂ ಓದಿ: ಜೋಡೆತ್ತುಗಳಲ್ಲಿ ಒಂದು ಈಗ ಮೇಕೆದಾಟು ಕಡೆ ಹೊಂಟೈತೆ ಎಂದು ಡಿಕೆ ಶಿವಕುಮಾರ್ಗೆ ಲೇವಡಿ ಮಾಡಿದ ರೇವಣ್ಣ ಇದನ್ನೂ ಓದಿ: ಆಗ ಸುಮ್ಮನಿದ್ದ ಕಾಂಗ್ರೆಸ್ ನಾಯಕರಿಗೆ ಈಗೇಕೆ ಉತ್ಸಾಹ, ಮೇಕೆದಾಟು ಇವರಿಗೆ ವ್ಯಾಪಾರ: ಕಾಂಗ್ರೆಸ್, ಬಿಜೆಪಿ ವಿರುದ್ಧ ರೇವಣ್ಣ ವಾಗ್ದಾಳಿ