‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾದಲ್ಲಿ ಸಚಿವ ಸಂತೋಷ್ ಲಾಡ್ ನಟನೆ
‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾದ ಟೈಟಲ್ ಗಮನ ಸೆಳೆಯುತ್ತಿದೆ. ರಾಘವೇಂದ್ರ ರೆಡ್ಡಿ ನಿರ್ಮಾಣದ ಈ ಚಿತ್ರಕ್ಕೆ ಎಂ.ಎಲ್.ಪ್ರಸನ್ನ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಕೊನೇ ಹಂತದ ಶೂಟಿಂಗ್ ಬಾಕಿ ಇದೆ. ಸಚಿವ ಸಂತೋಷ್ ಲಾಡ್ ಅವರು ಈ ಸಿನಿಮಾದ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮೊದಲು ‘ಸ.ಹಿ.ಪ್ರ. ಶಾಲೆ’ ಸಿನಿಮಾ ಸದ್ದು ಮಾಡಿತ್ತು. ಆ ಚಿತ್ರದ ಶೀರ್ಷಿಕೆ ಡಿಫರೆಂಟ್ ಆಗಿತ್ತು. ಈಗ ಅದೇ ರೀತಿ ಇನ್ನೊಂದು ಸಿನಿಮಾ ಟೈಟಲ್ ಗಮನ ಸೆಳೆಯುತ್ತಿದೆ. ‘ಭಾರತಿ ಟೀಚರ್ ಏಳನೇ ತರಗತಿ’ (Bharathi Teacher) ಎಂಬುದು ಹೊಸ ಸಿನಿಮಾದ ಶೀರ್ಷಿಕೆ. ಈ ಟೈಟಲ್ ಕುತೂಹಲ ಹುಟ್ಟಿಸುವ ರೀತಿಯಲ್ಲಿದೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಯಿತು. ಸಚಿವ ಸಂತೋಷ್ ಲಾಡ್ ಅವರು ‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ವಿಶೇಷ. ಸಿನಿಮಾದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಜೊತೆ ಸಂತೋಷ್ ಲಾಡ್ (Santosh Lad) ಕೂಡ ಭಾಗಿಯಾಗಿದ್ದರು.
ಸಿರಗುಪ್ಪ ಮೂಲದ ಉದ್ಯಮಿ ರಾಘವೇಂದ್ರ ರೆಡ್ಡಿ ಅವರು ‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ಪೂಜ್ಯಾಯ ಫಿಲ್ಮ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಎಂ.ಎಲ್.ಪ್ರಸನ್ನ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತದ ಜವಾಬ್ದಾರಿ ಕೂಡ ಅವರೇ ನಿಭಾಯಿಸುತ್ತಿದ್ದಾರೆ. ವೆಂಕಟ್ ಗೌಡ ಅವರು ಕ್ರಿಯೇಟೀವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿಹಿಕಹಿ ಚಂದ್ರು, ಕುಮಾರಿ ಯಶಿಕಾ, ಗೋವಿಂದೇಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್, ಬೆನಕಾ ನಂಜಪ್ಪ, ಸೌಜನ್ಯ ಸುನಿಲ್, ರೋಹಿತ್ ರಾಘವೇಂದ್ರ, ಎಂ.ಜೆ. ರಂಗಸ್ವಾಮಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾದಲ್ಲಿ ಜಿಲ್ಲಾಧಿಕಾರಿ ಪಾತ್ರ ನೀಡಲಾಗಿದೆ. ‘ಈ ಸಿನಿಮಾದ ಸಾರಾಂಶ ನನಗೆ ಇಷ್ಟವಾಯಿತು. ನನಗೆ ಡಿಸಿ ಪಾತ್ರ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ನಿರ್ದೇಶಕರೊಂದಿಗೆ ಕೆಲಸ ಮಾಡುವುದು ಇಷ್ಟವಾಗಿದೆ. ಪಾತ್ರಕ್ಕೆ ನಾನು ನ್ಯಾಯ ಒದಗಿಸುತ್ತೇನೆ ಎಂಬ ನಂಬಿಕೆ ಜೊತೆ ಭಯ ಕೂಡ ಇದೆ’ ಎಂದು ಅವರು ಹೇಳಿದ್ದಾರೆ.
‘ಇದು ಒಂದು ಉತ್ತಮ ಸಂದೇಶ ಇರುವ ಸಿನಿಮಾ ಆದ್ದರಿಂದ ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ. ಸಿಹಿಕಹಿ ಚಂದ್ರು ನಟಿಸಿದ ಹಳೆಯ ಸಿನಿಮಾಗಳನ್ನು ನೋಡಿ ಬೆಳೆದವನು ನಾನು. ಈಗಿನ ಕಾಲದಲ್ಲಿ ಸಿನಿಮಾಗಳು ಗೆಲ್ಲುವುದು ಬಹಳ ಕಷ್ಟಕರವಾಗಿದೆ. ಕನ್ನಡ ಸಿನಿಮಾಗಳು ಹೆಚ್ಚು ಬೆಳೆಯಲಿ’ ಎಂದು ಸಂತೋಷ್ ಲಾಡ್ ಅವರು ವಿಶ್ ಮಾಡಿದರು. ಎಂ.ಬಿ. ಹಳ್ಳಿಕಟ್ಟಿ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸುಜಿತ್ ನಾಯಕ್ ಅವರು ಸಂಕಲನ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ‘ದಿ ಡೆವಿಲ್’ ಶೂಟಿಂಗ್; ದರ್ಶನ್ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದ ತಂಡ
ನಿರ್ದೇಶಕ ಪ್ರಸನ್ನ ಅವರು ಕೂಡ ಈ ವೇಳೆ ಮಾತನಾಡಿದರು. ‘ಸಂತೋಷ್ ಲಾಡ್ ಅವರು ನಮ್ಮ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದು ಹೆಗ್ಗಳಿಕೆ. ಇದಕ್ಕೆ ಅನುವು ಮಾಡಿಕೊಟ್ಟಿದ್ದು ವಿ. ನಾಗೇಂದ್ರ ಪಸಾದ್. ಅದಕ್ಕಾಗಿ ಅವರಿಗೂ ಧನ್ಯವಾದ’ ಎಂದು ಅವರು ಹೇಳಿದರು. ಭಾರತಿ ಎಂಬ 7ನೇ ತರಗತಿ ವಿದ್ಯಾರ್ಥಿನಿಗೆ ತನ್ನ ಊರಿನ ಪ್ರತಿಯೊಬ್ಬರು ಕನ್ನಡ ಓದಬೇಕು ಮತ್ತು ಬರೆಯಬೇಕು ಎನ್ನುವ ಕನಸು ಇರುತ್ತದೆ. ಆಕೆಯ ಕಥೆ ‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾದಲ್ಲಿ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.