ಚೆನ್ನೈ: ಭಾರತ ಮತ್ತು ಚೀನಾ ಗಡಿಗಳನ್ನು ಪ್ರತ್ಯೇಕಿಸುವ ವಾಸ್ತವ ನಿಯಂತ್ರಣ ರೇಖೆಯನ್ನು (Line of Actual Control – LAC) ಏಕಪಕ್ಷೀಯವಾಗಿ ಬದಲಿಸುವ ಚೀನಾದ ಹುನ್ನಾರವನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ (S Jaishankar) ಶನಿವಾರ ಮುನ್ನೆಲೆ ತಂದು ಪ್ರಸ್ತಾಪಿಸಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸ್ವತಃ ಕೊವಿಡ್-19 ಪಿಡುಗಿನಿಂದ ಬಳಲುತ್ತಿದ್ದರೂ ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ತನ್ನ ಪ್ರಯತ್ನಗಳನ್ನು ಮುಂದುವರಿಸಿದ ಬಗ್ಗೆ ಪರೋಕ್ಷವಾಗಿ ಭಾರತದ ಅಸಮಾಧಾನವನ್ನು ಹೊರಹಾಕಿದರು.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಮಾತನಾಡಿ, ಉತ್ತರದ ಗಡಿಯಲ್ಲಿ ಚೀನಾ ದೊಡ್ಡಮಟ್ಟದಲ್ಲಿ ಸೇನಾಪಡೆಯನ್ನು ನಿಯೋಜಿಸುವ ಮೂಲಕ ತನ್ನಿಚ್ಛೆಯಂತೆ ಗಡಿ ರೇಖೆ ಬದಲಿಸಲು ಯತ್ನಿಸುತ್ತಿದೆ. ಹಲವು ಒಪ್ಪಂದಗಳನ್ನೂ ಚೀನಾ ಉಲ್ಲಂಘಿಸಿದೆ. ಕೊವಿಡ್ ಪಿಡುಗಿನ ನಡುವೆಯೂ ಮೇ 2020ರಲ್ಲಿ ಏನಾಯಿತು ಎನ್ನುವುದು ಎಲ್ಲರಿಗೂ ನೆನಪಿರಬಹುದು. ನಮ್ಮ ಎದಿರೇಟು ಗಟ್ಟಿಯಾಗಿತ್ತು ಮತ್ತು ದೃಢವಾಗಿತ್ತು ಎಂದು ತಿಳಿಸಿದರು.
ಗಡಿಯಲ್ಲಿ ನಿಯೋಜನೆಯಾಗಿರುವ ಭಾರತದ ಭದ್ರತಾ ಪಡೆಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಯ ನಡುವೆಯೂ ಗಡಿಗಳನ್ನು ರಕ್ಷಿಸುತ್ತಿವೆ. ಯಾವುದೇ ಬಲಕ್ಕೆ ತಲೆಬಾಗದ ದೇಶದ ಬಗ್ಗೆ ಇದೀಗ ವಿಶ್ವಮಟ್ಟದಲ್ಲಿ ಹೆಚ್ಚಿನ ನಿರೀಕ್ಷೆಗಳು ವ್ಯಕ್ತವಾಗುತ್ತಿವೆ. ತನ್ನ ರಾಷ್ಟ್ರೀಯ ಭದ್ರತೆಯೇ ಭಾರತದ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ವಿಶ್ವಮಟ್ಟದಲ್ಲಿ ಭಾರತದ ಪ್ರಾಮುಖ್ಯತೆ ಬಗ್ಗೆ ಪ್ರಸ್ತಾಪಿಸಿದ ಅವರು, ಐತಿಹಾಸಿಕವಾಗಿ ಭಾರತವು ಸದಾ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ತನ್ನದೇ ಹೆಸರು ಹೊಂದಿರುವ ಸಾಗರದಲ್ಲಿ ಭಾರತವು ಎದ್ದು ಕಾಣುತ್ತದೆ. ಇದಕ್ಕೆ ಖಂಡಾಂತರ ಆಯಾಮವೂ ಇದೆ. ನಮ್ಮ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ಏಷ್ಯಾ ಖಂಡದ ಸಂಪರ್ಕ ಯೋಜನೆಗಳು ಜಾರಿಗೆ ಬರುವುದು ಸಾಧ್ಯವೇ ಇಲ್ಲ. ಹಿಂದೂ ಮಹಾಸಾಗರವು ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಪ್ರಸ್ತುತತೆ ಹೊಂದಿದೆ. ಭೂಮಿಯಲ್ಲಿ ತಾನಿರುವ ಸ್ಥಾನವನ್ನು ಭಾರತ ಎನ್ನ ಅನುಕೂಲಕ್ಕೆ ತಕ್ಕಂತೆ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದು ಎಲ್ಲರೂ ಗಮನಿಸುತ್ತಿರುವ ವಿಷಯವಾಗಿದೆ. ಜಾಗತಿಕ ಮಟ್ಟದ ವಿದ್ಯಮಾನಗಳಲ್ಲಿ ಭಾರತದ ಸಹಭಾಗಿತ್ವವು ಹೆಚ್ಚಾದಂತೆ, ಪ್ರಭಾವವೂ ಹೆಚ್ಚಾಗುತ್ತದೆ ಎಂದರು.
ವಾಸ್ತವ ನಿಯಂತ್ರಣ ರೇಖೆಯನ್ನು ಬದಲಿಸುವ ಚೀನಾದ ಹುನ್ನಾರವನ್ನು ಜೈಶಂಕರ್ ಖಂಡಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಆಸ್ಟ್ರಿಯಾದ ಮಾಧ್ಯಮವೊಂದರ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ್ದ ಜೈಶಂಕರ್, ‘ವಾಸ್ತವ ನಿಯಂತ್ರಣ ರೇಖೆಯನ್ನು ಏಕಪಕ್ಷೀಯವಾಗಿ ಬದಲಿಸುವಂತಿಲ್ಲ ಎಂಬ ಒಪ್ಪಂದವಿದೆ. ಇದಕ್ಕೆ ನಾವು ಬದ್ಧರಾಗಿದ್ದೇವೆ. ಆದರೆ ನಮ್ಮ ಎದುರಿರುವವರೂ ಅದನ್ನು ಪಾಲಿಸಬೇಕು. ನಮ್ಮ ಈವರೆಗಿನ ಗ್ರಹಿಕೆಗಳು ನಮ್ಮ ಅನುಭವಗಳಿಂದ ಪ್ರೇರಿತವಾಗಿವೆ’ ಎಂದು ಹೇಳಿದ್ದರು.